ಕಲಬುರಗಿ: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಜಾಲ ಬಗೆದಷ್ಟೂ ಬಯಲಾಗ್ತಿದೆ.ಇಡೀ ಪ್ರಕರಣದಿಂದ ತೀವ್ರ ಮುಜುಕಗರಕ್ಕೀಡಾಗಿದ್ದ ಕಾಂಗ್ರೆಸ್ಗೆ ದೊಡ್ಡದೊಂದು ಶಾಕ್ ಆಗಿದೆ.ಪ್ರಕರಣದ ಜಾಡು ಹಿಡಿದು ಬೆನ್ನತ್ತಿದ ಸಿಐಡಿ ಪೊಲೀಸರು,ಇದೀಗ ಕಾಂಗ್ರೆಸ್ ಶಾಸಕರೊಬ್ಬರ ಗನ್ಮ್ಯಾನ್ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ
ಇಡೀ ರಾಜ್ಯವನ್ನೇ ತಲ್ಲಣಗೊಳಿಸಿ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಬಾಳಿಗೆ ಕೊಳ್ಳಿ ಇಡಲು ಹೊರಟಿರುವ 545 ಪಿಎಸ್ಐ ಹುದ್ದೆಗಳ ಅಕ್ರಮ ನೇಮಕಾತಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ದಿವ್ಯಾ ಹಾಗರಗಿಯನ್ನ ಬಂಧಿಸಲು ಸಿಐಡಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿರುವ ಬೆನ್ನಲ್ಲೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಗನ್ಮ್ಯಾನ್ ಹಯ್ಯಾಳಿ ಅಲಿಯಾಸ್ ಅಯ್ಯಣ್ಣ ದೇಸಾಯಿ ಮತ್ತು ಕಿಂಗ್ಪಿನ್ ಸಿಆರ್ ಕಾನ್ಸ್ಟೆಬಲ್ ರುದ್ರಕುಮಾರ್ನನ್ನ ಸಿಐಡಿ ಅಧಿಕಾರಿಗಳು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.ಶಾಸಕರ ಜತೆ ಮದುವೆಗೆ ಹೊರಟಿದ್ದಾಗ ಕಾರಿನಲ್ಲಿದ್ದಾಗಲೇ ಗನ್ಮ್ಯಾನ್ನನ್ನು ಬಂಧಿಸಲಾಗಿದೆ.ಇನ್ನೊಬ್ಬ ಅಂಗರಕ್ಷಕನ ವ್ಯವಸ್ಥೆ ಮಾಡಲಾಗಿದೆ. ಈ ಇಬ್ಬರೂ ಬಂಧಿತರು PSI ಪರೀಕ್ಷೆ ಬರೆದಿದ್ದು, ಆಯ್ಕೆಯಾಗಿದ್ದರು.
ಇನ್ನೊಂದೆಡೆ ಈ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಏಕಕಾಲಕ್ಕೆ ಬೆಂಗಳೂರು ಹಾಗೂ ಕಲಬುರಗಿಯಲ್ಲಿ ನೀರಾವರಿ ಇಲಾಖೆ ಇಂಜಿನಿಯರ್ ಮಂಜುನಾಥ್ ಮನೆ ಮೇಲೆ ನಡೆಸಿದ್ದಾರೆ. ಈ ವೇಳೆ PSI, KPSC ಸೇರಿ ಹಲವು ಪರೀಕ್ಷೆಗಳ 20ಕ್ಕೂ ಹೆಚ್ಚು ಹಾಲ್ ಟಿಕೆಟ್
ಪತ್ತೆಯಾಗಿದೆ.ನೀರಾವರಿ ಇಲಾಖೆ ಇಂಜಿನಿಯರ್ ಮಂಜುನಾಥ್ ತಲೆಮರೆಸಿಕೊಂಡಿದ್ದಾನೆ.
ದಿವ್ಯಾ ಬಂಧನಕ್ಕೆ ಆಗ್ರಹ, ಸಿಎಂ ಮುತ್ತಿಗೆಗೆ ‘ಕೈ’ಪಡೆ ಯತ್ನ :
ಈ ಹಗರಣಕ್ಕೆ ಸಂಬಂಧಿಸಿದಂತೆ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯ ಕಾರ್ಯದರ್ಶಿ ದಿವ್ಯಾ ಹಾಗರಗಿ ಬಂಧನಕ್ಕೆ ಆಗ್ರಹಿಸಿ ಕಲಬುರಗಿ ಜಿಲ್ಲಾಸ್ಪತ್ರೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಬೊಮ್ಮಾಯಿಗೆ ಮುತ್ತಿಗೆ ಹಾಕಲೆತ್ನಿಸಿದರು.ಇದೇ ವೇಳೆ ಪೊಲೀಸರು ಮೂವತ್ತಕ್ಕೂ ಅಧಿಕ ‘ಕೈ’ ಕಾರ್ಯಕರ್ತರನ್ನ ಬಂಧಿಸಿದರು.ಇದಕ್ಕೂ ಮುನ್ನ ಕಲಬುರಗಿಯಲ್ಲಿ ಪ್ರತಿಕ್ರಿಯಿಸಿದ ಸಿಎಂ, ದೂರು ಬಂದ ತಕ್ಷಣ ಸಿಐಡಿ ತನಿಖೆಗೆ ಸೂಚಿಸಿದ್ದೇನೆ.ಜೊತೆಗೆ ಈಗಾಗಲೇ ದಿವ್ಯಾ ಬಂಧನಕ್ಕೆ ಬಲೆ ಬೀಸಲಾಗಿದೆ.ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಅದೇನೇ ಇರಲಿ ಇಡೀ ರಾಜ್ಯವನ್ನೆ ತಲ್ಲಣಗೊಳಿಸಿರುವ ಪಿಎಸ್ಐ ಎಕ್ಸಾಂ ಗೋಲ್ಮಾಲ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇನ್ನು ಯಾರ್ಯಾರು ಅಂದರ್ ಆಗ್ತಾರೆ ಎಂಬುದನ್ನು ಕಾದು ನೋಡಬೇಕಿದೆ. PSI ನೇಮಕಾತಿಯಲ್ಲಿ ಶಾಸಕ Y.M.ಪಾಟೀಲ್ ಗನ್ಮ್ಯಾನ್ ಪಾತ್ರವೇನು..? ಗನ್ ಮ್ಯಾನ್ ಮಾಡಿದ್ದ ಅಕ್ರಮ ಶಾಸಕರ ಗಮನಕ್ಕೆ ಬಂದಿತ್ತಾ..? ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ.