ತ್ರಿವರ್ಣಧ್ವಜದ ವಿನ್ಯಾಸಕ  ಬ್ರಿಟಿಷ್  ಮಾಜಿ ಸೈನಿಕ..!

0
337

ಇತಿಹಾಸದ ಎಷ್ಟೋ ಮಹಾನ್ ವ್ಯಕ್ತಿಗಳ ಪರಿಚಯ ನಮಗಿಲ್ಲ..! ನಾವು-‌ನೀವು ಅವರನ್ನು ಪರಿಚಯ ಮಾಡಿಕೊಳ್ಳೋ ಪ್ರಯತ್ನವನ್ನೇ ಮಾಡಿಲ್ಲ ಅನ್ಸುತ್ತೆ..! ಅಂಥಾ ವ್ಯಕ್ತಿಗಳಲ್ಲಿ ನಮ್ಮ ರಾಷ್ಟ್ರಧ್ವಜದ ವಿನ್ಯಾಸಕರು ಕೂಡ ಒಬ್ರು.

ಕೆಲವರು ಇವರ ಬಗ್ಗೆ ತಿಳ್ಕೊಂಡಿರ್ಬಹುದು..? ಆದರೆ, ಎಷ್ಟೋ ಜನ ಈಗಿಲ್ಲಿ ಇದನ್ನು ಓದ್ತಾ , ‘ಹೌದಲ್ವಾ? ನಾವು ಇಷ್ಟು ದಿನ ಈ ಬಗ್ಗೆ ಯೋಚ್ನೆನೇ ಮಾಡಿಲ್ವಲ್ಲ ಅಂತ ಅನ್ಕೋತ್ತಿದ್ದೀರಿ ಅಲ್ವೇ..?

ನಾವು ತ್ರಿವರ್ಣ ಧ್ವಜಕ್ಕೆ ತುಂಬಾ ಗೌರವ ಕೊಡ್ತೀವಿ, ನಮ್ಮ ರಾಷ್ಟ್ರಧ್ವಜ ನಮ್ಮ‌ ಹೆಮ್ಮೆ. ಆದರೆ, ಇದರ ಡಿಸೈನರ್ ಮಾತ್ರ ನಮ್ಗೆ ಗೊತ್ತೇ ಇಲ್ಲ.  ನಿಮ್ಗೆ ಖಂಡಿತಾ ಆಶ್ಚರ್ಯ ಆಗುತ್ತೆ, ಆ ಡಿಸೈನರ್ ಬ್ರಿಟಿಷ್ ಮಾಜಿ ಸೈನಿಕ..! 

ಹ್ಞೂಂ, ತ್ರಿವರ್ಣಧ್ವಜದ ವಿನ್ಯಾಸಕರು ಪಿಂಗಳಿ ವೆಂಕಯ್ಯ ಅಂತ. ನೀವು ಇವರ ಬಗ್ಗೆ ಕೇಳಿದ್ದೀರೇನೋ?  ಆಂಧ್ರಪ್ರದೇಶದ ಕಡಲತೀರದ ಮಚಲಿಪಟ್ಟಣಂ ಬಳಿಯ ಹಳ್ಳಿಯೊಂದರಲ್ಲಿ 1876ರ ಆಗಸ್ಟ್ 2 ರಂದು ಹುಟ್ಟಿದ ಇವರು ಸ್ವಾತಂತ್ರ್ಯ ಹೋರಾಟಗಾರರು.

ಮಚಲಿಪಟ್ಟಣಂನಲ್ಲಿ ಪ್ರಾಥಮಿಕ ಶಿಕ್ಷಣ, ಕೊಲಂಬಾದಲ್ಲಿ ಪ್ರೌಢ ಶಿಕ್ಷಣ ಮುಗಿಸಿದರು.‌ ಪ್ರೌಢಶಿಕ್ಷಣ ಮುಗೀತಾ ಇದ್ದಂತೆ ಬ್ರಿಟಿಷ್ ಸೇನೆ ಸೇರಿದ ಇವರು, ಆಂಗ್ಲೋ-ಬೋರ್ ವಾರ್ ನಲ್ಲಿ ಭಾಗಿಯಾಗಿದ್ರು. ಈ ಆಂಗ್ಲೋ-ಬೋರ್ ಯುದ್ಧ ನಡೆದಿದ್ದು ಆಫ್ರಿಕಾದಲ್ಲಿ.‌ ಆಗ ಅಲ್ಲಿ ಇವರಿಗೆ ಗಾಂಧೀಜಿ ಅವರ ಪರಿಚಯ ಆಗುತ್ತೆ. ಅವರೊಡನೆ ಆತ್ಮೀಯತೆ ಕೂಡ ಬೆಳೆಯುತ್ತೆ.‌

ಅದಾದ್ಮೇಲೆ ಸೇನೆ ತೊರೆದು ಸ್ವಲ್ಪ‌ಕಾಲದ ಮಟ್ಟಿಗೆ ರೈಲ್ವೆ ಗಾರ್ಡ್ ಆಗಿ  ಸೇವೆ ಸಲ್ಲಿಸಿದ್ರು. ಜೊತೆಗೆ ಲಾಹೋರ್ ನಲ್ಲಿ ಎಜುಕೇಶನ್ ಕೂಡ ಮುಂದುವರೆಸಿದ್ರು.‌

ಇವರಿಗೆ ಪತ್ತಿ ವೆಂಕಯ್ಯ ಅಂತ ಇನ್ನೊಂದು ಹೆಸರಿದೆ.‌ ಹತ್ತಿ(ಪತ್ತಿ) ಬೆಳೆ ಇಳುವರಿಗಾಗಿ ಲೆಕ್ಕವಿಲ್ಲದಷ್ಟು ಪ್ರಯೋಗಗಳನ್ನು ಮಾಡಿರೋದ್ರಿಂದ ಇವರಿಗೆ ಪತ್ತಿ ವೆಂಕಯ್ಯ ಅಂತಾರೆ. ಇಷ್ಟೇ ಅಲ್ಲ ಭೂ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದು, ವಜ್ರದ ಗಣಿಗಳಲ್ಲಿ ರಿಸರ್ಚ್ ಮಾಡಿ , ‘ಡೈಮಂಡ್ ವೆಂಕಯ್ಯ’ ಅಂತ ಕರೆಸಿಕೊಂಡಿದ್ದಾರೆ.

ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ, 1916ರ ಆಸುಪಾಸಲ್ಲೇ ಬಾವುಟ ವಿನ್ಯಾಸಕ್ಕೆ ಕೈ ಹಾಕಿದ್ರು. ಹತ್ತಿ ಬಗ್ಗೆ ಬೇಕಾದಷ್ಟು ನಾಲೆಡ್ಜ್ ಇದ್ದಿದ್ರಿಂದ ಹತ್ತಿಯಿಂದಲೇ ರಾಷ್ಟ್ರಧ್ವಜ ತಯಾರಿಸಲು ಮುಂದಾದ್ರು.‌ ಸುಮಾರು 30 ರಾಷ್ಟ್ರಗಳ ಧ್ವಜಗಳನ್ನು ಅಧ್ಯಯನ ಮಾಡಿ ಭಾರತದ ರಾಷ್ಟ್ರಧ್ವಜ ವಿನ್ಯಾಸ ಮಾಡಿದ್ರು. 1921ರಲ್ಲಿ ಕೇಸರಿ-ಹಸಿರು ಬಣ್ಣದ ಬಾವುಟ ರೆಡಿ ಮಾಡಿದ ವೆಂಕಯ್ಯ ಗಾಂಧೀಜಿಗೆ ತೋರಿಸಿದ್ರು. ಅದನ್ನು ನೋಡಿದ ಗಾಂಧೀಜಿ ಬಿಳಿ ಬಣ್ಣ ಆ್ಯಡ್ ಮಾಡೋಕೆ ಹೇಳಿದ್ರು.‌ ಜಲಂಧರ್ ನ ಲಾಲ್ ಹನ್ಸ್ ರಾಜ್, ಚರಕ ಚಿತ್ರ ಇರಲೆಂದು ಸಲಹೆ‌ ಕೊಟ್ರು. ಗಾಂಧೀಜಿ,‌ಲಾಲ್ ಹನ್ಸ್ ರಾಜ್ ಹೇಳಿದ ಬದಲಾವಣೆಗಳನ್ನು ಮಾಡಿ ವೆಂಕಯ್ಯ ಅವರು ತ್ರಿವರ್ಣಧ್ವಜವನ್ನು ಸಿದ್ಧಪಡಿಸಿದ್ರು.

1947ರ ಜುಲೈ 22 ರಂದು ಪಿಂಗಳ ವೆಂಕಯ್ಯ ಅವರು ವಿನ್ಯಾಸಗೊಳಿಸಿದ ಧ್ವಜವನ್ನೇ ರಾಷ್ಟ್ರಧ್ವಜ ಅಂತ ಅಂಗೀಕರಿಸಲಾಯಿತು. ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ ವೆಂಕಯ್ಯ ಅವರು 1963ರ ಜುಲೈ 14ರಂದು ತೀರಿಕೊಂಡ್ರು. ಇವರ ಸ್ಮರಣಾರ್ಥವಾಗಿ 2009ರಲ್ಲಿ ಇವರ ಭಾವಚಿತ್ರ ಇರೋ ಸ್ಟಾಂಪ್ ಬಿಡುಗಡೆ ಮಾಡಲಾಗಿದ್ದನ್ನು ಕೂಡ ನಾವು ಇಲ್ಲಿ ನೆನಪು ಮಾಡಿಕೊಳ್ಳಬಹುದು.

LEAVE A REPLY

Please enter your comment!
Please enter your name here