ಫೋನ್​ಕಾಲ್​​ನಲ್ಲಿ ಅಧಿಕಾರಿಗಳ ವಾಕ್ಸಮರ: ಬಯಲಾಯ್ತು ಸಚಿವರು, ಶಾಸಕರ ಕೈವಾಡ

0
422

ಮೈಸೂರು:  ಮೈಸೂರು ತಾಲೂಕು ತಹಸೀಲ್ದಾರ್ ಹುದ್ದೆ ಅಲಂಕರಿಸಲು ಇಬ್ಬರು ಅಧಿಕಾರಿಗಳ ನಡುವೆ ಜಟಾಪಟಿ ಶುರುವಾಗಿದೆ. ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ರಮೇಶ್ ಬಾಬು ಹಾಗೂ ಮೈಸೂರಿಗೆ ವರ್ಗಾವಣೆಗೊಂಡಿರುವ ರೇಣುಕುಮಾರ್ ನಡುವೆ ಪೈಪೋಟಿ ನಡೆದಿದೆ. ಇಬ್ಬರ ನಡುವೆ ನಡೆದ ಮೊಬೈಲ್ ಸಂಭಾಷಣೆ ಇದೀಗ ವೈರಲ್ ಆಗಿದೆ.

ಈಗಾಗಲೇ ಅಧಿಕಾರ ವಹಿಸಿಕೊಳ್ಳಬೇಕಿದ್ದ ರೇಣುಕುಮಾರ್ ಜೊತೆ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ರಮೇಶ ಬಾಬು ಮಧ್ಯೆ ನಡೆದ ಸಂಭಾಷಣೆ ಇಲಾಖೆಯಲ್ಲಿರುವ ವ್ಯವಸ್ಥೆಯನ್ನು ಅಣಕಿಸುವಂತೆ ಮಾಡಿದೆ. ತರಿಕೆರೆ ತಾಲೂಕು ಕಚೇರಿಯಿಂದ ಮೈಸೂರು ತಾಲೂಕು ಕಚೇರಿಗೆ ವರ್ಗಾವಣೆಯಾಗಿದ್ದ ರೇಣುಕುಮಾರ್ ಇದುವರೆಗೆ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಕಾರಣ ಇದಕ್ಕೆ ಅಡ್ಡಿಯಾಗಿರುವ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ರಮೇಶ್ ಬಾಬು.

ವರ್ಗಾವಣೆ ಆದ್ರೂ ಅಧಿಕಾರ ವಹಿಸಿಕೊಳ್ಳಲು ಸಾಧ್ಯವಾಗದ ಹಿನ್ನಲೆ ರೇಣುಕುಮಾರ್ ಮಾತನಾಡಿದ ಒಂದೊಂದು ಡೈಲಾಗ್ ಇಲಾಖೆಯ ವ್ಯವಸ್ಥೆಯನ್ನು ಬಟ್ಟಾಬಯಲು ಮಾಡಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ವಸಂತ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಲೋಕೋಪಯೋಗಿ ಸಚಿವ ರೇವಣ್ಣ ಮೇಲೆ ಪ್ರಭಾವ ಬೀರಿದ ರಮೇಶ್ ಬಾಬು ತಮ್ಮ ಸ್ಥಾನದಲ್ಲಿ ಇನ್ನೂ ಮುಂದುವರೆದಿದ್ದಾರೆ. ಮೈಸೂರಿಗೆ ಬರಲು ಕಾತುರದಿಂದ ಕಾಯುತ್ತಿರುವ ರೇಣುಕುಮಾರ್ ಗೆ ಈ ಬೆಳವಣಿಗೆ ನುಂಗಲಾರದ ತುತ್ತಾಗಿದೆ. ರಮೇಶ್ ಬಾಬು ಜೊತೆ ಮಾತನಾಡುವಾಗ ಅಡ್ಜಸ್ಟ್ ಮೆಂಟ್ ವಿಚಾರಗಳನ್ನ ಪ್ರಸ್ತಾಪಿಸಿ ಇಲಾಖೆಯ ಮಾನ ಮರ್ಯಾದೆ ತೆಗೆದಿದ್ದಾರೆ. “ಈಗ ಅಧಿಕಾರ ಸ್ವೀಕರಿಸ್ತೀನಿ. ನಿನಗೆ ಒಂದು ತಿಂಗಳ ಗಡುವು ಕೊಡ್ತೀನಿ. ಎಲ್ಲಾ ಫೈಲ್ ಗಳನ್ನ ಕ್ಲಿಯರ್ ಮಾಡಿಕೋ” ಎಂದು ರೇಣುಕುಮಾರ್  ದುಂಬಾಲು ಬಿದ್ದಿದ್ದಾರೆ. ಇದಕ್ಕೆಲ್ಲಾ ಸೊಪ್ಪುಹಾಕದ ರಮೇಶ್ ಬಾಬು ಎಲೆಕ್ಷನ್ ಟೈಂ ಗೆ ಬರುವಂತೆ ಸಲಹೆ ಕೊಟ್ಟಿದ್ದಾರೆ. ಬೇರೊಬ್ಬ ವ್ಯಕ್ತಿಗೆ ಶಿಫಾರಸ್ಸು ಮಾಡಿರುವ ವಿಚಾರ ಪ್ರಸ್ಥಾಪಿಸಿರುವ ರೇಣುಕುಮಾರ್ ತನಗೆ ಬೆಂಬಲ ಸೂಚಿಸುವಂತೆ ಗೋಗರೆದಿದ್ದಾರೆ. ವರ್ಗಾವಣೆಯಲ್ಲೂ ಜಾತಿ ಥಳಕು ಹಾಕಿಕೊಂಡಿದೆ. ಬೇರೆ ಜಾತಿಯವರಿಗೆ ರಮೇಶ್ ಬಾಬು ಸಪೋರ್ಟ್ ಮಾಡುತ್ತಿರುವುದಾಗಿ ರೇಣುಕುಮಾರ್ ನೇರವಾಗಿ ಆರೋಪಿಸಿದ್ದಾರೆ. ಇವರಿಬ್ಬರ ಸಂಭಾಷಣೆಯನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ಇಲಾಖೆಯಲ್ಲಿ ನಡೆಯುತ್ತಿರುವ ವರ್ಗಾವಣೆ ಲಾಭಿಗಳ ಮತ್ತೊಂದು ಮುಖ ಪರಿಚಯವಾಗುತ್ತದೆ.

ಫೈಲ್ ಗಳ ಕ್ಲಿಯರಿಂಗ್ ಗೆ ವರ್ಗಾವಣೆಯಾದ ಅಧಿಕಾರಿಗಳು ಯಾವೆಲ್ಲಾ ಸರ್ಕಸ್ ಮಾಡ್ತಾರೆ ಅನ್ನೋ ವಿಚಾರ ಬಹಿರಂಗವಾಗಿದೆ. ಜವಾಬ್ದಾರಿಯುತ ಸ್ಥಾನಕ್ಕೆ ಹೊಸ ಅಧಿಕಾರಿ ಬಂದಾಗ ಸಾರ್ವಜನಿಕರಿಗೆ ಹಲವು ನಿರೀಕ್ಷೆಗಳು ಇರುತ್ತವೆ. ಆದ್ರೆ ಇಲ್ಲಿ ಆಗಮಿಸುವ ಹಾಗೂ ನಿರ್ಗಮಿಸುವ ಅಧಿಕಾರಿಗಳ ನಡುವೆಯೇ ಅಡ್ಜಸ್ಟ್ ಮೆಂಟ್ ಗಳು ನಡೆದರೆ ನೈತಿಕತೆ  ಹಾಗೂ ನ್ಯಾಯ ಎಲ್ಲಿ ಸಿಗುತ್ತೆ  ಎಂಬ ಪ್ರಶ್ನೆ ಹುಟ್ಟುತ್ತದೆ. ಅಧಿಕಾರಿಗಳ ಇಂತಹ ಅಡ್ಜಸ್ಟ್ ಮೆಂಟ್ ಗಳು ಪಾರದರ್ಶಕ ಆಡಳಿತಕ್ಕೆ ಧಕ್ಕೆಯಾಗೋದು ಸತ್ಯ. ಇಂತಹ ಅಡ್ಜಸ್ಟ್ ಮೆಂಟ್ ಅಧಿಕಾರಿಗಳು ನಮಗೆ ಬೇಕೇ ಅಂತಿದ್ದಾರೆ ಸಾರ್ವಜನಿಕರು.

ಟಿ.ಎನ್.ಕೃಷ್ಣಕುಮಾರ್, ಮೈಸೂರು

LEAVE A REPLY

Please enter your comment!
Please enter your name here