HomeP.Specialಮುಂಡರಗಿ ಮಠದಲ್ಲಿ ಆನ್ ಲೈನ್ ಪ್ರವಚನ ಯಶಸ್ವಿ!

ಮುಂಡರಗಿ ಮಠದಲ್ಲಿ ಆನ್ ಲೈನ್ ಪ್ರವಚನ ಯಶಸ್ವಿ!

ಗದಗ: ಧಾರ್ಮಿಕತೆ ಎನ್ನುವದು ಕೇವಲ ಬೋಧನೆಗೆ ಮಾತ್ರ ಸೀಮಿತವಲ್ಲ. ಬದಲಾಗಿ ಆಚರಣೆಗೆ ತಂದಾಗ ಅದರ ಪರಿಪಕ್ವ ಅರ್ಥವಾಗುತ್ತದೆ. ಈ ದಿಶೆಯಲ್ಲಿ ಕರ್ನಾಟಕದ ಮಠಮಾನ್ಯಗಳು ಮಾನವನ ಕಲ್ಯಾಣಕ್ಕೋಸ್ಕರ ಹಲವು ಧಾರ್ಮಿಕ ಪರಂಪರೆಗಳನ್ನ ಹಾಕಿಕೊಂಡು ಬಂದಿದ್ದು ಈ ಬಾರಿ ಕೊರೋನಾ ಹೊಡೆತ ಇವೆಲ್ಲದಕ್ಕೂ ತಡೆ ಒಡ್ಡಿತ್ತು. ಆದರೆ ಇಲ್ಲೊಂದು ಮಠ ಮಾತ್ರ ವಿಭಿನ್ನ ರೀತಿಯಲ್ಲಿ ಭಕ್ತರಿಗೆ ಶರಣರ ದಿವ್ಯ ಸಂದೇಶ ನೀಡಿ ಅರ್ಥಪೂರ್ಣ ಆಚರಣೆಗೆ ಮತ್ತಷ್ಟು ಮೆರಗು ತಂದೊಡ್ಡಿದೆ.

ವೀರಶೈವ ಲಿಂಗಾಯತ ಧರ್ಮದಲ್ಲಿ ಮಠ, ಮಾನ್ಯಗಳು ತನ್ನದೇ ಆದ ಮಹತ್ವದ ಸ್ಥಾನ ಪಡೆದುಕೊಂಡಿವೆ. ಮಠಗಳ ಮೂಲಕ ಭಕ್ತರಿಗೆ ಶಿವಾನುಭವ, ಪ್ರವಚನ,ಉಪನ್ಯಾಸ, ದಾಸೋಹ, ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ಭಕ್ತರಿಗೆ ಸಂಸ್ಕಾರದ ಹಾದಿ ಹಿಡಿದಿದೆ. ಆದರೆ ಈ ಬಾರಿಯ ಕೊರೋನಾ ಹೊಡೆತ ಇಂತಹ ಅದೆಷ್ಟೋ ಧಾರ್ಮಿಕ ಆಚರಣೆಗಳಿಗೆ  ಬ್ರೇಕ್ ಹಾಕಿದ್ದಂತು ಸುಳ್ಳಲ್ಲ. ಆದರೂ ಪರಂಪರೆ, ಆಚರಣೆ ಬಿಡದ ಮಠಗಳು ಹಲವಾರು ಕಟ್ಟುಪಾಡುಗಳ ನಡುವೆಯೇ ನಿಸ್ವಾರ್ಥದಿಂದ ಭಕ್ತರಿಗೆ ವೈರಾಗ್ಯದ ಉಪದೇಶವನ್ನ ನೀಡುವಲ್ಲಿ ಯಶಸ್ವಿಯಾಗಿವೆ. ಇದಕ್ಕೆ ಸಾಕ್ಷಿ ಗದಗ ಜಿಲ್ಲೆ ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ತಿಂಗಳ ಪರ್ಯಂತವಾಗಿ ಪುರಾಣ, ಪ್ರವಚನ ಮೂಲಕ ಭಕ್ತರಿಗೆ ಜ್ಞಾನೋಪದೇಶ ನೀಡುವ ಕಾರ್ಯ ಶ್ರೀಮಠದಲ್ಲಿ ನಡೀತಾ‌ ಬಂದಿದೆ. ಆದರೆ ಈ ಬಾರಿ ಲಾಕ್​​ಡೌನ್ ನಿಯಮ ಇದ್ದುದರಿಂದ ಶ್ರೀಮಠದ ಸಾಂಸ್ಕೃತಿಕ ವೇದಿಕೆ ವಿಭಿನ್ನ ರೀತಿಯಲ್ಲಿ ಪ್ರವಚನ ಸಾರಿದೆ. ಭಕ್ತರಿಗೆ ಜ್ಞಾನದ ಬೆಳಕು ನೀಡೋ ಈ ಕಾರ್ಯಕ್ರಮ ಮೊಟಕಾಗಬಾರದು ಅಂತಾ ಶ್ರೀಮಠದ ಪೂಜ್ಯರಾದ ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಸ್ವಾಮಿಜಿ ಅವರ ಸದಿಚ್ಛೆ. ಹೀಗಾಗಿ ಇಲ್ಲಿನ ಕೆ.ಆರ್.ಬೆಲ್ಲದ ಕಾಲೇಜಿನ ಸಿಬ್ಬಂದಿ ವರ್ಗ ಆನ್ಲೈನ್ ತಂತ್ರಾಶದ ಮೂಲಕ ಭಕ್ತರಿಗೆ ಶ್ರಾವಣ ಮಾಸದ ಪ್ರವಚನಗಳನ್ನ ತಲುಪಿಸಿದೆ. ಪ್ರತಿದಿನ ಅನುಭವಿ ಉಪನಸ್ಯಾಸಕರು, ವಿವಿಧ ಮಠಾಧಿಶರಿಂದ 12 ನೇ ಶತಮಾನದ ಶರಣಗಣ ಅಮೃತವಾಣಿ ಪ್ರವಚನಗಳನ್ನ ಸಾದರಪಡಿಸಿದೆ. ಯೂಟ್ಯೂಬ್, ಜೂಮ್ ಆಪ್ ಮೂಲಕ ಈ ತಂತ್ರಾಂಶ ಬಳಸಿಕೊಂಡು ಸಾವಿರಾರು ಭಕ್ತರು ವೀಕ್ಷಿಸುವ ಹಾಗೆ, ಶ್ರೀಮಠ ಶ್ರಾವಣ ಮಾಸದ ಶ್ರವಣ ಭಾಗ್ಯವನ್ನ ನೀಡುವಲ್ಲಿ ಸಾಕ್ಷಿಯಾಗಿದೆ.

ಇನ್ನು ಸಾಹಿತ್ಯದ ಮಠವಾಗಿರೋ ಶ್ರೀಮಠದಲ್ಲಿ ಪ್ರತಿ ಮೂರ್ನಾಲ್ಕು ತಿಂಗಳಿಗೊಮ್ಮೆ ಒಂದಲ್ಲ ಒಂದು ಧಾರ್ಮಿಕ ಸಮಾರಂಭಗಳು ನೆರವೇರುತ್ತಾ ಬಂದಿವೆ. ಶ್ರಾವಣ ಮಾಸದಲ್ಲಂತೂ ನಾಡಿನ ಹೆಸರಾಂತ ಶರಣರ ಕುರಿತು ಅನುಭವಿ ಪಂಡಿತರಿಂದ ಪ್ರವಚನ, ದಿನನಿತ್ಯ ಸಾವಿರಾರು ಭಕ್ತರಿಗೆ ಪ್ರಸಾದ, ಕಲೆ, ಸಾಹಿತ್ಯ ಬಿಂಬಿಸೋ ಸಾಂಸ್ಕೃತಿಕ ಕಾರ್ಯಕ್ರಮ, ಭಕ್ತರಿಗೆ ಸೇವಾವಕಾಶ, ಸಾಧಕರಿಗೆ ಸನ್ಮಾನ ಹೀಗೆ ಒಂದು ತಿಂಗಳ ಪೂರ್ತಿ ಅದ್ಧೂರಿಯಾಗಿ ಶ್ರಾವಣದ ವೈಭವ ಜರುಗುತ್ತಿತ್ತು.ಕೊರೋನಾ ಲಾಕ್ಡೌನ್ ಇದಕ್ಕೆ ಸಂಪೂರ್ಣವಾಗಿ ಬ್ರೇಕ್​ ಹಾಕಿದ್ದರ ಹಿನ್ನೆಲೆ ಕಾಲೇಜಿನ ಪ್ರಾಚಾರ್ಯ ಹಾಗೂ ಸಿಬ್ಬಂದಿ ಈ ವಿನೂತನ ಕಾರ್ಯಕ್ಕೆ ಮುಂದಾಗಿದೆ. ಪರಸ್ಥಳದ ಭಕ್ತರೂ ಸಹ ಪ್ರವಚನದ ಸಾರವನ್ನ ವೀಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದು ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

ಎಂಥಾ ಕಷ್ಟದ ಸಂದರ್ಭದಲ್ಲೂ ತನ್ನ ಪರಂಪರೆ, ಆಚರಣೆ, ಭಕ್ತರ ಹಿತಾಸಕ್ತಿ ಕೈಬಿಡದೇ ಭಕ್ತರಲ್ಲಿರೋ ಅಂಧಕಾರ ತೊಳೆದು ಸುಜ್ಞಾನದ ಬೆಳಕು ನೀಡುವಲ್ಲಿ ಮುಂಡರಗಿ ಅನ್ನದಾನೀಶ್ವರ ಸಂಸ್ಥಾನಮಠ ಸಾಕ್ಷಿಯಾಗಿದೆ. ಅದೆಷ್ಟೋ ಅವಘಡಗಳಿಗೆ ಆನ್ ಲೈನ್ ಅನ್ನೋದು ದುರುಪಯೋಗವಾಗಿದ್ದು ಶ್ರೀಮಠ ಮಾತ್ರ ಇದನ್ನು ಈ ರೀತಿಯಾಗಿ ಬಳಸಿಕೊಂಡು ಸಮಾಜಕ್ಕೆ ಒಳ್ಳೆ ಸಂದೇಶ ನಿಡಿದ್ದು ನಿಜಕ್ಕೂ ಮೆಚ್ಚುವ ಕಾರ್ಯವೇ ಸರಿ ಅಂತಾ ನಾಡಿನ ಭಕ್ತಸಮೂಹ ಹರ್ಷ ವ್ಯಕ್ತಪಡಿಸಿದೆ.

-ಮಹಾಲಿಂಗೇಶ್ ಹಿರೇಮಠ

LEAVE A REPLY

Please enter your comment!
Please enter your name here

- Advertisment -

Most Popular

Recent Comments