ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಪ್ಲಾಸ್ಮಾ ಥೆರಪಿಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ರಾಜ್ಯ ಸರ್ಕಾರದಿಂದ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಅನುಮೋದನೆ ಸಿಕ್ಕಿತ್ತು. ಡಾ. ವಿಶಾಲ್ ರಾವ್ ನೇತೃತ್ವದಲ್ಲಿ ಮೂವರು ವೈದ್ಯರ ತಂಡಕ್ಕೆ ರಾಜ್ಯ ಸರ್ಕಾರ ಸೂಚಿಸಿದ್ದು, ಈ ತಂಡದಲ್ಲಿ ವಿಶಾಲ್ ಅವರ ಜೊತೆಗೆ ಇಬ್ಬರು ಪರಿಣಿತ ವೈದ್ಯರಾದ ಡಾ. ಗುರುರಾಜ್ ರಾವ್ ಹಾಗೂ ಡಾ. ಜೋತ್ಸ್ನಾ ಇದ್ದಾರೆ.
ವಿಕ್ಟೋರಿಯಾ ಮೆಡಿಕಲ್ ಕಾಲೇಜಿನಲ್ಲಿ ಇಂದು ಮೊದಲ ಪ್ಲಾಸ್ಮಾ ಥೆರಪಿಯನ್ನು ಮಾಡುತ್ತಿದ್ದು, ಅದಕ್ಕಾಗಿ ಈಗಾಗಲೇ ದಾನಿಯೂ ಸಿಕ್ಕಿದ್ದಾರೆ. ಈ ಪ್ಲಾಸ್ಮಾ ಥೆರಪಿ ಯಾವ ರೀತಿ ನಡೆಯುತ್ತದೆಂದರೆ, ಕೊರೋನಾ ಸೋಂಕಿನಿಂದ ಗುಣಮುಖರಾದವರ ರೋಗ ನಿರೋಧಕ ಕಣವನ್ನು ತೆಗದುಕೊಂಡು ಮತ್ತೋರ್ವ ರೋಗಿಯ ದೇಹಕ್ಕೆ ಸೇರಿಸಲಾಗುತ್ತದೆ. ಇದರಿಂದ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಒಬ್ಬ ವ್ಯಕ್ತಿಯ ದೇಹದಿಂದ ಎರಡು ಡೋಸ್ನಷ್ಟು ಕಣಗಳನ್ನು ತೆಗೆಯಬಹುದು. ಒಬ್ಬ ರೋಗಿಗೆ ಒಂದು ಡೋಸ್ ಕಣಗಳು ಸಾಕಾಗುತ್ತದೆ. ಹಾಗಾಗಿ ಒಬ್ಬ ವ್ಯಕ್ತಿಯಿಂದ ಇಬ್ಬರು ರೋಗಿಗಳಿಗೆ ಚಿಕಿತ್ಸೆಯನ್ನು ನೀಡಬಹುದಾಗಿದೆ. ಈ ಪ್ಲಾಸ್ಮಾ ಥೆರಪಿಯನ್ನು ಸೋಂಕಿನಿಂದ ತೀವ್ರವಾಗಿ ಬಳಲುತ್ತಿರುವ ರೋಗಿಗಳಿಗೆ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಚಿಕಿತ್ಸೆಯಿಂದ ಕೊರೋನಾ ಸೋಂಕಿತರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ 3-7 ದಿನಗಳಲ್ಲಿ ಗುಣಮುಖವಾಗಬಹುದು.