ಮಂಡ್ಯ: ಇಡೀ ಇಂಡಿಯಾಕ್ಕೆ ಒಂದು ಕಾನೂನು ಇದ್ರೆ, ಸಕ್ಕರೆ ನಾಡು ಮಂಡ್ಯಕ್ಕೆ ಒಂದು ಕಾನೂನಿದೆಯಾ? ಹೌದು, ಹೀಗೊಂದು ಪ್ರಶ್ನೆ ಸತ್ಯ ಎನ್ನುವಂತಿದೆ ಇಲ್ಲಿನ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳ ಉದ್ಧಟತನ.
ಯಾವುದೇ ಖಾಸಗಿ ಶಾಲಾ-ಕಾಲೇಜು ಪ್ರಾರಂಭ ಮಾಡದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಡಕ್ ಆದೇಶ ಹೊರಡಿಸಿವೆ. ಆದ್ರೆ ಮಂಡ್ಯ ಜಿಲ್ಲಾ ಕೇಂದ್ರದಲ್ಲಿನ ಬಹುತೇಕ ಶಾಲೆಗಳ ಆಡಳಿತ ಮಂಡಳಿಗೆ ಸರ್ಕಾರದ ಆದೇಶ ಲೆಕ್ಕಕ್ಕೇ ಇಲ್ಲ.
ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸರ್ಕಾರ ದಿನಾಂಕ ನಿಗದಿ ಮಾಡಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸಿ, ಶಾಲೆಗಳನ್ನು ಪ್ರಾರಂಭ ಮಾಡಿವೆ.
ಜೂನ್ 25ರಂದು ಎಸ್.ಎಸ್.ಎಲ್.ಸಿ ಪರೀಕ್ಷೆ ನಿಗದಿಯಾಗಿದೆ. ಹೀಗಾಗಿ ಮಂಡ್ಯ ಶಾಸಕ ಎಂ.ಶ್ರೀನಿವಾಸ್ ಒಡೆತನದ ವಿವೇಕ ವಿದ್ಯಾಸಂಸ್ಥೆ, ರೋಟರಿ ಎಜ್ಯುಕೇಶನ್ ಸೊಸೈಟಿ, ಆದರ್ಶ ಪ್ರೌಢಶಾಲೆ ಸೇರಿದಂತೆ ಜಿಲ್ಲೆಯ ಬಹುತೇಕ ಸ್ಕೂಲ್ಗಳನ್ನು ಓಪನ್ ಮಾಡಿ, ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಆರಂಭಿಸಿದ್ದಾರೆ. ಶಾಲಾ ಕೊಠಡಿಯಲ್ಲೇ ತರಗತಿಗಳನ್ನು ಆರಂಭಿಸಿ ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ಶುರು ಮಾಡಿದ್ದಾರೆ.
ತರಗತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ವಿದ್ಯಾರ್ಥಿಗಳಿಗೆ ಟೀಚಿಂಗ್ ಮಾಡ್ತಿದ್ದಾರೆ. ಆದರೆ, ಪಾಠ ಮಾಡುವ ಶಿಕ್ಷಕರೇ ಸರ್ಕಾರದ ಆದೇಶ ಪಾಲಿಸದೆ, ಮಾಸ್ಕ್ ಧರಿಸದೆ ಪಾಠ, ಪ್ರವಚನ ಮಾಡ್ತಿದ್ದಾರೆ.
ಕಳೆದು ಒಂದು ವಾರದಿಂದಲೇ ಶಾಲೆ ಆರಂಭಿಸಿರೋ ಖಾಸಗಿ ಶಾಲಾ ಆಡಳಿತ ಮಂಡಳಿ, ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆ ತರಗತಿ ನಡೆಸ್ತಿದ್ದಾರೆ.
ಶಾಲೆ ತೆರೆಯಲು ಸರ್ಕಾರದ ಅನುಮತಿ ಇಲ್ಲದಿದ್ರು, ಆಡಳಿತ ಮಂಡಳಿಯಿಂದ ರೂಲ್ಸ್ ಬ್ರೇಕ್ ಆಗ್ತಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಒಪ್ಪದಿದ್ರು, ಶಿಕ್ಷಕರೇ ಮಕ್ಕಳನ್ನು ಶಾಲೆಗೆ ಕರೆಸಿಕೊಂಡು ಪಾಠ ಮಾಡ್ತಿರೋ ಆರೋಪ ಕೇಳಿ ಬರ್ತಿದೆ.
ಕೊರೋನಾ ಭಯದ ನಡುವೆಯೇ ವಿದ್ಯಾರ್ಥಿಗಳು, ಪಾಠ ಕೇಳುವಂತಾಗಿದೆ. ಆದ್ರೆ, ಇದೆಲ್ಲದ್ದಕ್ಕೂ ಕಡಿವಾಣ ಹಾಕಬೇಕಾದ ಶಿಕ್ಷಣ ಇಲಾಖೆ, ಕಣ್ಮುಚ್ಚಿ ಕುಳಿತಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.