Friday, September 30, 2022
Powertv Logo
HomePower Specialಆರಕ್ಕೂ ಹೆಚ್ಚು ವರ್ಷ ಉಪವಾಸ ಮಾಡಿ ದಾಖಲೆ ಬರೆದಿರೋ ವಿಶ್ವೇಶ ತೀರ್ಥರು!

ಆರಕ್ಕೂ ಹೆಚ್ಚು ವರ್ಷ ಉಪವಾಸ ಮಾಡಿ ದಾಖಲೆ ಬರೆದಿರೋ ವಿಶ್ವೇಶ ತೀರ್ಥರು!

ವಿಶ್ವದಾದ್ಯಂತ ದೊಡ್ಡ ಭಕ್ತ ಸಮೂಹವನ್ನೇ ಹೊಂದಿದ್ದವರು ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು. ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಶ್ರೀ ಸಾಮಾನ್ಯನನವರೆಗೆ ಶ್ರೀಗಳಿಗೆ ಕೋಟ್ಯಂತರ ಭಕ್ತರಿದ್ದಾರೆ. ಬಾಲ್ಯದಿಂದಲೇ ನಾನಾ ಹೋರಾಟಗಳಲ್ಲಿ ಪಾಲ್ಗೊಂಡಿದ್ದ ಶ್ರೀಗಳು ಅಜಾತ ಶತ್ರು, ಧರ್ಮ ಸಮನ್ವಯಕಾರರರಾಗಿದ್ದವರು.

ಡಿಸೆಂಬರ್​ 20ರಂದು ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೆ ಕೃಷ್ಣಮಠದ ರೀತಿಯ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಬರುವ ಭಕ್ತರು, ವಿಶ್ವೇಶತೀರ್ಥರ ಆರೋಗ್ಯ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಅಂತ ದೇವರಲ್ಲಿ ಪ್ರಾರ್ಥಿಸಿದ್ದರು. 9 ದಿನ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲೇ ಶ್ರೀಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸದೆ ಹರಿಪಾದ ಸೇರಿಕೊಂಡರು.

ವಿಶ್ವದೆಲ್ಲೆಡೆ ಅಪಾರ ಭಕ್ತರನ್ನ ಹೊಂದಿರೋ ಪೇಜಾವರ ಶ್ರೀಗಳು ಕೇವಲ ಆಧ್ಯಾತ್ಮ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಇತರೆ ಕ್ಷೇತ್ರಗಳಿಗೂ ತಮ್ಮದೇ ಆದ ಕೊಡುಗೆಯನ್ನ ನೀಡಿದ್ದರು. 89ರ ಇಳಿ ವಯಸ್ಸಿನಲ್ಲೂ ಚಿರ ಯುವಕರಂತೆ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳು ಜನರ ಸೇವೆಯನ್ನೇ ಜನಾರ್ದನ ಸೇವೆ ಅಂದುಕೊಂಡಿದ್ದರು. ಸಾಮಾಜಿಕ ಕಳಕಳಿ ಹೊಂದಿದ್ದ ಶ್ರೀಗಳು ದಾಖಲೆಯನ್ನೂ ಮಾಡಿದ್ದಾರೆ.. ಆ ದಾಖಲೆ ಏನಪ್ಪಾ ಅಂದ್ರೆ, ಪೇಜಾವರ ಶ್ರೀಗಳು 6 ವರ್ಷಕ್ಕೂ ಹೆಚ್ಚು ಸಮಯ ಉಪವಾಸದಲ್ಲೇ ಕಳೆದಿದ್ದರು. 

1938ರಲ್ಲಿ ಪೇಜಾವರ ಶ್ರೀಗಳು ಸನ್ಯಾಸ ದೀಕ್ಷೆ ಸ್ವೀಕರಿಸಿದ ಬಳಿಕ  ಇಲ್ಲಿಯವರೆಗಿನ ಲೆಕ್ಕಾಚಾರ ಹಾಕಿದ್ರೆ ವರ್ಷದಲ್ಲಿ ಅವರು 24 ಏಕಾದಶಿ, 2 ಗ್ರಹಣ, 1 ಕೃಷ್ಣಾಷ್ಟಮಿ ಅಂದ್ರೂ ಕನಿಷ್ಠ 27 ದಿನ ಉಪವಾಸ ಮಾಡುತ್ತಿದ್ದರು. ಅಂದ್ರೆ, ಸನ್ಯಾಸ ದೀಕ್ಷೆ ಪಡೆದಾಗಿನಿಂದ ಇಲ್ಲಿಯವರೆಗೆ ವಿಶ್ವೇಶ ತೀರ್ಥ ಸ್ವಾಮೀಜಿಗಳು ಸುಮಾರು 6 ವರ್ಷಕ್ಕೂ ಹೆಚ್ಚು ಕಾಲ ಉಪವಾಸ ಕೈಗೊಳ್ಳೋ ಮೂಲಕ ದಾಖಲೆ ಬರೆದಿದ್ದರು. ಈ ದಿನದ ಲೆಕ್ಕಾಚಾರದಲ್ಲಿ ಅಧಿಕ ಮಾಸದ ಉಪವಾಸಗಳು ಹಾಗೂ ಶ್ರವಣೋಪವಾಸಗಳು ಸೇರಿಲ್ಲ. ಹೀಗಾಗಿ ಶ್ರೀಗಳ ಈ ದಾಖಲೆ ಇದೊಂದು ಐತಿಹಾಸಿಕ ದಾಖಲೆಯೇ ಸರಿ.

ಇನ್ನು, ಕೇವಲ ಆಧ್ಯಾತ್ಮ ಕ್ಷೇತ್ರ ಮಾತ್ರವಲ್ಲದೆ, ಸಮಾಜದ ಬಗ್ಗೆಗೂ  ವಿಶ್ವೇಶ ತೀರ್ಥರು ಅಪಾರ ಪ್ರೀತಿಯನ್ನ ಇಟ್ಟುಕೊಂಡಿದ್ದರು. ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಉಳಿದುಕೊಂಡು ಮೇಲು, ಕೀಳು ಅನ್ನೋ ಅಸಮಾನತೆ ಮತ್ತು ಅಸ್ಪೃಶ್ಯತೆಯನ್ನ ಕಿತ್ತೊಗೆಯಬೇಕು ಅನ್ನೋ ವಾದವನ್ನೂ ಮೊದಲಿನಿಂದಲೂ ಪೇಜಾವರ ಶ್ರೀಗಳು ಮಾಡುತ್ತಲೇ ಬಂದಿದ್ದರು. ಸಮಾಜದಲ್ಲಿ ಶೋಷಣೆಗೆ ಒಳಗಾಗುವ ಶೋಷಿತರ ನಿವಾಸಗಳಿಗೆ ಭೇಟಿ ಕೊಡುವ ಮೂಲಕ ನಮ್ಮಲ್ಲಿರೂ ಮೇಲು, ಕೀಳು ಭಾವನೆಯನ್ನ ಕಿತ್ತೊಗೆಯಲು ಪೇಜಾವರ ಶ್ರೀಗಳು ಹಿಂದಿನಿಂದಲೂ ಹೋರಾಡುತ್ತಲೇ ಬಂದಿದ್ದರು.

ದಲಿತರ ಮೇಲೆ ನಡೆಯುತ್ತಿರೋ ಶೋಷಣೆಯನ್ನ ಕುಗ್ಗಿಸುವ ಉದ್ದೇಶದಿಂದ ಶ್ರೀಗಳು ಹಲವಾರು ಬಾರಿ ದಲಿತ ಕೇರಿಗಳಲ್ಲಿ ಸಾಮರಸ್ಯದ ಪಾದಯಾತ್ರೆ ನಡೆಸಿದ್ದರು. ದಲಿತರೇ ಹೆಚ್ಚಿರುವ ಮೈಸೂರಿನ ಮಂಜುನಾಥಪುರ ಬಡಾವಣೆಯ ದಲಿತರ ಮನೆಗೆ ಭೇಟಿ ನೀಡೋ ಮೂಲಕ ಪೇಜಾವರ ಶ್ರೀಗಳು ದಲಿತರ ಮೇಲಿನ ಶೋಷಣೆ ವಿರುದ್ಧ ಸಿಡಿದೆದ್ದಿದ್ದರು. ಮಂಜುನಾಥಪುರದ ದಲಿತ ದಂಪತಿ ಚೌಡಪ್ಪ, ರಾಜಮ್ಮ ಮನೆಗೆ ತೆರಳಿ ಆಶೀರ್ವಾದ ಮಾಡಿದ್ದರು. ಶ್ರೀಗಳು ಮೊದಲಿನಿಂದಲೂ ತಮ್ಮ ಆರೋಗ್ಯದ ಕಡೆಗೆ ಗಮನ ಕೊಡುವುದಕ್ಕಿಂತ ಸಮಾಜಸೇವೆಯ ಕಡೆಗೆ ಹೆಚ್ಚು ಗಮನ ಕೊಡುತ್ತಲೇ ಬಂದಿದ್ದರು. ಅನಾರೋಗ್ಯದ ನಡುವಲ್ಲೂ ವೀಲ್ ಚೇರ್​ನಲ್ಲೇ ಸಾಮರಸ್ಯದ ಪಾದಯಾತ್ರೆ ನಡೆಸಿದ್ದ ಪೇಜಾವರ ವಿಶ್ವೇಶ ತೀರ್ಥ ಶ್ರೀಗಳು ದಲಿತ ಕೇರಿಗೆ ತೆರಳಿ ಆಶೀರ್ವಚನ ನೀಡಿದ್ದರು.

ಪೇಜಾವರ ಶ್ರೀಗಳ ಸಮಾಜಸೇವೆ ಅದೆಷ್ಟೋ ಸ್ವಾಮೀಜಿಗಳಿಗೆ ಆದರ್ಶ. ಅಚ್ಚುಕಟ್ಟಾದ ಬದುಕು ಎಲ್ಲರಿಗೂ ಅನುಕರಣೀಯ. ಎಲ್ಲರನ್ನೂ ತಮ್ಮವರು ಎಂದು ಸ್ವೀಕರಿಸುವ ವಿಶಾಲ ಹೃದಯ ವಿಶ್ವೇಶ ತೀರ್ಥ ಸ್ವಾಮೀಜಿಗಳದ್ದಾಗಿತ್ತು. ಇನ್ನು, ಗೋಹತ್ಯೆ ನಿಷೇಧ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮತ್ತು ಗಂಗಾ ನದಿ ಸ್ವಚ್ಛತಾ ಕಾರ್ಯಗಳಲ್ಲೂ ಪೇಜಾವರ ಶ್ರೀಗಳು ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು.

ದೇಶದ ಬೆನ್ನೆಲುಬಾಗಿರೋ ಅನ್ನದಾತನ ಬಗೆಗೂ ಪೇಜಾವರ ಶ್ರೀಗಳು ಅಘಾದವಾದ ಕಳಕಳಿ ಹೊಂದಿದ್ದರು. ಸರ್ಕಾರಗಳು ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕು.. ಮತ್ತು ದೇಶದ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದ್ದ ಪೇಜಾವರ ಶ್ರೀಗಳು ಪ್ರಧಾನಿ ಮೋದಿ ಅವ್ರ ಮೇಲೂ ಒತ್ತಡ ಹೇರಿದ್ದರು.. ಧಾರ್ಮಿಕ ವಿಷಯಗಳನ್ನು ಹೊರತುಪಡಿಸಿ ಇಂದು ದೇಶ ಬೇರೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಬೇಕಿದೆ ಅಂತ ವಿಶ್ವೇಶ ತೀರ್ಥರು ಸಾಕಷ್ಟು ಕಡೆಗಳಲ್ಲಿ ಹೇಳಿದ್ದರು. ಜೈನರು, ಬುದ್ಧರು ಅಥವಾ ಸಿಖ್ಖರು ಎಲ್ಲರೂ ಹಿಂದೂ ಧರ್ಮಕ್ಕೆ ಸೇರಿದವ್ರು. ಯಾಕೆಂದ್ರೆ, ಇವ್ರೆಲ್ಲಾ ಭರತ ಖಂಡದ ಹಿಂದಿನ ಸನ್ಯಾಸಿಗಳು, ಋಷಿಗಳು ಹಿಂದೂ ಧರ್ಮದಿಂದಲೇ ಬಂದವರಾಗಿದ್ದಾರೆ. ನಂತರ ದೇಶದಲ್ಲಿ ಬ್ರಿಟಿಷರ ಆಳ್ವಿಕೆ ನಂತರ ಹಿಂದೂ ಧರ್ಮ ಒಡೆದು ಹೋಯ್ತು ಅನ್ನೋ ವಾದವನ್ನ ಪೇಜಾವರ ಶ್ರೀಗಳು ಪ್ರತಿಪಾದಿಸುತ್ತಲೇ ಬಂದಿದ್ದರು.

ಮಾಜಿ ಸಿಎಂ ಸಿದ್ದರಾಮಯ್ಯನವ್ರ ಈ ಹಿಂದಿನ ಸರ್ಕಾರ ಮಠಗಳನ್ನ ಸ್ವಾಧೀನಗೊಳಿಸಿಕೊಳ್ಳುವ ಪ್ರಕ್ರಿಯೆಗೆ ಮುಂದಾಗಿತ್ತು.. ಸರ್ಕಾರದ ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದ ದ ವಿಶ್ವೇಶ ತೀರ್ಥರು ಸರ್ಕಾರ ಉಡುಪಿಯ ಶ್ರೀಕೃಷ್ಣ ಮಠವನ್ನ ಸ್ವಾಧೀನಪಡಿಸಿಕೊಳ್ಳಲು ಮುಂದಾದ್ರೆ ನಾನು ಮಠದಲ್ಲಿ ಉಳಿಯುವುದಿಲ್ಲ.. ಬೇಕಾದ್ರೆ ಮಠ ತೊರೆಯುತ್ತೇನೆ.. ನನಗೆ ಸರ್ಕಾರಿ ನೌಕರನಾಗುವುದಕ್ಕೆ ಇಷ್ಟವಿಲ್ಲ ಅಂತ ಕಡ್ಡಿ ಮುರಿದಂತೆ ಪೇಜಾವರ ಶ್ರೀಗಳು ಸರ್ಕಾರದ ವಿರುದ್ಧ ಗುಡುಗಿದ್ದರು. 

7 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments