ಚಾಮರಾಜನಗರ: ಯಳಂದೂರು ತಾಲೂಕು ಮದ್ದೂರು ಗ್ರಾಮದ ಜನ ಚಕ್ರಪಾಣಿ ದೇವಸ್ಥಾನಕ್ಕೆ ಹೋಗಲು ಆತಂಕಪಡುತ್ತಿದ್ದಾರೆ. ಹೊಯ್ಸಳರ ಕಾಲದ ದೇವಸ್ಥಾನ ಇದೀಗ ಕುಸಿಯುವ ಹಂತಕ್ಕೆ ತಲುಪಿದ್ದು ಭಕ್ತರು ದೇವಸ್ಥಾನಕ್ಕೆ ಹೋಗಲು ಹಿಂಜರಿಯುತ್ತಿದ್ದಾರೆ.
ಈ ದೇವಸ್ಥಾನ ಬಾವಲಿಗಳು, ಹಾವುಗಳ ವಾಸಸ್ಥಾನವಾಗಿದ್ದು ಕಂಬಗಳು ಶಿಥಿಲಾವಸ್ಥೆಗೆ ತಲುಪಿ ಕುಸಿಯುವ ಹಂತಕ್ಕೆ ಬಂದಿವೆ. ಇಷ್ಟೆ ಅಲ್ಲದೇ ದೇವಾಲಯದ ಕಲ್ಲಿನ ಮೇಲೆಲ್ಲಾ ಗಿಡಗಂಟಿ ಬೆಳೆದು ಪಾಳುಬಿದ್ದಂತಾಗಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸಿ ದೇವಾಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕೆಂದು ದೇವಸ್ಥಾನದ ಅರ್ಚಕರು ಸೇರಿದಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಈ ಹಿಂದೆ ಧರ್ಮಸ್ಥಳ ಸಮಿತಿಯು ಈ ದೇಗುಲಕ್ಕೆ ಭೇಟಿಕೊಟ್ಟು ಜೀರ್ಣೋದ್ಧಾರ ಮಾಡುವ ಬಗ್ಗೆ ಆಸಕ್ತಿ ವಹಿಸಿತ್ತು. ಆದರೆ ಅದು ಈಡೇರಲಿಲ್ಲ. ಹಾಗೇ ಇದರ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಾವ೯ಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ದೇವಾಲಯದ ಮುಂಭಾಗ ಮತ್ತು ಒಳಭಾಗದ ಕೆಲವು ಭಾಗದಲ್ಲಿ ಕುಸಿತ ಕಂಡಿದ್ದು, ಸಂಪೂರ್ಣ ಕುಸಿಯುವ ಮುನ್ನ ಅಧಿಕಾರಿಗಳು ಎಚ್ಚೆತ್ತು ದೇಗುಲದ ಜೀರ್ಣೋದ್ಧಾರಕ್ಕೆ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಆಗ್ರಹ.
ಒಟ್ಟಿನಲ್ಲಿ ಸುಮಾರು 400 ವರ್ಷ ಇತಿಹಾಸ ಇರುವ ಈ ದೇವಸ್ಥಾನದ ಜೀರ್ಣೋದ್ಧಾರ ಆಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ದೇಗುಲ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದರೂ ಜೀರ್ಣೋದ್ಧಾರಕ್ಕೆ ಮುಂದಾಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಬೀಳುವ ಮುನ್ನವಾದರೂ ಈ ದೇಗುಲದ ಬಗ್ಗೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕೆಂಬುದು ಎಲ್ಲರ ಒತ್ತಾಯವಾಗಿದೆ.
ಶ್ರೀನಿವಾಸ್ ನಾಯಕ್, ಚಾಮರಾಜನಗರ