ಶಿವಮೊಗ್ಗ: ರೈತ ಮತ್ತು ಕಾರ್ಮಿಕ ವಿರೋಧಿಯಾಗಿರುವ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿ ಜ. 26 ರಂದು ಬೆಂಗಳೂರಿನಲ್ಲಿ ಬೃಹತ್ ಜನ-ಗಣರಾಜ್ಯೋತ್ಸವ ಪೆರೇಡ್ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ತಿಳಿಸಿದ್ದಾರೆ.
ದೇಶದ್ರೋಹಿ ಕಾಯ್ದೆಗಳನ್ನು ವಿರೋಧಿಸಿ, ದೆಹಲಿಯ ಗಡಿಯಲ್ಲಿ ರೈತರು ಕಳೆದ 58 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, 500 ಕ್ಕೂ ರೈತ ಸಂಘಟನೆಗಳು ಚಾರಿತ್ರಿಕ ಹೋರಾಟವನ್ನು ನಡೆಸುತ್ತಿವೆ. ಈ ಹೋರಾಟವನ್ನು ಬೆಂಬಲಿಸಿ ಬೆಂಗಳೂರಿನಲ್ಲಿ ಪೆರೇಡ್ ನಡೆಸಲು ತೀರ್ಮಾನಿಸಲಾಗಿದೆ. ಈ ಹೋರಾಟವು ಎರಡನೇ ಸ್ವಾತಂತ್ರ್ಯ ಚಳವಳಿಯಾಗಿದ್ದು, ಭರತ ಖಂಡದಲ್ಲಿ ಸಾಕ್ಷಿಯಾಗಲಿದೆ. ಬೆಂಗಳೂರಿನಲ್ಲಿ ನಡೆಯಲಿರುವ ರೈತರ ಗಣರಾಜ್ಯೋತ್ಸವ ಪೆರೇಡ್ನಲ್ಲಿ ರಾಜ್ಯದ ಎಲ್ಲಾ ರೈತ ಸಂಘಗಳು, ದಲಿತ ಸಂಘರ್ಷಸಮಿತಿಗಳು, ಕರ್ನಾಟಕ ಜನಶಕ್ತಿ ವೇದಿಕೆ, ಪ್ರಗತಿಪರ ಸಂಘಟನೆಗಳು, ಬರಹಗಾರರು, ಸಾಹಿತಿಗಳು ಬೆಂಬಲಿಸಿ ಭಾಗವಹಿಸಲಿದ್ದಾರೆ ಎಂದರು.
ಸರ್ಕಾರಿ ಕಾರ್ಯಕ್ರಮ ಮುಗಿದ ನಂತರ ಬೆಂಗಳೂರಿನ ರಾಜಮಾರ್ಗಗಳಲ್ಲಿ ರೈತರು ಟ್ಯಾಕ್ಟರ್, ಎತ್ತಿನ ಗಾಡಿ ಮತ್ತು ವಾಹನಗಳ ಮೂಲಕ ಪೆರೇಡ್ ನಡೆಸಲಿದ್ದು, ವಾಹನಗಳ ಮೇಲೆ ರಾಷ್ಟ್ರ ಧ್ವಜ, ರೈತ ಸಂಘಟನೆಗಳ ಮತ್ತು ಪ್ರಗತಿಪರ ಸಂಘಟನೆಗಳ ಧ್ವಜಗಳೊಂದಿಗೆ ಮೆರವಣಿಗೆ ನಡೆಸಲಾಗುವುದು. ಸುಮಾರು 25-30 ಸಾವಿರ ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದು, ಶಿವಮೊಗ್ಗ ಜಿಲ್ಲೆಯಿಂದ ನೂರಾರು ವಾಹನಗಳಲ್ಲಿ 1000 ಜನರು ಚಳವಳಿಯಲ್ಲಿ ಭಾಗವಹಿಸಲಿದ್ದಾರೆ. ಕಾಯ್ದೆಗಳು ಸಂಪೂರ್ಣವಾಗಿ ರದ್ದಾಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಬಸವರಾಜಪ್ಪ ತಿಳಿಸಿದ್ದಾರೆ.
ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತ ಚಳವಳಿಯಲ್ಲಿ ಇಲ್ಲಿಯವರೆಗೆ 138 ರೈತರು ಹುತಾತ್ಮರಾಗಿದ್ದಾರೆ ಎಂದು ರೈತ ಸಂಘಟನೆಗಳ ವೇದಿಕೆಯಾಗಿರುವ ಸಂಯುಕ್ತ ಕಿಸಾನ್ ಮೋರ್ಚಾ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಇಷ್ಟು ರೈತರು ಹುತಾತ್ಮರಾಗಿದ್ದರೂ ಸಹ ಕೇಂದ್ರ ಸರ್ಕಾರ ದೇಶದ್ರೋಹಿ ಕಾಯ್ದೆಗಳನ್ನು ಹಿಂಪಡೆಯದೆ ಹಠಮಾರಿ ಧೋರಣೆ ಅನುಸರಿಸುತ್ತಿದೆ ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಕೆ.ಎಲ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಜ. 26 ರಂದು ತುಮಕೂರು ರಸ್ತೆ ನೈಸ್ ಜಂಕ್ಷನ್ನಿಂದ, ಕೆ.ಆರ್.ಪುರಂ, ಕೆಂಗೇರಿ ಹಾಗೂ ಸಂಗೋಳ್ಳಿ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೂ ಜಾಥಾ ನಡೆಯಲಿದೆ ತಿಳಿಸಿದರು.