Homeರಾಜ್ಯಕುರಿಗಾಹಿಗಳ ಜತೆ ಕಂಬಳಿ ಮೇಲೆ ಕುಳಿತು ಮಜ್ಜಿಗೆ ಊಟ ಮಾಡಿದ ಪುನೀತ್ ರಾಜ್ ಕುಮಾರ್

ಕುರಿಗಾಹಿಗಳ ಜತೆ ಕಂಬಳಿ ಮೇಲೆ ಕುಳಿತು ಮಜ್ಜಿಗೆ ಊಟ ಮಾಡಿದ ಪುನೀತ್ ರಾಜ್ ಕುಮಾರ್

ಗಂಗಾವತಿ : ಡಾ. ರಾಜ್‌ಕುಮಾರ್ ಮೇರುನಟನಾದರೂ ಅಭಿಮಾನಿಗಳ ಜತೆ ಬೆರೆಯುತ್ತಿದ್ದರು. ಅವರು ಎಂದಿಗೂ ತಾವು ದೊಡ್ಡ ನಟ ಎನ್ನುವ ಭಾವನೆಯನ್ನು ತೋರಿಸಿಲ್ಲ. ಪುನೀತ್ ರಾಜ್ ಕುಮಾರ್‌ಗೂ ಇದೇ ಗುಣ ಬಂದಿದೆ. ಅವರು ಅಷ್ಟು ಎತ್ತರಕ್ಕೆ ಬೆಳೆದರೂ ಎಲ್ಲರ ಜತೆ ಬೆರೆಯುತ್ತಾರೆ. ಸಾಮಾನ್ಯರ ಜತೆ ತಾವು ಕೂಡ ಸಾಮಾನ್ಯರು ಎಂಬಂತೆ ಇದ್ದು ಬಿಡುತ್ತಾರೆ. ಇದು ಈಗ ಮತ್ತೊಮ್ಮೆ ಸಾಬೀತಾಗಿದೆ. ಜಮೀನಿನಲ್ಲಿ ಕುರಿಗಾಹಿಗಳು ಹಾಕಿರುವ ಗುಡಿಸಲಲ್ಲಿ ಕುಳಿತು ಪುನೀತ್ ಊಟ ಮಾಡಿರುವ ಫೋಟೋ ಈಗ ವೈರಲ್ ಆಗುತ್ತಿದೆ.

ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಪುನೀತ್ ರಾಜ್‌ಕುಮಾರ್ ಭೇಟಿ ಕೊಟ್ಟರು. ಆದರೆ, ಬೆಟ್ಟ ಬಂದ್ ಆಗಿತ್ತು. ಹೀಗಾಗಿ, ಗಂಗಾವತಿ ಸಮೀಪದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರು ಸುತ್ತಾಟ ನಡೆಸಿದ್ದಾರೆ. ಸ್ಥಳೀಯ ಪ್ರವಾಸಿ ಸ್ಥಳಗಳಾದ ಋಷಿಮುಖ ಪರ್ವತ, ಸಣಾಪೂರ, ಬಂಡಿ ಹರ್ಲಾಪೂರ, ನಾರಾಯಣ ಪೇಟೆಗಳಿಗೆ ಪುನೀತ್ ಭೇಟಿ ನೀಡಿದ್ದಾರೆ.

ಗಂಗಾವತಿಯಲ್ಲಿ ಸುತ್ತಾಟ ನಡೆಸಿ ಅವರು ವಿಜಯಪೂರಕ್ಕೆ ಹೋಗುವ ವೇಳೆಯಲ್ಲಿ ದಾರಿ ಪಕ್ಕದ ಜಮೀನಿನಲ್ಲಿ ಕುರಿಗಾಹಿಗಳು ಹಾಕಿರುವ ಕುರಿ ಹಟ್ಟಿ ಪುನೀತ್ ಕಣ್ಣಿಗೆ ಬಿದ್ದಿದೆ. ಅವರು ಅಲ್ಲಿಗೆ ಭೇಟಿ ನೀಡಿದ್ದಾರೆ. ಖುಷಿಯಿಂದಲೇ ಕುರಿಗಾಹಿಗಳ ಜೊತೆ ಪುನೀತ್ ಮಾತುಕತೆ ನಡೆಸಿದ್ದಾರೆ. ಕಂಬಳಿ ಮೇಲೆ ಕುಳಿತು, ಅವರು ಊಟ ಮಾಡುವ ಸಂಗಟಿ (ರಾಗಿ ಮುದ್ದೆ), ಹಾಲು, ಮಜ್ಜಿಗೆ ಅನ್ನ ಊಟ ಮಾಡಿ ಸರಳತೆ ಮೆರೆದಿದ್ದಾರೆ.

ಆನೆಗೊಂದಿ ಸಮೀಪದ ಐತಿಹಾಸಿಕ ಸ್ಥಳಗಳ ವೀಕ್ಷಣೆ ಮಾಡಬೇಕು ಎಂದು ಪುನೀತ್ ಬಯಸಿದ್ದರು. ಅದೇ ರೀತಿ ಸಣಾಪೂರ ಕೆರೆ, ಸಣಾಪೂರ ಫಾಲ್ಸ್, ಕಲ್ಲಿನ ಸೇತುವೆ ಸೇರಿದಂತೆ ಇತರ ಸ್ಥಳಗಳ ವೀಕ್ಷಣೆ ಮಾಡಿದ್ದಾರೆ. ಪುನೀತ್ ಆಗಮಿಸಿದ ವಿಚಾರ ತಿಳಿದ ಅಭಿಮಾನಿಗಳು ಅಲ್ಲಿ ನೆರೆದಿದ್ದರು. ನೆಚ್ಚಿನ ನಟನ ಜತೆ ಫೋಟೋ ತೆಗೆಸಿಕೊಂಡು ಅವರು ಸಂಭ್ರಮಿಸಿದರು. ಅಷ್ಟೇ ಅಲ್ಲದೆ ಸ್ಥಳೀಯ ಕಲಾವಿದರೊಂದಿಗೆ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here

- Advertisment -

Most Popular

Recent Comments