ಹುಬ್ಬಳ್ಳಿ ಮಹಾನಗರ ಒಂದು ಕಾಲಕ್ಕೆ ಕೋಮು ಸೂಕ್ಷ್ಮ ನಗರವಾಗಿತ್ತು. ಹುಬ್ಬಳ್ಳಿಯ ಈದ್ಗಾ ವಿವಾದ ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು. ವಿವಾದ ಬಗೆಹರಿದ ನಂತರ ಸಹಜ ಸ್ಥಿತಿಗೆ ಮರಳಿದ್ದ ಹುಬ್ಬಳ್ಳಿ ಮಹಾನಗರ, ಮತ್ತೆ ಕೋಮು ದಳ್ಳುರಿಯತ್ತ ಮುಖ ಮಾಡಿದೆ.
ಹಳೇ ಹುಬ್ಬಳ್ಳಿ ಠಾಣೆ ಎದುರು ನಡೆಯಬಾರದ್ದು ನಡೆದುಹೋಯ್ತು. ಸಾಮಾಜಿಕ ಜಾಲತಾಣದಲ್ಲಿ ಮೆಕ್ಕಾ ಮದೀನಾ ಭಾವಚಿತ್ರದ ಮೇಲೆ ಭಗವಾ ಧ್ವಜ ಎಡಿಟ್ ಮಾಡಿದ್ದ ಯುವಕನೊಬ್ಬನನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆತಂದಿದ್ದರು. ಈ ಸುದ್ದಿ ಗೊತ್ತಾಗುತ್ತಿದಂತೆ ಠಾಣೆಗೆ ನುಗ್ಗಿದ 30 ಜನರ ತಂಡ ಆತನನ್ನು ನಮ್ಮ ಕೈಗೆ ಕೊಡಿ ಅಂದಿದ್ದಾರೆ. ಪೊಲೀಸರು ಮಧ್ಯಸ್ಥಿಕೆ ವಹಿಸಿ, ಠಾಣೆಯಲ್ಲಿ ಸೇರಿದ ಜನರನ್ನು ಇನ್ನೇನು ಮನೆಗೆ ವಾಪಸು ಕಳಿಸಬೇಕು ಅನ್ನುವಷ್ಟರಲ್ಲಿ ಮಾರುತಿ ದೊಡ್ಮನಿ ಎಂಬಾತ ಪ್ರತಿಭಟನಾಕಾರರಿಗೆ ಪ್ರಚೋದನೆ ನೀಡಿದ ಎಂಬುದು ಪೊಲೀಸರು ನಡೆಸಿದ ತನಿಖೆಯಿಂದ ಗೊತ್ತಾಗಿದೆ.
ಇವೆಲ್ಲ ಪ್ರಶ್ನೆಗಳಿಗೆ ತನಿಖೆ ನಂತರ ಉತ್ತರ ಸಿಕ್ಕರೂ ಸಹ, ಕಲ್ಲು ಪೂರೈಸಿದ್ದು ಯಾರು ಅನ್ನೋದರ ಬಗ್ಗೆ ಪೊಲೀಸರು ಆಳವಾದ ತನಿಖೆ ನಡೆಸಿದ್ದಾರೆ. ಕಲ್ಲು ತೂರಿದವರ ವಯಸ್ಸು ಗಮನಿಸಿದಾಗ ಅವರೆಲ್ಲರೂ 18 ರಿಂದ 25 ರ ಆಸುಪಾಸಿನವರು. ಯಾವಾಗ ಹಿಂದೂ ಯುವಕ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹರಿಬಿಟ್ಟನೋ, ಅದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಮತ್ತೊಂದು ಸಮುದಾಯದ ವಾಸಿಂ ಎಂಬ ಯುವಕ, ಧರ್ಮದ ಮೇಲೆ ದಬ್ಬಾಳಿಕೆ ನಡೆದಿದೆ. ಎಲ್ಲರೂ ಠಾಣೆ ಎದುರು ಸೇರುವಂತೆ ವಾಟ್ಸಾಪ ಸಂದೇಶ ಕಳಿಸಿದ್ದಾನೆ. ಇಷ್ಟೇ ಸಾಕು ಅನ್ಸತ್ತೆ. ಅರ್ಧ ಘಂಟೆಯಲ್ಲಿ ಠಾಣೆ ಮುಂದೆ ಐನೂರಕ್ಕು ಹೆಚ್ಬು ಜನ ಸೇರಿದ್ದಾರೆ. ಕೈಗೆ ಸಿಕ್ಕ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.
ಧರ್ಮಾಂಧತೆಯ ನಶೆಯಲ್ಲಿದ್ದ ಯುವಕರು ಗಲಭೆಯಲ್ಲಿ ತೊಡಗಿದ್ದು, ಹುಬ್ಬಳ್ಳಿಯ ಶಾಂತಿಗೆ ಕೊಳ್ಳೆ ಇಟ್ಟಿದ್ದಾರೆ. ಜಾತ್ಯಾತೀತ ಪರಂಪರೆಯ ಸಿದ್ದಾರೂಢರು ಹಾಗೂ ಸೈಯದ್ ಫತೇ ಶ್ಯಾವಲಿಯ ನೆಲದಲ್ಲಿ ಕೋಮು ಸಾಮರಸ್ಯಕ್ಕೆ ಕೊಳ್ಳಿ ಇಡಲಾಗಿದೆ. ಭಂಡ ರಾಜಕೀಯ ಮತ್ತು ಧರ್ಮ ರಾಜಕೀಯ ಬಿಟ್ಟು ಪಕ್ಷಾತೀತವಾಗಿ ರಾಜಕೀಯ ಮುಖಂಡರು ಸೇರಿ ಸೌಹಾರ್ಧತೆ ಮೆರೆದಾಗ ಮಾತ್ರ ಶಾಂತಿ ನೆಲೆಸಲು ಸಾಧ್ಯ.