ಕಲಬುರಗಿ : ಇಡೀ ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿರುವ 545 PSIಗಳ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು CID ಚುರುಕುಗೊಳಿಸಿದೆ.
ಕಳೆದ ರಾತ್ರಿ ಅಕ್ರಮ ನಡೆದಿದ್ದ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯ ಮಾಲೀಕರಾದ ದಿವ್ಯಾ ಹಾಗರಗಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ.ಆಕೆಯ ಪತಿ ರಾಜೇಶ್ ಹಾಗರಗಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.ಇನ್ನು ಬೆಳಗ್ಗೆ ಸಿಐಡಿ ಇನ್ಸ್ಪೆಕ್ಟರ್ ದಿಲೀಪ್ ನೇತೃತ್ವದ ತಂಡ, ಜ್ಞಾನಜ್ಯೋತಿ ಶಾಲೆಯಲ್ಲಿ ಪರಿಶೀಲಿಸಿ ಮಾಹಿತಿ ಕಲೆ ಹಾಕಿದೆ.ನಂತರ ಪರೀಕ್ಷಾ ಕೇಂದ್ರದ ಮಹಿಳಾ ಮೇಲ್ವಿಚಾರಕಿಯರಾದ ಸುಮಾ, ಸಿದ್ದಮ್ಮ, ಸಾವಿತ್ರಿ ಮತ್ತು ಅಭ್ಯರ್ಥಿಗಳಾದ ಪ್ರವೀಣ್ ಕುಮಾರ್, ಚೇತನ್ ನಂದಗಾಂವ್, ಅರುಣ್ಕುಮಾರ್ ಪಾಟೀಲ್ ಸೇರಿ ಆರು ಆರೋಪಿಗಳನ್ನು ಶಾಲೆಗೆ ಕರೆತಂದು ಸ್ಥಳ ಮಹಜರ ಮಾಡಿದ್ದಾರೆ.
ಇನ್ನು PSI ನೇಮಕಾತಿ ಹಗರಣ ಬೆಳಕಿಗೆ ಬರುತ್ತಿದ್ದಂತೆ ಶಾಲೆಯ ಪ್ರಾಂಶುಪಾಲ ಮತ್ತು ಇನ್ನಿಬ್ಬರು ಮೇಲ್ವಿಚಾರಕರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ CID ಅಧಿಕಾರಿಗಳು ಸಿಸಿಟಿವಿಗಳ ಹಾರ್ಡ್ಡಿಸ್ಕ್ ಸಂಗ್ರಹಿಸಿದ್ದಾರೆ. ಇತ್ತ CID ತನಿಖೆ ಚುರುಕುಗೊಳಿಸುತ್ತಿದ್ದಂತೆ, ದಿವ್ಯಾ ಹಾಗರಗಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅವರು ನಮ್ಮ ಪಕ್ಷದ ನಾಯಕಿಯಲ್ಲ ಅಂತಾ ಬಿಜೆಪಿ ಸ್ಪಷ್ಟಪಡಿಸಿದೆ.
ಇನ್ನು CID ಅಧಿಕಾರಿಗಳು ನಿಷ್ಪಕ್ಷಪಾತ ತನಿಖೆ ನಡೆಸುತ್ತಿದ್ದಾರೆ.ಯಾರೇ ತಪ್ಪಿತಸ್ಥರಿದ್ದರೂ ಶಿಕ್ಷೆಯಾಗಲಿದೆ ಅಂತಾ ಸಿಎಂ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆಗೆ ಆಗ್ರಹಿಸಿದ್ದೆ. ಈಗ ತನಿಖೆ ನಡೆಯುತ್ತಿದ್ದು,ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಅಂತಾ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಅಧಿಕಾರಿಗಳು ನಿಷ್ಠೆಯಿಂದ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಕರಣದ ಕಿಂಗ್ಪಿನ್ ಮತ್ತು ತಲೆಮರೆಸಿಕೊಂಡಿರುವ ದಿವ್ಯಾ ಹಾಗರಗಿಯ ಬಂಧನಕ್ಕೆ ಸಿಐಡಿ ಟೀಂ ಬಲೆ ಬೀಸಿದ್ದು, ಅದೆನೇ ಇರಲಿ ಸಾವಿರಾರು ಬಡ ಮತ್ತು ಪ್ರತಿಭಾನ್ವಿತ ಅಭ್ಯರ್ಥಿಗಳ ಬಾಳಿಗೆ ಕೊಳ್ಳಿ ಇಟ್ಟಿರುವ ಅಕ್ರಮದಲ್ಲಿ ಭಾಗಿಯಾಗಿರುವ ಕ್ರಿಮಿಗಳಿಗೆ ತಕ್ಕ ಶಿಕ್ಷೆಯಾಗಬೇಕಾಗಿದೆ.