ತುಮಕೂರು : ಕೋರಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ಲಾಕಪ್ನಿಂದ ಪರಾರಿಯಾಗಿದ್ದ ಸರಗಳ್ಳನನ್ನು ಬಂಧಿಸುವಲ್ಲಿ ಶಿರಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಧುಗಿರಿ ತಾಲ್ಲೂಕಿನ ಕಾಟಗೊಂಡನಹಳ್ಳಿ ಗ್ರಾಮದ ರಾಜ ಅಲಿಯಾಸ್ ಪ್ರತಾಪ (38) ರಾತ್ರಿ ವೇಳೆ ಮನೆಗೆ ನುಗ್ಗಿ ಮಹಿಳೆಯರ ಮಾಂಗಲ್ಯ ಸರಗಳನ್ನು ಕದಿಯುತ್ತಿದ್ದ ಎನ್ನಲಾಗಿದೆ. ದೂರಿನ ಮೇರೆಗೆ ಕೋರಾ ಪೊಲೀಸರು ಆಗಸ್ಟ್ 05 ರಂದು ಆತನನ್ನು ಅರೆಸ್ಟ್ ಮಾಡಿದ್ದರು.
ಆದರೆ, ಆತ ಊಟದ ಕವರ್ ಬಿಸಾಡುವುದಾಗಿ ಪೊಲೀಸರಿಗೆ ಹೇಳಿ ಲಾಕಪ್ ನಿಂದ ಹೊರಬಂದು ಪರಾರಿಯಾಗಿದ್ದ. ಆತನಿಂದ 10 ಲಕ್ಷ ಮೌಲ್ಯದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದರು. ಪರಾರಿಯಾಗಿದ್ದ ಆರೋಪಿಗಾಗಿ ಬಲೆ ಬೀಸಿದ್ದ ಶಿರಾ ಪೊಲೀಸರ ವಿಶೇಷ ತಂಡ ಆಗಸ್ಟ್ 18 ರಂದು ಮಧುಗಿರಿ ತಾಲ್ಲೂಕಿನ ಮರುವೇಕೆರೆ ಗ್ರಾಮದಲ್ಲಿ ಅಡಗಿದ್ದವನನ್ನು ಪತ್ತೆ ಹಚ್ಚಿ ಪುನಃ ಬಂಧಿಸಿದ್ದಾರೆ. ಇನ್ನೂ ಆರೋಪಿ ಪ್ರತಾಪ್ ವಿರುದ್ಧ ಕೋರಾ ಪೊಲೀಸ್ ಠಾಣೆಯಲ್ಲಿ 07 ಪ್ರಕರಣಗಳು ಹಾಗೂ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ 11 ಸುಲಿಗೆ ಪ್ರಕರಣಗಳು ದಾಖಲಾಗಿವೆ.
-ಜೆ.ಎಸ್.ಹೇಮಂತ್ ಕುಮಾರ್