ಖಾಸಗಿ ಶಾಲೆಗಳ ಆನ್ ಲೈನ್ ಶಿಕ್ಷಣ ಕಂಡು ತಡಬಡಾಯಿಸಿದ ರಾಜ್ಯ ಸರಕಾರ ತಾನೂ ‘ಚಂದನ’ ವಾಹಿನಿಯಲ್ಲಿಯೇ ಆನ್ ಲೈನ್ ಶಿಕ್ಷಣ ಶುರು ಮಾಡಿತ್ತು. ‘ಸೇತುಬಂಧ’ ಮೂಲಕ 8 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಆನ್ ಲೈನ್ ಬೋಧನೆಯ ಮೊರೆ ಹೋಗಿತ್ತು. ಆದರೆ ಸರಕಾರದ ಈ ಆನ್ ಲೈನ್ ಶಿಕ್ಷಣ ಅದೆಷ್ಟು ಮಕ್ಕಳಿಗೆ ತಲುಪಿತೋ ಗೊತ್ತಿಲ್ಲ.
ಪೂರ್ವ ತಯಾರಿ ಇಲ್ಲದೇ ಸರಕಾರ ಮಾಡಿದ ಎಡವಟ್ಟಿಗೆ, ಟಿವಿ ವಾಹಿನಿ ಮೂಲಕ ಶಿಕ್ಷಣ ಆರಂಭವಾಗಿ ಐದು ದಿನಗಳಾದರೂ ಇಲ್ಲಿ ಇಬ್ಬರು ವಿದ್ಯಾರ್ಥಿಗಳು ಪಾಠ ವೀಕ್ಷಿಸೋದಕ್ಕೆ ಸಾಧ್ಯವಾಗದೇ ಇರೋ ನೋವಿನಲ್ಲಿದ್ದಾರೆ. ಕಾರಣ ಸ್ಮಾರ್ಟ್ ಫೋನ್, ಟಿವಿಗಳಿಲ್ಲದೇ ಈ ಇಬ್ಬರು ಮಕ್ಕಳಿಗೆ ಸರಕಾರದ ಇ-ಕ್ಲಾಸ್ ಇನ್ನೂ ತಲುಪಿಲ್ಲ.
ಅಂದಹಾಗೆ ಇದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪ ಇಲ್ಲಿನ ಮಕ್ಕಳಿಬ್ಬರು ಪಡುತ್ತಿರುವ ವ್ಯಥೆ. ಇಲ್ಲಿನ ಮೋನಪ್ಪ ಕುಂಬಾರ ಹಾಗೂ ಸುಶೀಲಾ ದಂಪತಿಯ ಮಕ್ಕಳಾದ ವರುಣ್ ಹಾಗೂ ಆತನ ತಂಗಿ ಲಾವಣ್ಯ ಹೈಸ್ಕೂಲ್ ವಿದ್ಯಾರ್ಥಿಗಳಾಗಿದ್ದಾರೆ. ವರುಣ್ 10 ನೇ ತರಗತಿಯಲ್ಲಿದ್ದರೆ, ಆತನ ತಂಗಿ 8 ನೇ ತರಗತಿಯಲ್ಲಿದ್ದಾಳೆ. ಕಿತ್ತು ತಿನ್ನುತ್ತಿರುವ ಬಡತನ ಈ ಮಕ್ಕಳನ್ನ ‘ಫ್ರೀ ಟೈಮ್’ ನಲ್ಲೂ ದುಡಿಮೆಗೆ ತಳ್ಳಿದೆ. ಆದರೆ ಕಡಬ ಸರಕಾರಿ ಪ್ರೌಢ ಶಾಲೆಯ ಪ್ರತಿಭಾವಂತರಾದ ಈ ಇಬ್ಬರು ಮಕ್ಕಳು ತಾವು ಕಲಿತು ಅಪ್ಪ-ಅಮ್ಮನನ್ನ ಚೆನ್ನಾಗಿ ನೋಡಬೇಕೆನ್ನುವ ಆಸೆ ಹೊಂದಿದ್ದಾರೆ.
ಆದರೆ ಇದೆಲ್ಲಕ್ಕೂ ಸರಕಾರದ ಇ-ಕ್ಲಾಸ್ ತಣ್ಣೀರೆರಚಿದೆ. ಪ್ರತಿಯೊಂದಕ್ಕೂ ನೆರೆಮನೆಯನ್ನೇ ಅವಲಂಬಿತವಾದ ಮೋನಪ್ಪ ಕುಂಬಾರ ಕುಟುಂಬಕ್ಕೆ ಈ ಆನ್ ಲೈನ್ ಶಿಕ್ಷಣಗಳೆಲ್ಲವೂ ಕನಸಿನ ಮಾತಾಗಿದೆ. ನೆರೆಮನೆಗೆ ಹೋಗಿ ಒಮ್ಮೆ ತರಗತಿ ಆಲಿಸಬೇಕೆಂದರೆ ಅಲ್ಲೂ ಪವರ್ ಕಟ್ ಸಮಸ್ಯೆ. ಮನೆಯಲ್ಲಿ ಶೌಚಾಲಯವೇ ಇಲ್ಲದೆ ನೆರೆಮನೆಗೆ ಅವಲಂಬಿತವಾಗಿರುವ ಈ ಕುಟುಂಬಕ್ಕೆ ಇಂತಹ ಆನ್ ಲೈನ್ ಶಿಕ್ಷಣ ಗಗನ ಕುಸುಮದಂತಾಗಿದೆ. ಅನಾರೋಗ್ಯ ಪೀಡಿತ ಮೋನಪ್ಪ ಕುಂಬಾರ, ಬೀಡಿ ಕಟ್ಟಿ ಬದುಕು ನಡೆಸುವ ತಾಯಿ ಸುಶೀಲಾ ರ ನಡುವೆ ಮಗ ವರುಣ್ ಕೂಡಾ ಅಡಿಕೆ ಸುಲಿದು ಬಂದ ಹಣದಲ್ಲಿ ಕುಟುಂಬ ನಿರ್ವಹಿಸುತ್ತಿದ್ದಾರೆ.
– ಇರ್ಷಾದ್ ಕಿನ್ನಿಗೋಳಿ, ಮಂಗಳೂರು