Sunday, June 26, 2022
Powertv Logo
Homeದೇಶಐರೋಪ್ಯ ಒಕ್ಕೂಟಕ್ಕೆ ಈಗ ನಿರಾಶ್ರಿತರ ಸಮಸ್ಯೆ

ಐರೋಪ್ಯ ಒಕ್ಕೂಟಕ್ಕೆ ಈಗ ನಿರಾಶ್ರಿತರ ಸಮಸ್ಯೆ

ಇತ್ತೀಚೆಗೆ ಐರೋಪ್ಯ ಒಕ್ಕೂಟ ಅದ್ರಲ್ಲೂ ಪೋಲ್ಯಾಂಡ್​​​ನಲ್ಲಿ ನಿರ್ಮಾಣವಾಗಿರುವ ನಿರಾಶ್ರಿತರ ಸಮಸ್ಯೆಯನ್ನ ಬಗೆಹರಿಸೋದಕ್ಕೆ ಐರೋಪ್ಯ ರಾಷ್ಟ್ರಗಳು ವಿಫಲವಾಗಿದೆ. ಪೋಲ್ಯಾಂಡ್​ ಗಡಿಯಲ್ಲಿ ಈಗ ನಿರ್ಮಾಣವಾಗಿರುವ ಈ ಸಮಸ್ಯೆಯಿಂದ ಸಾವಿರಾರು ಮಹಿಳೆಯರು, ಮಕ್ಕಳು ಚಳಿಯಲ್ಲಿ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಲಾರಸ್​ ಹಾಗು ರಷ್ಯಾದ ಮೇಲೆ ಅನುಮಾನ ಮೂಡೋದಕ್ಕೆ ಶುರುವಾಗಿದೆ.. ಇದೇನ್ರಿ… ಪೋಲ್ಯಾಂಡ್​ನಲ್ಲಿ ಸಮಸ್ಯೆಯಾದ್ರೆ ರಷ್ಯಾ, ಬೆಲರಾಸ್​ ಮೇಲೆ ಯಾಕೆ ಅನುಮಾನ ಮೂಡುತ್ತೆ ಅಂತೀರಾ…..?

ಕಳೆದ ಕೆಲ ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬರೋದಕ್ಕೆ ಪ್ರಯತ್ನಿಸಿದ್ದ ರೋಹಿಂಗ್ಯ ಮುಸಲ್ಮಾನರಿಗೆ ಭಾರತ ಸರ್ಕಾರ ನಿರ್ಬಂಧ ಹೇರಿತ್ತು. ಈ ವೇಳೆ ಭಾರತ ಸರ್ಕಾರ ರೋಹಿಂಗ್ಯ ಮುಸಲ್ಮಾನರ ಬಗ್ಗೆ ಭಯೋತ್ಪಾದನೆಯ ಕಾರಣ ನೀಡಿ ಕೇಂದ್ರ ಸರ್ಕಾರ ಪ್ರವೇಶ ನಿಷೇಧಿಸಿತ್ತು. ಆಗ ಭಾರತ ಮಾನವ ಹಕ್ಕುಗಳನ್ನ ಉಲ್ಲಂಘಿಸ್ತಾ ಇದೆ, ಆ ಜನ್ರಿಗೆ ಭಾರತದಲ್ಲಿ ಉಳಿಯೋದಕ್ಕೆ ಅವಕಾಶ ಕೊಡ್ಬೇಕು ಅಂತ ಭಾರತಕ್ಕೆ ಬಿಟ್ಟಿ ಸಲಹೆ ನೀಡಿದ್ದ ಯುರೋಪ್​ ಒಕ್ಕೂಟ ಇದೀಗ ತಾನೇ ಮಧ್ಯಪ್ರಾಚ್ಯದ ನಿರಾಶ್ರಿತರಿಗೆ ಪ್ರವೇಶವನ್ನ ನಿರ್ಬಂಧಿಸಿದೆ. ಈ ಮೂಲಕ ತಾನು ಹೇಳೋದು ಭಗವದ್ಗೀತೆ, ತಿನ್ನೋದು ಬದನೆಕಾಯಿಯನ್ನೇ ಅನ್ನೋದನ್ನ ಯುರೋಪ್​ ಒಕ್ಕೂಟ ಸಾಬೀತುಪಡಿಸಿದೆ.. ಈ ಮಧ್ಯಪ್ರಾಚ್ಯ ನಿರಾಶ್ರಿತರ ಸಮಸ್ಯೆ ಯುರೋಪ್​ ಒಕ್ಕೂಟದ ಎಲ್ಲಾ ದೇಶಗಳಿಗೆ ತಗುಲದೇ ಇದ್ರೂ ಯುರೋಪ್​ನ ಪ್ರಮುಖ ರಾಷ್ಟ್ರಗಳಲ್ಲಿ ಒಂದಾದ ಪೋಲ್ಯಾಂಡ್​ಗೆ ಇದರ ಬಿಸಿ ಸರಿಯಾಗಿಯೇ ತಾಗ್ತಾ ಇದೆ.

ಇಲ್ಲಿ ಪ್ರಮುಖವಾಗಿ ನಡೆದಿರೋ ಘಟನೆ ಏನು ಅಂದ್ರೆ, ಈಗ ಮಧ್ಯಪ್ರಾಚ್ಯದ ರಾಷ್ಟ್ರಗಳಾದ ಇರಾಕ್​ ಸಿರಿಯ, ಲೆಬನಾನ್ ದೇಶಗಳಲ್ಲಿನ ಉಗ್ರರ ಸಮಸ್ಯೆ ಹಾಗು ಸಂಘರ್ಷದಿಂದ ರೋಸಿ ಹೋಗಿರುವ ಜನ ಅಲ್ಲಿಂದ ಬೇರೆ ರಾಷ್ಟ್ರಕ್ಕೆ ವಲಸೆ ಹೋಗೋದಕ್ಕೆ ನಿರ್ಧರಿಸಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಈ ಹಿಂದೆ ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ಆಕ್ರಮಿಸಿಕೊಂಡಾಗ ಅಲ್ಲಿನ ನಿರಾಶ್ರಿತ ಅಫ್ಘನ್ನರು ನಾವು ಅಮೆರಿಕಗೆ ಹೋಗಲ್ಲ, ಬದಲಾಗಿ ಯುರೋಪ್​ ರಾಷ್ಟ್ರಗಳಿಗೆ ಹೋಗಿ ಬದುಕು ಕಟ್ಟಿಕೊಳ್ತೀವಿ ಅನ್ನೋ ಮಾತನ್ನ ಆಡ್ತಾರೆ. ಆದ್ರೆ ಈ ಬಗ್ಗೆ ಎಚ್ಚೆತ್ತ ಯುರೋಪ್​ ಯೂನಿಯನ್​, ಅನುಮತಿ ಇಲ್ಲದೇ ಯಾವುದೇ ನಿರಾಶ್ರಿತರನ್ನ ತನ್ನ ಒಕ್ಕೂಟದೊಳಗೆ ಬಿಡೋದಿಲ್ಲ ಅನ್ನೋ ನಿರ್ಧಾರ ಕೈಗೊಂಡಿತ್ತು.. ಇದಕ್ಕೆ ಪ್ರಮುಖವಾದ ಕಾರಣವೇನಂದ್ರೆ ನಿರಾಶ್ರಿತರ ಸೋಗಿನಲ್ಲಿ ಕೆಲ ಭಯೋತ್ಪಾದಕರು ಯುರೋಪ್​ ಒಕ್ಕೂಟದೊಳಕ್ಕೆ ಪ್ರವೇಶಿಸುವ ಭೀತಿ ಈ ಒಕ್ಕೂಟ ದೇಶಗಳದ್ದು..

ಸದ್ಯಕ್ಕೆ ಈ ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಸಂಘರ್ಷ ತಾರಕಕ್ಕೇರಿದ್ದು ಆ ರಾಷ್ಟ್ರಗಳಿಂದ ವಲಸೆ ಹೋಗಿ ಬೇರೆ ದೇಶಗಳಲ್ಲಿ ಬದುಕು ಕಟ್ಟಿಕೊಳ್ಳೋದಕ್ಕೆ ಪ್ರಯತ್ನಿಸ್ತಿದ್ದಾರೆ. ಇವ್ರಲ್ಲಿ ಬಹುತೇಕರು ಯುರೋಪ್​ಗೆ ಹೋಗೋದಕ್ಕೆ ಬಯಸ್ತಾರೆ. ಆದ್ರೆ ಯಾವ ದೇಶವೂ ಕೂಡ ಅನುಮತಿ ಇಲ್ಲದೆ ವಲಸೆ ಕೈಗೊಳ್ಳೋದಕ್ಕೆ ಅವಕಾಶವನ್ನ ಕೊಡೋದಿಲ್ಲ. ಹಾಗೇನೆ ಇವರಿಗೆ ವಲಸೆಗೆ ಅನುಮತಿಯನ್ನ ಕೊಡೋದಿಲ್ಲ. ಕಾರಣ ಭಯೋತ್ಪಾದನೆ ಪೀಡಿತ ರಾಷ್ಟ್ರಗಳಿಂದ ಬಂದವರು ಅನ್ನೋದು.. ಹೀಗಾಗಿ ಇವ್ರು ಇಂದಿಗೆ ಯುರೋಪಿಯನ್​ ಯುನಿಯನ್​ನ ಕಣ್ಣಿಗೆ ಗಡಿದಾಟಿ ವಾಮಮಾರ್ಗದ ಮೂಲಕ ಬಂದ ಅಕ್ರಮ ವಲಸಿಗರಾಗಿ ಕಾಣ್ತಾರೆ. ಇಷ್ಟು ದಿನಗಳ ಕಾಲ ಈ ನಿರಾಶ್ರಿತರು ಟರ್ಕಿಯ ಮೂಲಕ ಈ ಯುರೋಪ್​ ರಾಷ್ಟ್ರಗಳಿಗೆ ವಲಸೆ ಹೋಗ್ತಾ ಇದ್ರು. ಆದ್ರೆ ಟರ್ಕಿ ಆ ಮಾರ್ಗವನ್ನ ಸಂಪೂರ್ಣವಾಗಿ ಬಂದ್​ ಮಾಡಿತ್ತು ಬಳಿಕ ಮೆಡಿಟರೇನಿಯನ್​ ಸಮುದ್ರ ಮಾರ್ಗದ ಮೂಲಕ ಬೋಟ್​ಗಳನ್ನ ಬಳಸಿಕೊಂಡು ಪ್ರಯಾಣ ಮಾಡ್ತಾ ಇದ್ರು. ಆದ್ರೆ ಇದು ಅತ್ಯಂತ ಅಪಾಯಕಾರಿ ಪ್ರಯಾಣವಾಗಿತ್ತು. ಈ ಪ್ರಯಾಣದ ಮೂಲಕ ಅಲ್ಲಿರುವ ಬಹುತೇಕರು ಸಾವಿಗೀಡಾಗ್ತಾ ಇದ್ರು. ಇದ್ರಲ್ಲಿ ಬದುಕುಳಿದವರು ಮಾತ್ರ ಐರೋಪ್ಯ ದೇಶಗಳಲ್ಲಿ ಬದುಕು ಕಟ್ಟಿಕೊಳ್ಳೋದಕ್ಕೆ ಶುರು ಮಾಡಿದ್ರು..

ಹೀಗೆ ಅಕ್ರಮ ವಲಸಿಗರು ಹೆಚ್ಚಾಗ್ತಾ ಇರೋದನ್ನ ಗಮನಿಸಿದ ಹಾಗು ಆ ನಿರಾಶ್ರಿತರಿಂದ ಸಮಸ್ಯೆ ಎದುರಿಸಿದ ಐರೋಪ್ಯ ರಾಷ್ಟ್ರಗಳು ಈ ನಿರಾಶ್ರಿತರಿಗೆ ಬಾಗಿಲು ಬಂದ್​ ಮಾಡಿದ್ವು.. ಇದೆಲ್ಲದರ ಪರಿಣಾಮ ಇದೀಗ ಈ ನಿರಾಶ್ರಿತರ ಸಮಸ್ಯೆ ಪೋಲ್ಯಾಂಡ್​ ಹಾಗು ಬೆಲಾರಸ್​ ಗಡಿಯಲ್ಲಿ ಶುರುವಾಗಿದೆ. ಆದ್ರೆ ಇದೇ ಎಲ್ಲರ ಆಚ್ಚರಿಗೆ ಕಾರಣವಾಗಿದೆ. ಯಾಕಂದ್ರೆ ಮಧ್ಯಪ್ರಾಚ್ಯದ ನಿರಾಶ್ರಿತರು ತಮ್ಮ ರಾಷ್ಟ್ರ ಇರಾಕ್​ನಿಂದನೇ ಹೊರಡಬೇಕು ಅಂತ ನಿರ್ಧರಿಸಿ ಬೆಲಾರಸ್​ ಹಾಗು ಪೋಲ್ಯಾಂಡ್ ಗಡಿಗೆ ತಲುಪಬೇಕು ಅಂದ್ರೆ ಮೊದಲು ಇರಾಕ್​ನಿಂದ ಅರ್ಮೇನಿಯ, ಜಾರ್ಜಿಯಗಳನ್ನ ದಾಟಿಕೊಂಡು ಉಕ್ರೇನಿಯ ತಲುಪಿ ಅಲ್ಲಿಂದ ಬೆಲರಸ್​ಗೆ ತಲುಪಬೇಕು. ತದನಂತರ ಪೋಲ್ಯಾಂಡ್​ ಗಡಿಗೆ ಈ ನಿರಾಶ್ರಿತರು ತಲುಪಬೇಕು. ಆದ್ರೆ ಇದು ಅಷ್ಟು ಸುಲಭವಾಗಿ ನಡೆಯೋ ಕೆಲಸವಲ್ಲ.. ಹಾಗಾಗಿಯೇ ಇದ್ರ ಹಿಂದೆ ಬೆಲಾರಸ್ ಹಾಗು ರಷ್ಯಾ​ ಇದೆ ಅನ್ನೋ ಅನುಮಾನವನ್ನ ಐರೋಪ್ಯ ಒಕ್ಕೂಟಗಳು ವ್ಯಕ್ತಪಡಿಸ್ತಿವೆ.

ಹೌದು, ಬೆಲಾರಸ್​ನ ಮೇಲೆ ಈ ಐರೋಪ್ಯ ಒಕ್ಕೂಟ ಆರೋಪ ಮಾಡ್ತಾ ಇರೋದಕ್ಕೂ ಕಾರಣವಿದೆ. ಇರಾಕ್​ನ ಸಿರಿಯಾ, ಹಾಗು ಕುರ್ದುಸ್​ ಪ್ರಾಂತ್ಯದ ಮೂಲಕ ಸಾಕಷ್ಟು ವಿಮಾನಗಳು ಬೆಲಾರಸ್​ಗೆ ಓಡಾಡ್ತಾ ಇವೆ. ಇದೇ ವಿಮಾನದಲ್ಲಿ ಸುಲಭವಾಗಿ ಈ ನಿರಾಶ್ರಿತರು ವಾಯುಮಾರ್ಗದ ಮೂಲಕ ಬೆಲಾರಸ್​ ತಲುಪ್ತಾ ಇದ್ದಾರೆ. ಹೀಗೆ ಬೆಲಾರಸ್​ಗೆ ತಲುಪಿದ ನಿರಾಶ್ರಿತರನ್ನ ಬೆಲಾರಸ್​ ಸರ್ಕಾರ ಪೋಲ್ಯಾಂಡ್​, ಲ್ಯಾಟ್ವಯ, ಲಿಥುವೆನಿಯಾ ಗಡಿಯ ಬಳಿ ಬಿಡ್ತಾ ಇದೆ. ಹೀಗೆ ಇಲ್ಲಿ ತಲುಪಿದ ವಲಸಿಗರು ಈ ಗಡಿಗಳನ್ನ ದಾಟಿ ಯುರೋಪ್​ ಸೇರುವ ಕನಸ್ಸನ್ನ ಕಾಣ್ತಾ ಇದ್ರು. ಆದ್ರೆ ಇದಕ್ಕೆ ಐರೋಪ್ಯ ಸೇನೆ ಅಡ್ಡಗಾಲು ಹಾಕಿದೆ. ಹೀಗಾಗಿ ಈ ನಿರಾಶ್ರಿತರಲ್ಲಿರುವ ಮಕ್ಕಳು, ಮಹಿಳೆಯರು ಸರಿಯಾದ ಆಹಾರವಿಲ್ಲದೆ ಚಳಿಯಲ್ಲಿ ನಡುಗುತ್ತ ಪೋಲ್ಯಾಂಡ್​ ಗಡಿಯಲ್ಲಿ ದಿನ ದೂಡ್ತಿದ್ದಾರೆ.

ಇನ್ನು ಐರೋಪ್ಯ ಒಕ್ಕೂಟಗಳಿಗೆ ಬೆಲರಾಸ್​ ಮೇಲೆ ಅನುಮಾನ ಬರೋದಕ್ಕೆ ಮತ್ತೊಂದು ಪ್ರಮುಖ ಕಾರಣ ಅಂದ್ರೆ, ಅದು ಅಲ್ಲಿನ ಅಧ್ಯಕ್ಷ ಅಲೆಕ್ಸಾಂಡರ್​ ಲುಕಶೆಂಕೊ.. ಹೌದು ಈ ಲುಕಶೆಂಕೊನಾ ಸರ್ವಾಧಿಕಾರಿ ಧೋರಣೆ ಬಗ್ಗೆ ಈ ಹಿಂದಿನಿಂದಲೂ ಐರೋಪ್ಯ ಒಕ್ಕೂಟಗಳು ಧ್ವನಿ ಎತ್ತುತ್ತಾ ಇವೆ. ಈತನ ಆಡಳಿತವನ್ನ ಕೊನೆಗೊಳಿಸಿ ಬೆಲಾರಸ್​ನಲ್ಲಿ ಪ್ರಜಾಪ್ರಭುತ್ವ ನೆಲೆಗೊಳ್ಳೋದಕ್ಕೆ ಒತ್ತಾಯ ಮಾಡ್ತಿವೆ. ಇದೇ ಕಾರಣಕ್ಕೆ ಈತ ಐರೋಪ್ಯ ಒಕ್ಕೂಟಗಳ ಮೇಲೆ ಸೇಡು ತೀರಿಸಿಕೊಳ್ಳೋದಕ್ಕೆ ನಿರಾಶ್ರಿತರನ್ನ ಪೋಲ್ಯಾಂಡ್​ ಗಡಿಗೆ ತಂದು ಬಿಡ್ತಾ ಇದ್ದಾನೆ ಅನ್ನೊ ಆರೋಪಗಳು ಕೇಳಿ ಬರ್ತಿವೆ. ಇನ್ನು ರಷ್ಯಾದ ಹಲವು ಯೋಜನೆಗಳಿಗೆ ಐರೋಪ್ಯ ಒಕ್ಕೂಟ ನೋ ಎಂದಿದ್ದು, ಇದು ಅಲ್ಲಿನ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ ಆಕ್ರೋಶಕ್ಕೆ ಕಾರಣವಾಗಿದೆ. ಪುಟಿನ್​ ಕೂಡ ಬೆಲಾರಸ್​ನ ಈ ಕುಕೃತ್ಯಕ್ಕೆ ಸಾಥ್​ ನೀಡ್ತಾ ಇದ್ದಾರೆ ಅನ್ನೋ ಆರೋಪಗಳು ಕೇಳಿ ಬರ್ತಿವೆ..

ಸದ್ಯದ ಮಟ್ಟಿಗೆ ಐರೋಪ್ಯ ಒಕ್ಕೂಟದ ಈ ಬಿಕ್ಕಟ್ಟು ರಾಜಕೀಯವಾಗಿ ತೀವ್ರತೆಯನ್ನ ಪಡೆದುಕೊಳ್ತಾ ಇದೆ. ಆದ್ರೆ ಪೋಲ್ಯಾಂಡ್ ಗಡಿಯಲ್ಲಿರುವ ಈ ಮಧ್ಯಪ್ರಾಚ್ಯದ ನಿರಾಶ್ರಿತರು ಅಹಾರ, ಸೂರು ಇಲ್ದೆ ಕೊರೆಯುವ ಚಳಿಯಲ್ಲಿ ನಡುಗುತ್ತಾ ಸೈನಿಕರ ಬಂದೂಕನ್ನ ತಮ್ಮ ಮುಗ್ದ ನೋಟಗಳಿಂದ ನೋಡುತ್ತಾ ದಿನ ನೂಕುತ್ತಿರುವ ದೃಶ್ಯಗಳು ಮಾತ್ರ ಮನಕಲಕುವಂತಿವೆ.

17 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments