ಉಡುಪಿ : ಕರ್ನಾಟಕ ರಾಜ್ಯಾದ್ಯಂತ ಕೋರೋನಾ ಭೀತಿ ಹೆಚ್ಚಾಗುತ್ತಿರುವುದರ ಬೆನ್ನಲ್ಲೇ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಣೆಯಾಗಿದೆ.
ಇದೀಗ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಉಡುಪಿ ಜಿಲ್ಲೆಯಾದ್ಯಂತ ಸೆಕ್ಷನ್ 144 (3) ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಸೋಂಕು ಹೆಚ್ಚಾಗಿ ಹರಡುವುದನ್ನು ತಡೆಗಟ್ಟುವ ಸಲುವಾಗಿ ಜಿಲ್ಲೆಯಾದ್ಯಂತ ಧಾರ್ಮಿಕ ಕಾರ್ಯಕ್ರಮಗಳು, ಜಾತ್ರೆ, ಸಭೆ ಸಮಾರಂಭಗಳು, ಸಾಮೂಹಿಕ ವಿವಾಹ ಕಾರ್ಯಕ್ರಮ, ಸಂತೆ ಮತ್ತು ಇನ್ನಿತರ ಯಾವುದೇ ಕಾರ್ಯಕ್ರಮ ನಡೆಸದಂತೆ ನಿರ್ಬಂಧಕಾಜ್ಞೆ ಹೇರಲಾಗಿದೆ.
ಜಿಲ್ಲಾಧಿಕಾರಿಗಳ ಮುಂದಿನ ಆದೇಶ ಬರುವವರೆಗೂ ಈ ಸೆಕ್ಷನ್ ಜಾರಿಯಲ್ಲಿರುತ್ತದೆ. ಈ ಸಮಯದಲ್ಲಿ ಜನಸಂದಣಿ ಸೇರುವಂತಹ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ. ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವಂತಹ ಜಾತ್ರೆ, ಉತ್ಸವಗಳಲ್ಲಿ ಸಿಬ್ಬಂದಿ ಮಾತ್ರ ಭಾಗವಹಿಸುವಂತೆ ಸೂಚಿಸಲಾಗಿದೆ. ದೇವಾಲಯಗಳಲ್ಲಿ ದೇವರ ದರ್ಶನ ಹೊರತು ಬೇರಾವ ಸೇವೆಯೂ ಲಭ್ಯವಿರುವುದಿಲ್ಲ. ದೇವಾಲಯಗಳಲ್ಲಿ ತಂಗುವುದಕ್ಕೆ ಯಾರಿಗೂ ಅವಕಾಶವಿರುವುದಿಲ್ಲ.
ಜಿಲ್ಲೆಯಾದ್ಯಂತ ಬೀಚ್, ಮತ್ತಿತ್ತರ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಪೂರ್ವನಿಗದಿಯಾಗಿರುವ ಮದುವೆ, ನಿಶ್ಚಿತಾರ್ಥ ಕಾರ್ಯಕ್ರಮಗಳಿಗೆ ಹೆಚ್ಚಿನ ಜನರನ್ನು ಸೇರಿಸದೆ ಸರಳವಾಗಿ ಆಚರಿಸಲು ತಿಳಿಸಲಾಗಿದೆ.