ಹಾಸನ: ವಂಚಕರು ಆನ್ಲೈನ್ ಮೂಲಕ ನಾನಾ ರೀತಿಯಲ್ಲಿ ಹಣ ವಂಚಿಸುವುದನ್ನು ಕೇಳಿರ್ತಿರಾ. ಆದ್ರೆ ಈಗ ಈರುಳ್ಳಿ ವಿಚಾರದಲ್ಲೂ ಆನ್ಲೈನ್ ಫ್ರಾಡ್ ನಡೆದಿದೆ. ಇದೀಗ ವಂಚಕರು ವರ್ತಕರಿಗೆ ಲಕ್ಷಗಟ್ಟಲೆ ಮೋಸ ಮಾಡಿರುವ ಘಟನೆಯೊಂದು ಹಾಸನದಲ್ಲಿ ನಡೆದಿದೆ.
ಈರುಳ್ಳಿ ಬೆಲೆ ಗಗನಕ್ಕೇರಿರೋದ್ರಿಂದ ಎಲ್ಲೆಲ್ಲೂ ಈರುಳ್ಳಿ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಈಗ ಆನ್ಲೈನ್ ವಂಚನೆಗೂ ಈರುಳ್ಳಿ ಕಾರಣವಾಗಿದೆ. ವಂಚಕನೊಬ್ಬ ವರ್ತಕನನ್ನು ಸಂಪರ್ಕಿಸಿ ನಮ್ಮ ಬಳಿ ಈರುಳ್ಳಿ ಸ್ಟಾಕ್ ಇದೆ. ಅದನ್ನು ಕಡಿಮೆ ಬೆಲೆಗೆ ನೀಡುತ್ತೇವೆ ಅಂತ ನಂಬಿಸಿ ಲಕ್ಷಗಟ್ಟಲೆ ಹಣ ವಂಚಿಸಿದ್ದಾನೆ. ಹಾಸನ ಮೂಲದ ವ್ಯಾಪಾರಿ ಸೈಯದ್ ಮುದಾಸೀರ್ ಎಂಬುವವರಿಗೆ ಕರೆಮಾಡಿ 3 ಲೋಡ್ ಈರುಳ್ಳಿ ಕಳುಹಿಸೋದಾಗಿ ಹೇಳಿದ್ದಾನೆ. ಇನ್ನು ವರ್ತಕ ದುಪ್ಪಟ್ಟು ಲಾಭ ಪಡೆಯುವ ಉದ್ದೇಶದಿಂದ ವಂಚಕನ ಮಾತು ನಂಬಿ 3 ಲಕ್ಷದ 80 ಸಾವಿರ ಹಣ ಆತನ ಖಾತೆಗೆ ಹಾಕಿದ್ದಾನೆ. ಹಣ ತನ್ನ ಅಕೌಂಟ್ಗೆ ಬರ್ತಿದ್ದಂತೆ ವಂಚಕನ ಫೋನ್ ಸ್ವಿಚ್ ಆಫ್ ಆಗಿದೆ. ಅತ್ತ ಈರುಳ್ಳಿಯೂ ಇಲ್ಲದೆ, ಹಣವೂ ಇಲ್ಲದೆ ವರ್ತಕ ಕಂಗಾಲಾಗಿದ್ದು, ಸೈಬರ್ ಕ್ರೈಂ ಪೊಲೀಸರ ಮೊರೆ ಹೋಗಿದ್ದಾರೆ.