ಸ್ಯಾಂಡಲ್ವುಡ್ನಲ್ಲಿ ಮುಂಗಾರು ಮಳೆ ಸುರಿಸಿ ಗೋಲ್ಡನ್ ಹಿಟ್ ಕೊಟ್ಟ ಗಣಿ- ಭಟ್ರು ಜೋಡಿ ಇದೀಗ ಎರಡನೇ ಸಲ ಗಾಳಿಪಟ ಹಾರಿಸೋಕೆ ರೆಡಿಯಾಗಿರೋ ವಿಷ್ಯ ನಿಮಗೆಲ್ಲಾ ಗೊತ್ತೇ ಇದ್ಯಲ್ಲ. ಸದ್ಯ ಬುಲೆಟ್ ಜೊತೆ ಎಕ್ಸಾಂ ಬರೆದಿರೋ ಗಾಳಿಪಟ 2 ಟೀಮ್ ಬಾಯ್ ಬಡ್ಕೊಂಡ್ ಫುಲ್ ಗದ್ದಲ ಮಾಡಿದ್ದಾರೆ.
ಗೋಲ್ಡನ್ ಸ್ಟಾರ್ ಹಾಗೂ ಯೋಗ ರಾಜ್ ಭಟ್ ಸ್ಯಾಂಡಲ್ವುಡ್ನ ಸೂಪರ್ ಹಿಟ್ ಕಾಂಬಿನೇಶನ್. ಮುಂಗಾರು ಮಳೆಯಲ್ಲಿ ಗಾಳಿಪಟ ಹಾರಿಸಿ, ಮುಗುಳು ನಗೆ ಬೀರಿ ಈಗ ಮತ್ತೆ ಗಾಳಿಪಟ ಹಾರ್ಸೋಕೆ ಸಜ್ಜಾಗಿದ್ದಾರೆ. ಯೆಸ್, ಈ ಜೋಡಿಯ ಬಹುನಿರೀಕ್ಷಿತ ಸಿನಿಮಾ ಗಾಳಿಪಟ 2. ತನ್ನದೇ ಆದ ವಿಶೇಷತೆಗಳಿಂದ ಸಾಕಷ್ಟು ಸದ್ದು ಮಾಡ್ತಿದೆ.
ಈ ಹಿಂದೆ ಬಂದಿದ್ದ ಗಾಳಿಪಟ ಸಿನಿಮಾ ಕಥೆ, ಸ್ಕ್ರೀನ್ ಪ್ಲೇ, ಮೂರೂ ಜನ ನಾಯಕರ ಕಾಮಿಡಿ ಕಥೆ, ಸಾಂಗ್ಸ್ ಎಲ್ಲದ್ರಲ್ಲೂ ಸಿನಿಪ್ರಿಯರಿಗೆ ಸಖತ್ ಎಂಟರ್ಟೈನ್ಮೆಂಟ್ ನೀಡಿತ್ತು. ಹೀಗಾಗಿ ಇದೀಗ ಗಾಳಿಪಟ 2 ಸಿನಿಮಾ ಬಗ್ಗೆಯೂ ಬಹಳಷ್ಟು ನಿರೀಕ್ಷೆಗಳಿವೆ. ಈಗಾಗ್ಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಮಾಡಿ ಸಿನಿಮಾ ಬಿಡುಗಡೆಗೆ ಸಜ್ಜಾಗಿರೋ ಚಿತ್ರತಂಡ ಸದ್ಯ ಚಿತ್ರದ ಮೊದಲ ಲಿರಿಕಲ್ ಸಾಂಗ್ನ್ನು ರಿವೀಲ್ ಮಾಡಿದೆ.
ಗಾಳಿಪಟ 2 ಚಿತ್ರತಂಡ ಸುದ್ದಿಗೋಷ್ಟಿ ನಡೆಸಿ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿದೆ. ಚಿತ್ರದ ಮೂವರು ನಾಯಕರು ಕಾಲೇಜ್ ಎಕ್ಸಾಂ ಬಗ್ಗೆ ಪೇಚಾಡೋ ಹಾಡನ್ನು ಭಟ್ರು ತಮ್ಮದೇ ಸ್ಟೈಲ್ ನಲ್ಲಿ ಗೀಚಿದ್ದಾರೆ. ಪರೀಕ್ಷೆಗಳಿಗೆ, ಎಕ್ಸಾಂ ಪೇಪರ್ಸ್ಗೆ, ಪಾಠ ಮಾಡೋ ಲೆಕ್ಚರರ್ಸ್ಗೂ ಸೇರ್ಸಿ ಹೋಲ್ ಸೇಲ್ ಆಗಿ ಉಗಿದು ಉಪ್ಪಿನಕಾಯಿ ಹಾಕಿರೋ ಭಟ್ರು, ಗಣೇಶ್, ದಿಗಂತ್, ಪವನ್ ಕುಮಾರ್ ಜೊತೆ ಸೇರಿ ತಾವೂ ಬಾಯ್ ಬಡ್ಕೊಂಡಿದ್ದಾರೆ.
ವಿಶೇಷ ಅಂದ್ರೆ ಈ ಸಾಂಗ್ ನಲ್ಲಿ ನಮ್ಮನ್ನೆಲ್ಲಾ ಅಗಲಿದ ನಟ ಬುಲೆಟ್ ಪ್ರಕಾಶ್ ಕೂಡ ಕಾಣಿಸಿಕೊಂಡಿದ್ದಾರೆ. ಆ್ಯಸ್ ಯೂಶುವಲ್ ಅವ್ರ ಕಾಮಿಡಿ ಕಚಗುಳಿ ಈ ಸಾಂಗ್ನಲ್ಲೂ ಇದೆ. ಭಟ್ರ ಸೂಪರ್ ಲಿರಿಕ್ಸ್ ಜೊತೆಗೆ ಮ್ಯಾಜಿಕಲ್ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯಾರ ರಿದಮಿಕ್ ಮ್ಯೂಸಿಕ್ ಟಚ್ ಈ ಹಾಡಿಗಿದೆ. ಸಂಗೀತ ಸಂಯೋಜಿಸೋದಷ್ಟೇ ಅಲ್ಲದೆ, ವಿಜಯ್ ಪ್ರಕಾಶ್ ಜೊತೆಗೆ ಅರ್ಜುನ್ ಜನ್ಯಾ ಕೂಡ ಈ ಹಾಡಿಗೆ ಧ್ವನಿಯಾಗಿದ್ದಾರೆ.
ಅಂದಹಾಗೆ ಗಾಳಿಪಟ ಸಿನಿಮಾದಲ್ಲಿದ್ದ ಕೆಲ ಪಾತ್ರಗಳು ಇದೀಗ ಅದ್ರ ಸೀಕ್ವೆಲ್ನಲ್ಲೂ ಮುಂದುವರೆದಿದೆ. ಗಣೇಶ್, ದಿಗಂತ್ ಜೊತೆಗೆ ನಟ ಅನಂತ್ ನಾಗ್ ಕೂಡ ಗಾಳಿಪಟ 2 ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಇನ್ನೂ ಚಿತ್ರದ ನಾಯಕಿಯರಾಗಿ ನಿಶ್ವಿಕಾ ನಾಯ್ಡು, ಶರ್ಮಿಳಾ ಮಾಂಡ್ರೆ, ಹಾಗೂ ವೈಭವಿ ಶಾಂಡಿಲ್ಯ ಬಣ್ಣ ಹಚ್ಚಿದ್ದಾರೆ. ಜೊತೆಗೆ ಇನ್ನೂ ಸಾಕಷ್ಟು ಜನ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸೂರಜ್ ಪ್ರೊಡಕ್ಷನ್ಸ್ ಬ್ಯಾನರ್ನಡಿಯಲ್ಲಿ ಶ್ರೀಮತಿ ಉಮಾ.ಎಂ ರಮೇಶ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸಂತೋಷ್ ರೈ ಪತಾಜೆ ಈ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. ಒಟ್ಟಾರೆ ಸದ್ಯ ಗಾಳಿಪಟ 2 ಸಿನಿಮಾದ ಫಸ್ಟ್ ಲಿರಿಕಲ್ ಸಾಂಗ್ ಹೊರಬಂದಿದ್ದು ಹಲ್ಚಲ್ ಮಾಡ್ತಿದೆ. ಯೂಟ್ಯೂಬ್ನಲ್ಲಿ ಲಕ್ಷ ಲಕ್ಷ ವೀಕ್ಷಣೆ ಪಡೆದು, ಸಿನಿಪ್ರಿಯರಿಂದ ಹೆಚ್ಚು ಮೆಚ್ಚುಗೆ ಪಡೆದುಕೊಳ್ತಿದೆ.
ಚಂದನ.ಎಸ್, ಎಂಟರ್ಟೈನ್ಮೆಂಟ್ ಬ್ಯೂರೋ, ಪವರ್ ಟಿವಿ