ರೋಮಾಂಚನಗೊಳಿಸಿದ ಎತ್ತಿನ ಗಾಡಿ ಓಟದ ಸ್ಪರ್ಧೆ

0
413

ಅಲ್ಲಿ ಜನರ ಕೇಕೆ, ಚಪ್ಪಾಳೆ, ನಡುವೆ ಕೂಗಾಟ.. ಇದರ ಮಧ್ಯೆ ಹೋಯ್ ಹೋಯ್ ಎಂಬ ಕೂಗು.. ಆ ಮೈದಾನ ತುಂಬೆಲ್ಲಾ ಧೂಳು! ಬಿಸಿಲು ಮತ್ತು ಧೂಳಿನ ಮಧ್ಯೆ ನಿಂತ ಜನರ ಪ್ರೋತ್ಸಾಹದ ಚೀರಾಟ.. ಇದೆಲ್ಲದರ ನಡುವೆ, ಗೆದ್ದಂತಹ ಎತ್ತುಗಳಿಗೆ ಶಹಬಾಷ್ ಗಿರಿಯ ಮಾತುಗಳು.
ಮೈದಾನದಲ್ಲಿ ಧೂಳೆಬ್ಬಿಸಿ ಓಡುತ್ತಿದ್ದ ಎತ್ತಿನ ಗಾಡಿಗಳು ನೋಡುಗರಿಗೆ ರಂಜನೆ ನೀಡುತ್ತಿದ್ದವು. ಅಲ್ಲದೆ ಅಲ್ಲಿದ್ದ ನೋಡುಗರು ಕೇಕೆ, ಸಿಳ್ಳೆ, ಚಪ್ಪಾಳೆ ಹೊಡೆಯುವ ಮೂಲಕ ಎತ್ತುಗಳಿಗೆ ಹಾಗೂ ಓಡಿಸುತ್ತಿದ್ದವರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಎತ್ತಿನ ಗಾಡಿ ಓಡಿಸುತ್ತಿದ್ದವರು, 
ಗೆಲುವಿನ ದಾರಿಗಾಗಿ ತಮ್ಮ ಎತ್ತುಗಳಿಗೆ ಚಾವಟಿ ಬೀಸಿ ಹುರಿದುಂಬಿಸುತ್ತಿದ್ದರು. ಬಿಸಿಲು ಮತ್ತು ಧೂಳಿನ ನಡುವೆ ನಿಂತಂತಹ ಜನರು ಪ್ರೋತ್ಸಾಹದ ಚೀರಾಟದ ನಡುವೆ ಎತ್ತಿನ ಗಾಡಿಗಳು ಲಂಗು ಲಗಾಮಿಲ್ಲದೇ ಓಡುತ್ತಿದ್ದವು. ಹೌದು, ಇವೆಲ್ಲವು ಕಂಡು ಬಂದಿದ್ದು, ಶಿವಮೊಗ್ಗದಲ್ಲಿ.
ಶಿವಮೊಗ್ಗದ ಅಬ್ಬಲಗೆರೆ ಗ್ರಾಮದಲ್ಲಿ ಸಹ್ಯಾದ್ರಿ ಉತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಎತ್ತಿನ ಗಾಡಿ ಓಟದ ಸ್ಪರ್ಧೆ ನಿಜಕ್ಕೂ ನೋಡುಗರನ್ನ ರೋಮಾಂಚನಗೊಳಿಸಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಲು ತಮ್ಮ ಎತ್ತುಗಳನ್ನು ತಯಾರಿ ಮಾಡಿ, ಹುರುಪು ತುಂಬಿ ರೈತರು ಬಂದಿದ್ದರು. ಅಲ್ಲದೇ, ತಮ್ಮ ತಮ್ಮ ಗಾಡಿಗಳನ್ನು ಕೂಡ ಬಲೂನ್ ಹಾಗೂ ಬಾಳೆ ದಿಂಡಿನಿಂದ ಶೃಂಗರಿಸಿ, ಸ್ಪರ್ಧೆಯಲ್ಲಿ ಭಾಗವಹಿಸಲು ಆಗಮಿಸಿದ್ದರು.

ಅತ್ತ ಏರ್ ಗನ್ ನಿಂದ ಗುಂಡು ಹಾರಿಸಿದ ಕೂಡಲೇ, ಎತ್ತುಗಳು ಎರ್ರಾಬಿರ್ರಿಯಾಗಿ ಓಡಲು ಆರಂಭಿಸಿದವು. ಕೆಲವು ಎತ್ತುಗಳು ಸ್ಪರ್ಧೆಗೆ ಗಾಡಿ ಕಟ್ಟುವ ಮುನ್ನವೇ ಅಡ್ಡಾದಿಡ್ಡಿಯಾಗಿ ಓಡಿದವು. ಇನ್ನು ಕೆಲವು ರೇಸ್ ನಲ್ಲಿ ಓಡುತ್ತಿದ್ದಾಗಲೇ, ಗಾಡಿಯಲ್ಲಿನ ಹಗ್ಗವನ್ನು ತುಂಡರಿಸಿಕೊಂಡು, ಬೇಕಾಬಿಟ್ಟಿಯಾಗಿ ಓಡಲು ಆರಂಭಿಸಿದವು. ಇನ್ನು ಕೆಲವು ಎತ್ತುಗಳಂತೂ ರೇಸ್​ನ ಮೈದಾನ ಬಿಟ್ಟು ಹೊರಗೆ ಓಡಿದವು.

ಎತ್ತುಗಳ ಬೇಕಾಬಿಟ್ಟಿ ಓಟವನ್ನ ಕಂಡ ಜನರು ಧಿಕ್ಕಾಪಾಲಾಗಿ ಓಡುತ್ತಿದ್ದರು. ಇನ್ನೂ ಕೆಲವರು ಧೈರ್ಯವಂತ ಪ್ರೇಕ್ಷಕರು, ಎತ್ತುಗಳ ಮೂಗುದಾರ ಹಿಡಿದು, ನಿಲ್ಲಿಸಿ, ಸ್ಪರ್ಧೆಗೆ ವಾಪಾಸ್ ಕರೆತರುತ್ತಿದ್ದರು. ಇವೆಲ್ಲವೂ ಇಲ್ಲಿ ಸರ್ವೇ ಸಾಮಾನ್ಯವಾಗಿದ್ದರೂ, ಜನರು ಮಾತ್ರ ಫುಲ್ ದಿಲ್ ಖುಷ್ ಆಗಿದ್ರು. ಅದರಂತೆ, ಒಟ್ಟು ಎತ್ತಿನ ಗಾಡಿ ಓಟದ ಸ್ಪರ್ಧೆಯಲ್ಲಿ, 23 ಗಾಡಿಗಳು ಭಾಗವಹಿಸಿದ್ದವು. ಇದರಲ್ಲಿ, ಸುರಹೊನ್ನೆಯ ಯೋಗರಾಜ್ ರ ಜೋಡಿ ಎತ್ತುಗಳು ಪ್ರಥಮ ಬಹುಮಾನ ಗಳಿಸಿದ್ರೆ, ರಾಮನಗರದ ರುದ್ರಪ್ಪ ಎಂಬುವವರ ಎತ್ತುಗಳು 2 ನೇ ಬಹುಮಾನ ಗಳಿಸಿದವು. ಬೀರನಕೆರೆಯ ಹನುಮಾನಾಯ್ಕ್ ಅವರ ಜೋಡೆತ್ತುಗಳು, ತೃತಿಯ ಬಹುಮಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇವೆಲ್ಲವನ್ನೂ ಕಂಡ ಗ್ರಾಮದ ಹಿರಿಯರು, ಎತ್ತಿನ ಗಾಡಿ ಓಟ ಸ್ಪರ್ಧೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ರು.

-ಗೋ.ವ. ಮೋಹನಕೃಷ್ಣ, ಶಿವಮೊಗ್ಗ

LEAVE A REPLY

Please enter your comment!
Please enter your name here