ಆರೇ ಆರು ತಿಂಗಳಲ್ಲಿ ಸೆಂಚುರಿ ಬಾರಿಸಿದ ಸ್ಯಾಂಡಲ್​ವುಡ್​..!

0
108

ಸಿನಿ ದುನಿಯಾದಲ್ಲಿ ವರ್ಷದಿಂದ ವರ್ಷಕ್ಕೆ ರಿಲೀಸ್ ಆಗೋ ಸಿನಿಮಾಗಳು ಹೆಚ್ಚಾಗುತ್ತಲೇ ಇವೆ. ಸ್ಯಾಂಡಲ್​ವುಡ್​ನಲ್ಲಿ ಕಳೆದ ವರ್ಷ ಅಂದ್ರೆ 2018ರಲ್ಲಿ 222 ಸಿನಿಮಾಗಳು ರಿಲೀಸ್ ಆಗಿದ್ದವು. ಈ ಬಾರಿ ಆ ರೆಕಾರ್ಡ್ ಬ್ರೇಕ್ ಆಗೋ ಸಾಧ್ಯತೆ ಇದೆ. ಯಾಕಂದ್ರೆ, ಅರ್ಧವಾರ್ಷಿಕ ಸಂಭ್ರಮದಲ್ಲಿ ಶತಕ ಬಾರಿಸುವ ಹೊಸ್ತಿಲಿನಲ್ಲಿ ಸ್ಯಾಂಡಲ್​ವುಡ್ ಇದೆ.

ಈ ವರ್ಷ ಚಂದನವನದಲ್ಲಿ ಈಗಾಗಲೇ 88 ಸಿನಿಮಾಗಳು ರಿಲೀಸ್ ಆಗಿವೆ. ಅರ್ಧವಾರ್ಷಿಕ ಜರ್ನಿ ಮುಗಿಯಲು ಇನ್ನೂ ಮೂರು ವಾರ ಮಾತ್ರ ಬಾಕಿ ಇದ್ದು, ವಾರಕ್ಕೆ ಕನಿಷ್ಠ 4 ಸಿನಿಮಾಗಳು ರಿಲೀಸ್ ಆದ್ರೂ ಅಜೇಯ ಶತಕ ದಾಖಲಾಗುತ್ತೆ. ಇದು ಸಾಧ್ಯವಾದ್ರೆ ಹೊಸ ದಾಖಲೆ ನಿರ್ಮಾಣವಾದಂತಾಗುತ್ತದೆ.

ಇನ್ನು, ಈಗಾಗಲೇ ರಿಲೀಸ್ ಆಗಿರೋ ಸಿನಿಮಾಗಳನ್ನ ವಿಶ್ಲೇಷಣೆ ಮಾಡೋದಾದ್ರೆ, ಯಾವ ಸಿನಿಮಾಗಳು ನಿರೀಕ್ಷೆಗೆ ಮೀರಿದ ಯಶಸ್ಸನ್ನು ಗಳಿಸಿಲ್ಲ. ಹಿರಿಯ ನಿರ್ದೇಶಕ ದೊರೆ-ಭಗವಾನ್ 20 ವರ್ಷಗಳ ಬಳಿಕ ಆ್ಯಕ್ಷನ್ ಕಟ್ ಹೇಳಿದ್ದ ‘ಆಡುವ ಗೊಂಬೆ’ ಚಿತ್ರದ ಮೂಲಕ ಈ ವರ್ಷದ ಸ್ಯಾಂಡಲ್​ವುಡ್ ಸಿನಿಯಾನ ಶುರುವಾಯ್ತು. 85ನೇ ವಯಸ್ಸಲ್ಲಿ ದೊರೆ ಭಗವಾನ್ ನಿರ್ದೇಶನ ಮಾಡಿದ್ದಾರೆ ಅನ್ನೋದನ್ನು ಮೆಚ್ಚಲೇ ಬೇಕು. ಆದ್ರೆ, ಸಿನಿಮಾ ಮಾತ್ರ ಹೇಳಿಕೊಳ್ಳುವಂತಾ ಸಕ್ಸಸ್ ಪಡೀಲಿಲ್ಲ.

ಮಲೆಯಾಳಂನ ಒಪ್ಪಂ ರಿಮೇಕ್ ‘ಕವಚ’ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿತ್ತು. ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅಭಿನಯದ ಕವಚ ಒಂದು ಹಂತದ ಸಕ್ಸಸ್ ಕಂಡರೂ ಹೆಚ್ಚು ದಿನ ಥಿಯೇಟರ್​ನಲ್ಲಿ ಉಳಿದುಕೊಳ್ಳಲಿಲ್ಲ.

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್​ ಅಭಿನಯದ ‘ನಟಸಾರ್ವಭೌಮ’ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’, ಗೋಲ್ಡನ್​ ಸ್ಟಾರ್ ಗಣೇಶ್ ನಟನೆಯ ’99’, ಒಂದು ರೇಂಜ್​ಗೆ ಹಿಟ್ ಆದ್ವು. ಅನಂತ್​​​ ನಾಗ್ , ರಿಶಿ ನಟನೆಯ ಕವಲುದಾರಿ, ರಾಘವೇಂದ್ರ ರಾಜ್​ಕುಮಾರ್ ಮತ್ತು ಆರ್​ ಜೆ ರೋಹಿತ್ ನಟನೆಯ ತ್ರಯಂಬಕಂ ಗಮನ  ಸೆಳೆದವು.

ಹೊಸ ನಿರ್ದೇಶಕರ ಸಾಹಸಕ್ಕೆ ಸಿನಿರಸಿಕರು ಶಹಬ್ಬಾಶ್ ಎಂದಿದ್ದಾರೆ. ಕೆಮೆಸ್ಟ್ರಿ ಆಫ್​ ಕರಿಯಪ್ಪ, ಮೂಕ ವಿಸ್ಮಿತ, ಒಂದ್ ಕಥೆ ಹೇಳ್ಲಾ? ಅಡಚಣೆಗಾಗಿ ಕ್ಷಮಿಸಿ, ಸೂಜಿದಾರ. ಗಿಣಿ ಹೇಳಿದ ಕಥೆ, ಪ್ರೀಮಿಯರ್ ಪದ್ಮಿನಿಯನ್ನು ಸಿನಿಪ್ರಿಯರು ಇಷ್ಟಪಟ್ಟಿದ್ದಾರೆ. ಸೀತಾರಾಮ ಕಲ್ಯಾಣ, ಪಂಚತಂತ್ರ, ಬಜಾರ್, ಚಂಬಲ್, ಉದ್ಘರ್ಷ, ಪಡ್ಡೆಹುಲಿ, ಕಮರೊಟ್ಟು ಚೆಕ್‌ಪೋಸ್ಟ್‌’ ಲಂಬೋದರ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ನಟನೆಯ ಚೊಚ್ಚಲ ಸಿನಿಮಾ ಅಮರ್‌ಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ.

ರಿಷಬ್​ ಶೆಟ್ಟಿ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಬೆಲ್​ಬಾಟಮ್​ ನಗೆ ಕಡಲಿನಲ್ಲಿ ತೇಲಿಸುತ್ತಾ, ಸಸ್ಪೆನ್ಸ್ ಕಾದಿರಿಸುತ್ತಾ ಸಿನಿರಸಿಕರ ಮನ ತಲುಪಿತು. ಲಾಕ್, ಮಿಸ್ಡ್ ಕಾಲ್‌’, ಭೂತಕಾಲ,ಮಟಾಶ್‌, ತ್ರಯೋದಶ’, ಗಹನ, ಅನುಕ್ತ, ಕಳ್ಬೆಟ್ಟದ ದರೋಡೆಕೋರರು’,ಅಮ್ಮನ ಮನೆ, ಅರಬ್ಬೀ ಕಡಲ ತೀರದಲ್ಲಿ, ಡಾಟರ್‌ ಆಫ್ ಪಾರ್ವತಮ್ಮ ಸಿನಿಮಾಗಳನ್ನು ಜನ ಸ್ವೀಕರಿಸಿದ್ರು. ಆದ್ರೆ, ಭಾರೀ ಯಶಸ್ಸು ಮಾತ್ರ ಸಿಗಲಿಲ್ಲ.

ದಿಗಂತ್ ಅಭಿನಯದ ಫಾರ್ಚುನರ್, ವಿಜಯ್ ರಾಘವೇಂದ್ರ ನಟನೆಯ ಧರ್ಮಸ್ಯ, ವಿನೋದ್ ಪ್ರಭಾಕರ್ ನಟನೆಯ ರಗಡ್ ನಿರೀಕ್ಷೆ ಮೂಡಿಸಿದಷ್ಟರ ಮಟ್ಟಿಗೆ ಸಕ್ಸಸ್ ಕಂಡಿಲ್ಲ.

ಇದಿಷ್ಟು ಅರ್ಧವಾರ್ಷಿಕ ಸ್ಯಾಂಡಲ್​ವುಡ್ ಜರ್ನಿಯಾದ್ರೆ, ಉಳಿದ ಅರ್ಧವರ್ಷದಲ್ಲಿ, ಅರ್ಥಾತ್ ಇನ್ನುಳಿದ ಆರು ತಿಂಗಳುಗಳಲ್ಲಿ ಸ್ಟಾರ್ ನಟರ ಸಿನಿಮಾಗಳ ಅಬ್ಬರ ಜೋರಾಗಿದೆ. ದರ್ಶನ್ ಅಭಿನಯದ ಕುರುಕ್ಷೇತ್ರ, ಸುದೀಪ್ ಅಭಿನಯದ ಪೈಲ್ವಾನ್, ಪುನೀತ್​​​ ರಾಜ್​​ಕುಮಾರ್​​ ಅಭಿನಯದ ಯುವರತ್ನ, ಶ್ರೀಮುರಳಿ ಅಭಿನಯದ ಭರಾಟೆ, ರಕ್ಷಿತ್ ಶೆಟ್ಟಿ ನಟನೆಯ ಅವನೇ ಶ್ರೀಮನ್ನಾರಾಯಣ, ಧ್ರುವಸರ್ಜಾ ನಟನೆಯ ಪೊಗರು ಸಿನಿಮಾಗಳು ಭಾರಿ ನಿರೀಕ್ಷೆಯನ್ನು ಹುಟ್ಟಿಸಿವೆ. ಈ ಸಿನಿಮಾಗಳಲ್ಲಿ ಕೆಲವು ಸಿನಿಮಾಗಳಂತೂ ಸ್ಯಾಂಡಲ್​ ವುಡ್​​ನ ಬ್ರಾಂಡ್​ ವ್ಯಾಲ್ಯುವನ್ನು ಹೆಚ್ಚಿಸೋದ್ರಲ್ಲಿ ನೋ ಡೌಟ್​.

 

 

 

LEAVE A REPLY

Please enter your comment!
Please enter your name here