ಜೈಷ್​​-ಇ-ಮಹಮ್ಮದ್ ಉಗ್ರ ಸಂಘಟನೆಗೆ ಚೀನಾ ಬೆಂಬಲ..!

0
458

ದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್​ಪಿಎಫ್​ ಯೋಧರ ಮೇಲೆ ನಡೆದ ದಾಳಿಯನ್ನು ಜಗತ್ತಿನ ಪ್ರಮುಖ ರಾಷ್ಟ್ರಗಳು ಖಂಡಿಸಿದ್ದರೆ ಚೀನಾ ಮಾತ್ರ ಪಾಕ್​ ಕುರಿತು ತನ್ನ ನಿಲುವು ಬದಲಾಯಿಸೋದಿಲ್ಲ ಅಂತ ಪರೋಕ್ಷವಾಗಿ ಹೇಳಿದೆ. ಪುಲ್ವಾಮಾದಲ್ಲಿ ನಡೆದ ದಾಳಿಯನ್ನು ಅಮೆರಿಕ, ರಷ್ಯಾ, ಫ್ರಾನ್ಸ್​ ಸೇರಿ ಹಲವು ಪ್ರಮುಖ ರಾಷ್ಟ್ರಗಳು ಖಂಡಿಸಿವೆ. ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿರೋ ಚೀನಾ, ಪಾಕ್​ ಕಡೆಗೆ ತಮ್ಮ ನಿಲುವು ಬದಲಾಗಲ್ಲ ಅನ್ನೋದನ್ನು ಹೆಳಿದೆ.

ಪುಲ್ವಾಮಾ ಉಗ್ರರ ದಾಳಿಯಲ್ಲಿ 38 ಮಂದಿ ಯೊಧರು ಹುತಾತ್ಮರಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಘಟನೆ ನಡೆದಿದೆ.

“ಪುಲ್ವಾಮಾದಲ್ಲಿ ನಡೆದಿರುವ ಆತ್ಮಾಹುತಿ ದಾಳಿಯ ಬಗ್ಗೆ ತಿಳಿಯಿತು. ಘಟನೆ ಬಗ್ಗೆ ತಿಳಿದು ಆಘಾತವಾಯಿತು. ಘಟನೆ ಬಗ್ಗೆ ನಮ್ಮ ಸಂತಾಪ ಸೂಚಿಸುತ್ತೇವೆ” ಅಂತ ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಜಾಗತಿಕ ಉಗ್ರನ ಪಟ್ಟಿಗೆ ಜೈಷ್​-ಇ-ಮಹಮ್ಮದ್​ ಸಂಘಟನೆಯ ಮುಖ್ಯಸ್ಥ ಮನ್ಸೂದ್​ ಅಝರ್​​ನ್ನು ಸೇರಿಸುವ ಕುರಿತು ಪ್ರತಿಕ್ರಿಯಿಸಿ, “ಲಿಸ್ಟ್​ ಮಾಡುವ ವಿಚಾರಕ್ಕೆ ಬಂದಾಗ ಅದರದ್ದೇ ಆದ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಉಗ್ರ ಸಂಘಟನೆಗಳನ್ನು ಲಿಸ್ಟ್​ ಮಾಡಬೇಕಾದಾಗ ಅದಕ್ಕೆ ಮಂಡಳಿಯ ನಿಯಮಗಳಿವೆ” ಅಂತ ಚೀನಾದ ವಿದೇಶಾಂಗ ಸಚಿವಾಲಯದ ಜೆಂಗ್​ ಶುವಾಂಗ್​ ಹೇಳಿದ್ದಾರೆ. “ಯುಎನ್​ ಟೆರರಿಸ್ಟ್​ ಸಾಂಕ್ಷನ್​ ಲಿಸ್ಟ್​ನಲ್ಲಿ ಜೆಮ್​ ಕೂಡಾ ಇದೆ. ಈ ಸಂಬಂಧ ನಿರ್ಬಂಧಗಳು, ಸಮಸ್ಯೆಗಳನ್ನೂ ಜವಾಬ್ದಾರಿಯುತವಾಗಿ ನಿರ್ವಹಿಸುವಲ್ಲಿ ಚೀನಾದ ನಿಲುವು ಹಿಂದಿನಂತೆಯೇ ಇರುತ್ತದೆ” ಎಂದಿದ್ದಾರೆ.

ಘಟನೆ ಬಗ್ಗೆ ಸಂತಾಪ ತಿಳಿಸುತ್ತಲೇ ಜೆಮ್​ ಉಗ್ರ ಸಂಘಟನೆ ಮುಖ್ಯಸ್ಥನನ್ನು ಲಿಸ್ಟ್​ನಲ್ಲಿ ಸೇರಿಸುವ ಯುಎನ್​ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳ ಪ್ರಯತ್ನವನ್ನು ಚೀನಾ ತಡೆಯುತ್ತಲೇ ಬಂದಿದೆ.

ಪುಲ್ವಾಮಾ ಘಟನೆಯನ್ನು ಖಂಡಿಸಿದ ಪ್ರಮುಖ ರಾಷ್ಟ್ರಗಳು

ಘಟನೆಯನ್ನು ಅಮೆರಿಕ ಖಂಡಿಸಿದ್ದು, ಉಗ್ರರು, ಭಯೋತ್ಪಾದನೆಯನ್ನು ತೊಡೆದು ಹಾಕುವಲ್ಲಿ ಭಾರತ ಜೊತೆ ನಿಲ್ಲುತ್ತೇವೆ ಅಂತ ಹೇಳಿದೆ. “ಜಮ್ಮುಕಾಶ್ಮೀರದಲ್ಲಿ ನಡೆದಿರುವ ಉಗ್ರ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಹುತಾತ್ಮ ಯೋಧರ ಕುಟುಂಬದ ಜೊತೆ ನಮ್ಮ ಸಂತಾಪವಿದೆ” ಅಂತ ಅಮೆರಿಕದ ಭಾರತ ರಾಯಭಾರಿ ಕೆನ್ನೆತ್​ ಜಸ್ಟರ್​ ತಿಳಿಸಿದ್ದಾರೆ.

ರಷ್ಯಾ ಘಟನೆಯನ್ನು ಖಂಡಿಸಿದ್ದು ಇಂತಹ ಅಮಾನವೀಯ ಕೃತ್ಯವನ್ನು ಎಲ್ಲರೂ ಒಟ್ಟಾಗಿ ನಿಂತು ಎದುರಿಸುವ ಅಗತ್ಯವಿದೆ ಅಂತ ಹೇಳಿದೆ. ಈ ವಿಚಾರದಲ್ಲಿ ಯಾವುದೇ ಭಿನ್ನ ಧೋರಣೆಯನ್ನು ತೋರದೆ ಸರಿಯಾದ ಉತ್ತರ ನೀಡಬೇಕಿದೆ ಎಂದಿದ್ದಾರೆ.

“ಜಮ್ಮು ಕಾಶ್ಮೀರದಲ್ಲಿ ನಡೆದ ಘೋರ ದಾಳಿಯನ್ನು ಫ್ರಾನ್ಸ್​ ಖಂಡಿಸುತ್ತದೆ. ಭಯೋತ್ಪಾನೆ ವಿರುದ್ಧ ಫ್ರಾನ್ಸ್​ ಭಾರತದ ಜೊತೆಗಿತ್ತು. ಭಯೋತ್ಪಾದನೆ, ಉಗ್ರವಾದ ನಿರ್ಮೂಲನೆಗೆ ಎಲ್ಲ ರೀತಿಯ ಸಹಕಾರ ನೀಡುತ್ತಾ ಮುಂದೆಯೂ ಫ್ರಾನ್ಸ್​ ಭಾರತದ ಜೊತೆಗಿರುತ್ತದೆ” ಅಂತ ಭಾರತದ ಫ್ರಾನ್ಸ್​ ರಾಯಭಾರಿ ಅಲೆಕ್ಸಾಂಡರ್​ ಝೀಗ್ಲರ್​ ಹೇಳಿದ್ದಾರೆ.

“ಜಮ್ಮು ಕಾಶ್ಮೀರದಲ್ಲಿ ನಡೆದ ದಾಳಿಯನ್ನು ಮಾಲ್ಡೀವ್​ ಖಂಡಿಸುತ್ತದೆ. ಈ ಕುರಿತು ನಮ್ಮ ಸಂತಾಪ ಸೂಚಿಸುತ್ತೇವೆ. ಉಗ್ರವಾದ, ಭಯೋತ್ಪಾದನೆ ವಿರುದ್ಧ ಭಾರತದ ಜೊತೆಗಿನ ನಮ್ಮ ಬೆಂಬಲ ಹೀಗೆಯೇ ಇರುತ್ತದೆ. ನಮ್ಮಲ್ಲಿ ಮತ್ತು ಜಗತ್ತಿನಾದ್ಯಂತ ಭಯೋತ್ಪಾದನೆ ನಿರ್ಮೂಲನೆಗೆ ನಾವು ಸಹಕರಿಸುತ್ತೇವೆ” ಅಂತ ಮಾಲ್ಡೀವ್​ನ ಅಧ್ಯಕ್ಷ ಇಬ್ರಾಹಿಂ ಸೋಲಿ ಹೇಳಿದ್ದಾರೆ.

ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಘಟನೆಗೆ ಪ್ರತಿಕ್ರಿಯಿಸಿದ್ದು, “ಉಗ್ರವಾದದ ವಿರುದ್ಧ ನಿಲ್ಲುವ ನಮ್ಮ ನಿಲುವು ಹೀಗೆಯೇ ಇರುತ್ತದೆ. ಯಾವುದೇ ಉಗ್ರ ಪರವಾದ ಕಾರ್ಯಗಳನ್ನು ಸಹಿಸುವುದಿಲ್ಲ” ಅಂತ ಹೆಳಿದ್ದಾರೆ.

ಭೂತಾನ್​ ಪ್ರಧಾನಿ ಲೋಟೆ ಶೆರಿಂಗ್​ ಪ್ರತಿಕ್ರಿಯಿಸಿ, “ಕಾಶ್ಮೀರದಲ್ಲಿ ನಡೆದ ಘಟನೆಯಿಂದ ನೋವಾಯಿತು. ಯಾವುದೇ ರೀತಿಯ ಉಗ್ರ ಚಟುವಟಿಗಳನ್ನು ನಾವು ವಿರೋಧಿಸುತ್ತೇವೆ” ಎಂದಿದ್ದಾರೆ.

ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, “ಇಂತಹ ಅಮಾನವೀಯ ಕೃತ್ಯವನ್ನು ವಿಶ್ವವೇ ವಿರೋಧಿಸಬೇಕು. ಮತ್ತು ಉಗ್ರವಾದದ ನಿರ್ಮೂಲನೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು” ಅಂದಿದ್ದಾರೆ.

ಜರ್ಮನಿ, ಆಸ್ಟ್ರೇಲಿಯಾ, ಟರ್ಕ ಸೇರಿ ಹಲವು ಪ್ರಮುಖ ರಾಷ್ಟ್ರಗಳು ಘಟನೆಯನ್ನು ಖಂಡಿಸಿವೆ.

LEAVE A REPLY

Please enter your comment!
Please enter your name here