ನವದೆಹಲಿ: ಭಾರತೀಯ ಉದ್ಯಮ ಒಕ್ಕೂಟಕ್ಕೆ 125 ವರ್ಷ ತುಂಬಿದ ಹಿನ್ನೆಲೆ ಕೈಗಾರಿಕೋದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಉದ್ಯಮಿಗಳಿಗೆ ಅಭಿನಂದನೆ ಸಲ್ಲಿಸುತ್ತಾ, ಕೊರೋನಾ ಸಂದರ್ಭದಲ್ಲೂ ನಮ್ಮ ನೆರವಿಗೆ ನಿಂತು ಕೈಗಾರಿಕೆ ಜಗತ್ತು ಕಟ್ಟುವಲ್ಲಿ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ನಾವು ಮತ್ತೆ ಅಭಿವೃದ್ಧಿಯನ್ನು ಸಾಧಿಸುತ್ತೇವೆ ಎಂದು ಅಭಯ ನೀಡಿದರು.
ಮಾತು ಮುಂದುವರಿಸಿದ ಅವರು,‘ ಕೊರೋನಾ ವಿರುದ್ಧ ಹೋರಾಡುತ್ತಲೇ ನಾವು ದೇಶವನ್ನು ಕಟ್ಟಬೇಕಾಗಿದೆ. ಇಂಟೆಂಟ್, ಇನ್ಕ್ಲ್ಯೂಷನ್, ಇನ್ವೆಸ್ಟ್ಮೆಂಟ್, ಇನ್ಫ್ರಾಸ್ಟ್ರಕ್ಟರ್, ಇನೋವೇಷನ್ ಎಂಬ ಪಂಚ ಸೂತ್ರಗಳು ಭಾರತದ ಹಲವು ನಿರ್ಧಾರಗಳಲ್ಲಿ ಕಾಣಬಹುದು. ಇನ್ನು ಆರ್ಥಿಕ ಪ್ರಗತಿಯ ಬಗ್ಗೆ ಅಭಯ ನೀಡುತ್ತಾ, ಜಾಗತಿಕ ಆರ್ಥಿಕ ಅಭಿವೃದ್ಧಿಗೆ ಭಾರತ ನೆರವಾಗಿದೆ. ನಮ್ಮ ದೇಶದಲ್ಲಿರುವಉದ್ಯಮಗಳಿಂದ ವಿಶ್ವದ ಆರ್ಥಿಕತೆಗೂ ವೇಗ ಸಿಕ್ಕಂತಾಗಿದೆ. ಅಷ್ಟೆ ಅಲ್ಲದೆ ಖನಿಜ ಕ್ಷೇತ್ರದಲ್ಲೂ ಕ್ರಾಂತಿಕಾರಿ ಬದಲಾವಣೆಗಳಾಗಿದ್ದು, ಕಲ್ಲಿದ್ದಲು ವಲಯವನ್ನು ಈಗ ಖಾಸಗಿ ಕ್ಷೇತ್ರಕ್ಕೂ ಕೊಡಲಾಗಿದೆ. ಹಾಗೆಯೇ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪಾತ್ರ ದೇಶದಲ್ಲಿ ಭಾರಿ ದೊಡ್ಡದಾಗಿದೆ. ಹಾಗಾಗಿ ಕೈಗಾರಿಕೆಗಳನ್ನು ಬೆಂಬಲಿಸಲು ವಿಶೇಷ ಪ್ಯಾಕೇಜನ್ನು ಸರ್ಕಾರ ಘೋಷಣೆ ಮಾಡಿದೆ‘ ಎಂದು ಹೇಳಿದರು
ಭಾರತಕ್ಕೆ ಕೋವಿಡ್-19 ಕಾಲಿಟ್ಟ ಬಳಿಕ ದೇಶಾದ್ಯಂತ ಲಾಕ್ಡೌನ್ ಘೋಷಣೆಯಾಗಿತ್ತು. ಆದರೆ ಇದೀಗ ಲಾಕ್ಡೌನ್ ಸಡಿಲಿಕೆ ಮಾಡಿದ್ದು, ಅನ್ಲಾಕ್ ಹಂತವನ್ನು ತಲುಪಿದೆ. ಹಾಗಾಗಿ ಭಾರತ ಮತ್ತೆ ಆರ್ಥಿಕ ಪ್ರಗತಿಯನ್ನು ಸಾಧಿಸಲಿದೆ. ಈಗಾಗಲೇ 74 ಕೋಟಿ ಬಡವರಿಗೆ ಸರ್ಕಾರ ನೆರವು ನೀಡಿದೆ. 150ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವೈದ್ಯಕೀಯ ಸಾಮಾಗ್ರಿ ಕಳುಹಿಸಿದೆ. ಈ ಮೂಲಕ ದೇಶದ ಆರ್ಥಿಕತೆಯನ್ನು ಎತ್ತಲು ಬೇಕಾದ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ.
ಇನ್ನು ರೈತರಿಗೆ ದಲ್ಲಾಳಿಗಳಿಂದ ಸ್ವಾತಂತ್ರ್ಯ ಸಿಕ್ಕಿದ್ದು, ರೈತರು ತಾವು ಬೆಳೆದ ಬೆಳೆಯನ್ನು ತಮಗಿಷ್ಟ ಬಂದವರಿಗೆ ಮಾರಾಟ ಮಾಡಲು ಅವಖಾಶ ನೀಡಲಾಗಿದ್ದು, ಈ ಮೂಲಕ ರೈತರಿಗೆ ಸಮಸ್ಯೆಯಾಗಿದ್ದ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲಾಗಿದೆ ಎಂದರು.
ಒಂದೆಡೆ ನಾವೆಲ್ಲಾ ಭಾರತೀಯರ ಪ್ರಾಣ ಉಳಿಸಬೇಕು, ಇನ್ನೊಂದೆಡೆ ದೇಶದ ಆರ್ಥಿಕತೆಯನ್ನು ಕಟ್ಟಿ ಬೆಳೆಸಬೇಕಾಗಿದೆ. ಆದರೆ ಯಾವುದೇ ಕಾರಣಕ್ಕೂ ಆರ್ಥಿಕತೆಯನ್ನು ನಿರ್ಲಕ್ಷಿಸುವಂತಿಲ್ಲ. ಲಾಕ್ಡೌನ್ನಿಂದ ಆಗಿರುವ ನಷ್ಟವನ್ನು ಮತ್ತೆ ಪಡೆಯಬೇಕು. ಹಾಗಾಗಿ ನಮ್ಮ ಸಾಮರ್ಥ್ಯದ ನಾವು ನಂಬಿಕೆ ಇಡಬೇಕು. ಭಾರತ ಸಮಯದಲ್ಲೇ ಸರಿಯಾದ ನಿರ್ಧಾರವನ್ನೇ ತೆಗೆದುಕೊಂಡಿದ್ದು, ವಿಶ್ವದಲ್ಲಿ ಕೊರೋನಾ ಅಬ್ಬರಿಸುವಾಗಲೇ ನಾವು ಉತ್ತಮ ಹೆಜ್ಜೆ ಇಟ್ಟಿದ್ದೇವೆ. ಭಾರತದ ಆರ್ಥಿಕತೆ ಜೊತೆಗೆ ಕೊರೋನಾ ವಿರುದ್ಧವು ನಾವು ಹೋರಾಡಬೇಕಾಗಿದೆ. ಆತ್ಮನಿರ್ಭರದತ್ತ ಸಾಗಲು ಭಾರತಕ್ಕೆ ಇದು ಸಕಾಲವಾಗಿದೆ ಎಂದರು.