ಬೆಂಗಳೂರು: ಶಾಲೆ ಆರಂಭ ಆಗುತ್ತೆ ಅಥವಾ ಇಲ್ಲ ಅಂತಾ ವಿದ್ಯಾರ್ಥಿಗಳು ಗೊಂದಲದಲ್ಲಿ ಇದ್ದರು . ಪೋಷಕರು ಕೂಡ ಮಕ್ಕಳನ್ನು ಶಾಲೆಗೆ ಕಳುಹಿಸಬೇಕೋ ಬೇಡ್ವೋ ಅಂತಾ ಗೊಂದಲದಲ್ಲಿದ್ದರು. ಸರ್ಕಾರ ಮತ್ತೆ ಶಾಲೆಯನ್ನು ತೆರೆಯೋ ಬಗ್ಗೆ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತೆ ಅಂತಾ ವಿದ್ಯಾರ್ಥಿಗಳು, ಪೋಶಕರು ಮತ್ತು ಶಿಕ್ಷಕರು ಕೂಡ ಕಾಯುತ್ತಿದ್ದರು. ಆದರೆ ಇದಕ್ಕೆಲ್ಲಾ ಇಂದು ತೆರೆ ಬಿದ್ದಿದ್ದು, ಜನವರಿ 1 ರಿಂದ ಶಾಲೆ ಆರಂಭ ಫಿಕ್ಸ್ ಆಗಿದೆ.
ಕೊವಿಡ್ ಸಲಹಾ ಸಮಿತಿ ಸಲಹೆಯಂತೆ ಆರಂಭ..! ರಾಜ್ಯದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬರುತ್ತಿದೆ. ಆದರೆ, ಕೊರೋನಾ ರೂಪಾಂತರ ವೈರಸ್ ಎಲ್ಲರಲ್ಲಿ ಆತಂಕ ಹೆಚ್ಚಿಸಿದೆ. ಈ ಮಧ್ಯೆ ಜನವರಿ 1ರಿಂದ ಶಾಲೆ ಆರಂಭ ಫಿಕ್ಸ್ ಅಂತಾ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಾಲಾ-ಕಾಲೇಜು ಆರಂಭ ಕುರಿತು ಚರ್ಚಿಸಲಾಯ್ತು. ಈ ವೇಳೆ ಸಚಿವ ಸುರೇಶ್ ಕುಮಾರ್ ಜನವರಿ 1 ರಿಂದ ಶಾಲೆ ಆರಂಭ ಮಾಡೋಣ. ಸದ್ಯಕ್ಕೆ ದಿನಾಂಕ ಬದಲಾಯಿಸೋದು ಬೇಡ. ಮುಂಜಾಗ್ರತಾ ಕ್ರಮಗಳೊಂದಿಗೆ ಶಾಲಾ-ಕಾಲೇಜು ಆರಂಭಿಸೋಣ ಅಂತಾ ಸಲಹೆ ನೀಡಿದರು.
ಕಲಬುರಗಿಯಲ್ಲಿ ಶಾಲಾ-ಕಾಲೇಜು ಆರಂಭಿಸಲು ಸಿದ್ಧತೆ ನಡೆದಿದ್ದು, ಜಿಲ್ಲಾ ಪಂಚಾಯತ್ ಸಿಇಓ ಡಾ.ಪಿ ರಾಜಾ ಸುದ್ಧಿಗೋಷ್ಠಿ ಮಾಡಿದರು. ಜನವರಿ 1 ರಿಂದ ಶಾಲೆ ಆರಂಭಿಸಲು ಸರ್ಕಾರದಿಂದ ನಿರ್ದೇಶನ ಬಂದಿದೆ. 6 ರಿಂದ 9 ನೇ ತರಗತಿಗಳು ವಾರದಲ್ಲಿ 3 ದಿನ ನಡೆಸಲು ಪ್ಲಾನ್ ಮಾಡಿದ್ದೇವೆ. ಕೊವೀಡ್ನ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುವುದು. ಮನೆ ಮನೆಗೆ ತೆರಳಿ ಪೋಷಕರಿಗೆ ತಿಳುವಳಿಕೆ ನೀಡುತ್ತೇವೆ. ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡುತ್ತೇವೆ. ಶಾಲೆಯಲ್ಲಿ ಐಸೋಲೇಷನ್ ರೂಂ ಮಾಡಿ ಅಲ್ಲಿಯೇ ತಪಾಸಣೆ ಮಾಡುತ್ತೇವೆ. ಶಾಲೆಯಲ್ಲಿ ಬಿಸಿ ನೀರು ಕೊಡುವ ವ್ಯವಸ್ಥೆ ಕೈಗೊಳ್ಳುತ್ತೇವೆ. ಜೊತೆಗೆ ಎಲ್ಲಾ ಶಿಕ್ಷಕರಿಗೂ RT-PCR ಪರೀಕ್ಷೆ ಮಾಡಿಸಲಾಗುತ್ತಿದೆ. ಮಕ್ಕಳು ತಮ್ಮ ಶಾಲೆಗೆ ಹೋಗಬೇಕು ಅಂತೇನಿಲ್ಲ. ಹತ್ತಿರ ಇರೋ ಶಾಲೆಗೆ ಹೋಗಬಹುದು. ಆದರೆ ಶಾಲೆಯಲ್ಲಿ ಪ್ರಾರ್ಥನೆ ಹಾಗೂ ಆಟ ಇರುವುದಿಲ್ಲ ಎಂದರು.
ಹಾವೇರಿಯಲ್ಲೂ ಜನವರಿ 1 ರಿಂದ ಸರ್ಕಾರದ ಮಾರ್ಗಸೂಚಿಯಂತೆ ಶಾಲೆ ಆವರಣದಲ್ಲಿ 6 ರಿಂದ 9 ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ಪಾರ್ಟ್-2 ಕಾರ್ಯಕ್ರಮ ಪ್ರಾರಂಭಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 10 ನೇ ತರಗತಿ ವಿದ್ಯಾರ್ಥಿಗಳಿಗೆ ನಿಗದಿಪಡಿಸಿದ ವೇಳಾಪಟ್ಟಿಯಂತೆ ಅರ್ಧದಿನ ತರಗತಿ ನಡೆಸುತ್ತೇವೆ ಅಂತಾ ಜಿಲ್ಲಾಧಿಕಾರಿ ಸಂಜಯ್ ಶೆಟ್ಟಣ್ಣವರ ಹೇಳಿದ್ದಾರೆ. 1 ತರಗತಿಯಲ್ಲಿ 15 ರಿಂದ 20 ವಿದ್ಯಾರ್ಥಿಗಳು ಮಾತ್ರ ಇರಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ನರ್ಸಿಂಗ್ ಕಾಲೇಜು ಆರಂಭ ಹಿನ್ನೆಲೆ ಕಾಲೇಜ್ಗೆ ಹಾಜರಾಗಬೇಕಿದ್ದ ವಿದ್ಯಾರ್ಥಿಗಳು 72 ಗಂಟೆ ಮುಂಚಿತವಾಗಿ ನೆಗೆಟಿವ್ ರಿಪೋರ್ಟ್ ತರೋದು ಕಡ್ಡಾಯ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಕೇರಳ ಮೂಲದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹೀಗಾಗಿ ಆರ್ಟಿಪಿಸಿಆರ್ ಟೆಸ್ಟ್ ಕಡ್ಡಾಯ ಅಂತಾ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯಾರಿ ತಿಳಿಸಿದರು.
ಸ್ಕೂಲ್ ಆರಂಭ ಕುರಿತು ಸರ್ಕಾರದ ನಿರ್ಧಾರಕ್ಕೆ ಜೆಡಿಎಸ್ ನಾಯಕರೂ ಆಗಿರುವ ಮಾಜಿ ಶಾಸಕ ವೈಎಸ್ವಿ ದತ್ತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಶಾಲೆ ಮಕ್ಕಳಿಗೆ ನಾನೇ ಆನ್ಲೈನ್ ತರಗತಿ ಮಾಡಿದ್ದೇನೆ. ಆದರೆ 40 ವರ್ಷ ಪಾಠ ಮಾಡಿದ ನನಗೆ ಗೊಂದಲವಿದೆ. ನಾಳೆ ಯಾವ ಪಾಠ ಕಡಿತವಾಗುತ್ತೆ ಅಂತ ಗೊತ್ತಿಲ್ಲ. ಸುರೇಶ್ ಕುಮಾರ್ ಅವರು ಸಾಧಕ ಬಾಧಕ ಕುರಿತು ಚರ್ಚಿಸಲಿ. ಶೈಕ್ಷಣಿಕ ವರ್ಷವೇ ಇಲ್ಲದೇ ‘ಶೂನ್ಯ ಅಕಾಡೆಮಿ ವರುಷ’ ಎಂದು ಘೋಷಿಸಲಿ. ಈಗಾಗಲೇ ಶೈಕ್ಷಣಿಕ ವರುಷದ ಶೇ.70 ಭಾಗ ಮುಗಿದಿದೆ. ಶೇ.30 ರಷ್ಟು ಆಫ್ ಲೈನ್ ಪಾಠ ಮಾಡಿದರೆ, ಮಕ್ಕಳಿಗೆ ಸಂಕಷ್ಟ ಎದುರಾಗಲಿದೆ ಅಂತಾ ದತ್ತ ಅಸಮಾಧಾನ ಹೊರಹಾಕಿದ್ದಾರೆ.
ಇನ್ನೂ, ಕೊರೋನಾ ರೂಪಾಂತರ ವೈರಸ್ ಕುರಿತು ಪೋಷಕರಲ್ಲೂ ಆತಂಕ ಇದೆ. ಮಕ್ಕಳನ್ನು ಹೇಗೆ ಶಾಲೆಗೆ ಕಳುಹಿಸೋದು ಅಂತಾ ಯೋಚಿಸುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಶಾಲೆ ಆರಂಭ ಮಾಡುತ್ತೇವೆ ಅಂತಾ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಆಯಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಜಿಲ್ಲಾಡಳಿತವೇನೋ ಸಿದ್ಧತೆ ಮಾಡಿಕೊಳ್ತಿದೆ. ಆದರೆ, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರಾ? ಅನ್ನೋದನ್ನು ಕಾದು ನೋಡಬೇಕಿದೆ.