ಶಿವಮೊಗ್ಗ: ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ಮಾರಾಟ ತೆರಿಗೆ ಕಡಿಮೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪೆಟ್ರೋಲಿಯಂ ವಿತರಕರ ಒಕ್ಕೂಟ ವತಿಯಿಂದ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಮಾರಾಟ ತೆರಿಗೆ ಕ್ರಮವಾಗಿ ಶೇ.35 ಮತ್ತು ಶೇ.24 ರಷ್ಟಿದೆ. ಕೆಲವು ರಾಜ್ಯಗಳಲ್ಲಿ ತೆರಿಗೆ ಕಡಿಮೆ ಮಾಡಲಾಗಿದೆ. ತೆರಿಗೆ ದರ ಕಡಿಮೆ ಇರುವ ರಾಜ್ಯದ ಗಡಿಭಾಗದಲ್ಲಿನ ನಮ್ಮ ರಾಜ್ಯದ ಡಿಸೇಲ್ ವರ್ತಕರಿಗೆ ಇದರಿಂದ ವ್ಯವಹಾರ ಗಣನೀಯವಾಗಿ ಕಡಿಮೆಯಾಗಿ ಆದಾಯದಲ್ಲಿ ನಷ್ಟವಾಗುವುದಲ್ಲದೇ ರಾಜ್ಯದ ಆದಾಯವು ಇಳಿಕೆಯಾಗುತ್ತಿದೆ ಎಂದರು.
ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳ ಗಡಿ ಭಾಗದಲ್ಲಿರುವ ಸ್ಥಳಗಳ ಮತ್ತು ನಮ್ಮ ರಾಜ್ಯದ ಅದೇ ಗಡಿ ಭಾಗದಲ್ಲಿನ ಸ್ಥಳಗಳ ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚು ಕಡಿಮೆಯಿದೆ. ಕೆಲವು ಭಾಗದಲ್ಲಿ ಅಲ್ಪ ಪ್ರಮಾಣದಲ್ಲಿ, ಬೇರೆ ಸ್ಥಳಗಳಲ್ಲಿ ಕಡಿಮೆ ದರ ಇದೆ. ಹೀಗಾಗಿ, ಗಡಿಭಾಗದಲ್ಲಿ ವಿಶೇಷವಾಗಿ ಮಹಾರಾಷ್ಟ್ರದ ಗಡಿಭಾಗ ಹಾಗೂ ತಮಿಳುನಾಡು ಗಡಿಭಾಗಗಳಲ್ಲಿ ಆ ರಾಜ್ಯಗಳ ವರ್ತಕರಿಗೆ ಹೆಚ್ಚು ವ್ಯವಹಾರ ಆಗುತ್ತಿದ್ದು, ನಮ್ಮ ರಾಜ್ಯದ ಆದಾಯ ಕಡಿಮೆಯಾಗುತ್ತಿದೆ. ಪೆಟ್ರೋಲ್ ಮತ್ತು ಡಿಸೇಲ್ ದರ ಪ್ರತಿದಿನ ವ್ಯತ್ಯಾಸವಾಗುತ್ತಿದ್ದು, ಕಳೆದ 3 ತಿಂಗಳಲ್ಲಿ ಪೆಟ್ರೋಲ್ ಡಿಸೇಲ್ ದರದಲ್ಲಿ ವಿಪರೀತ ಏರಿಕೆಯಾಗಿದೆ ಎಂದು ದೂರಿದರು.
15-11-2020 ರಂದು ಇದ್ದ ದರ 15-02-2021ರ ದರ ಇವುಗಳನ್ನು ಹೋಲಿಸಿದಾಗ ಪೆಟ್ರೋಲ್ ಲೀಟರ್ ಗೆ 9 ರೂ. ಡಿಸೇಲ್ ಲೀಟರ್ಗೆ 10 ರೂ. ಹೆಚ್ಚಳವಾಗಿದೆ. ಇದರಿಂದಾಗಿ ರಾಜ್ಯ ಸರ್ಕಾರಕ್ಕೆ ಪ್ರತಿ ಲೀಟರ್ಗೆ ಪೆಟ್ರೋಲ್ ಮೇಲೆ ಸುಮಾರು 3 ರೂ. ಡಿಸೇಲ್ ಮೇಲೆ ಸುಮಾರು 2.50 ರೂ. ತೆರಿಗೆ ಆದಾಯ ಬರುತ್ತಿದೆ ಎಂದು ಹೇಳಿದರು. ಆಯವ್ಯಯ ಮಂಡಿಸುವ ಸಮಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಮೇಲೆ ಲೀಟರ್ಗೆ ಕನಿಷ್ಠ 2 ರೂ. ಕಡಿಮೆ ಮಾಡುವ ಮೂಲಕ ವರ್ತಕರು ಮತ್ತು ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಪ್ರಮುಖರಾದ ಹೆಚ್.ಎಸ್. ಮಂಜಪ್ಪ, ಡಿ.ಎಸ್. ಅರುಣ್ ಸೇರಿದಂತೆ ಹಲವರು ಇದ್ದರು.