ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರ ಕನ್ನಡಿಗ ರಾಹುಲ್ ದ್ರಾವಿಡ್. ಇವರ ಬಗ್ಗೆ ಗೊತ್ತಿಲ್ದೇ ಇರೋರು ಯಾರಿದ್ದಾರೆ ಹೇಳಿ? ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ರಾಹುಲ್ ತನ್ನ ತಾಳ್ಮೆಯ ಆಟದಿಂದ ಎದುರಾಳಿಗಳ ಬೆವರಿಳಿಸಿದ ಸ್ಟಾರ್. ಆಟದಲ್ಲೂ, ವ್ಯಕ್ತಿತ್ವದಲ್ಲೂ ಅವರಿಗೆ ಅವರೇ ಸಾಟಿ. ಇದೀಗ ಅವರ ಮಗ ಸಮಿತ್ ಅದೇ ಮಾರ್ಗದಲ್ಲಿ ಸಾಗುತ್ತಿದ್ದಾರೆ. ದ್ರಾವಿಡ್ ರೀತಿಯ ತಾಳ್ಮೆಯ ಆಟ, ಕಲಾತ್ಮಕ ಬ್ಯಾಟಿಂಗ್ ಮೂಲಕ ಸಮಿತ್ 14 ವರ್ಷದೊಳಗಿನವರ ಕ್ರಿಕೆಟಲ್ಲಿ ತನ್ನದೇಯಾದ ಛಾಪು ಮೂಡಿಸುತ್ತಿದ್ದಾರೆ. ಆ ಮೂಲಕ ತಾನು ಮುಂದೊಂದು ದಿನ ತಂದೆಯಂತೆ ಟೀಮ್ ಇಂಡಿಯಾದ ದೊಡ್ಡ ಆಸ್ತಿಯಾಗಿ, ವಿಶ್ವ ಕ್ರಿಕೆಟನ್ನು ಆಳುತ್ತೇನೆ ಎಂಬ ಭರವಸೆ ಮೂಡಿಸುತ್ತಿದ್ದಾರೆ.
ಹೌದು ಮತ್ತೊಮ್ಮೆ ಸಮಿತ್ ದ್ರಾವಿಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪರ ಕಣಕ್ಕಿಳಿದ ಜ್ಯೂನಿಯರ್ ದ್ರಾವಿಡ್ ಗೋವಾ ಕ್ರಿಕೆಟ್ ಸಂಸ್ಥೆ ವಿರುದ್ಧ 180 ಬಾಲ್ಗಳಲ್ಲಿ ಅಜೇಯ 109ರನ್ ಬಾರಿಸಿದರು. ಬ್ಯಾಟಿಂಗ್ಗೂ ಮುನ್ನ 7ರನ್ಗಳಿಗೆ 2 ವಿಕೆಟ್ ಕಿತ್ತು ಮಿಂಚಿದ್ರು.
ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕ ಗೋವಾವನ್ನು 43.1 ಓವರ್ಗಳಲ್ಲಿ 84ರನ್ಗಳಿಗೆ ಕಟ್ಟಿಹಾಕಿತು. ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಸಮಿತ್ ಆಕರ್ಷಕ ಶತಕದ ನೆರವಿನಿಂದ 66 ಓವರ್ಗಳಲ್ಲಿ 3 ವಿಕೆಟ್ ಕಳ್ಕೊಂಡು 245ರನ್ ಗಳನ್ನು ಮಾಡಿ ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಸೆಕೆಂಡ್ ಇನ್ನಿಂಗ್ಸ್ನಲ್ಲಿ ಗೋವಾ 87 ಓವರ್ಗಳಲ್ಲಿ 117ರನ್ಗಳಿಸಿ ಮ್ಯಾಚ್ ಡ್ರಾ ಮಾಡಿಕೊಂಡಿತು.