ಶಿವಮೊಗ್ಗ: ಶಿವಮೊಗ್ಗದ ಆಂತರಿಕ ಭದ್ರತಾ ವಿಭಾಗದ ಕಚೇರಿಗೆ ಖುದ್ದು ಎಡಿಜಿಪಿ ಭಾಸ್ಕರ್ ರಾವ್ ಅವರೇ ಬೀಗ ಜಡಿದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಎಡಿಜಪಿ ಭಾಸ್ಕರ್ ರಾವ್ ಶಿವಮೊಗ್ಗ ಭೇಟಿ ವೇಳೆ ಈ ಘಟನೆ ನಡೆದಿದೆ.
ಇಷ್ಟೇ ಅಲ್ಲದೇ, ಕಚೇರಿಗೆ ಬೀಗ ಜಡಿದು, ಬೀಗದ ಕೈಯನ್ನು ಅವರೇ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಭಾಸ್ಕರ್ ರಾವ್ ಅವರು, ಡಿಎಆರ್ ಆವರಣದಲ್ಲಿರುವ ಆಂತರಿಕ ಭದ್ರತಾ ವಿಭಾಗಕ್ಕೆ ಭೇಟಿ ನೀಡಿದ್ದರು. ಈ ವೇಳೆ, ಇನ್ಸ್ ಪೆಕ್ಟರ್ ಮತ್ತು ಸಿಬ್ಭಂಧಿಗಳು, ಪ್ರಕರಣ ದಾಖಲಿಸುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಗರಂ ಆದ ಭಾಸ್ಕರ್ ರಾವ್, ಭದ್ರತಾ ವಿಭಾಗದ ಎಸ್.ಪಿ. ಮತ್ತು ಸಿಬ್ಭಂಧಿಯನ್ನು ತರಾಟೆಗೆ ತೆಗೆದುಕೊಂಡು, ಕಚೇರಿಗೆ ಬೀಗ ಹಾಕಿ ಬೀಗದ ಕೈಯನ್ನು ತಾವೇ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗುತ್ತಿದೆ.
ಅಷ್ಟಕ್ಕೂ ಕಚೇರಿಗೆನೋ ಬೀಗ ಜಡಿದು ಕೀ ತೆಗೆದುಕೊಂಡು ಹೋಗಿದ್ದಾರೆ. ಆದರೆ, ಕಚೇರಿ ಸಿಬ್ಭಂಧಿಗಳು, ಮತ್ತು ಇನ್ಸ್ ಪೆಕ್ಟರ್ ಕೆಲಸ ಮಾಡಲು ಸಾಧ್ಯವಾಗದೇ, ಪರದಾಡುವಂತಾಗಿದೆ. ಇಲಾಖೆಯಲ್ಲಿ, ಅಧಿಕಾರಿಗಳು ಮತ್ತು ಸಿಬ್ಭಂಧಿಗಳು, ಸರಿಯಾಗಿ ಕೆಲಸ ಮಾಡದೇ ಇದ್ದರೆ, ಚಾರ್ಜ್ ಮೆಮೋ ನೀಡಿ ಉತ್ತರ ಕೇಳ ಬಹುದಾಗಿತ್ತು. ಆದರೆ, ಈ ರೀತಿ ಬೀಗ ಜಡಿದಿರುವುದು ವಿಶೇಷವಾಗಿದೆ.
ಅದರಲ್ಲೂ ಶಿವಮೊಗ್ಗದಲ್ಲಿರುವ ಆಂತರಿಕ ಭದ್ರತಾ ವಿಭಾಗದ ಕಚೇರಿ ಬಹಳ ಚಿಕ್ಕದಾಗಿದಾಗಿದೆ. 10 ಅಡಿ ಅಗಲ ಮತ್ತು ಉದ್ದ ಇಷ್ಟೇ ಹೊಂದಿರುವ ಶೆಡ್ ರೀತಿಯಲ್ಲಿದೆ. ಇಲ್ಲಿ ಯಾವುದೇ ಮೂಲಭೂತ ಸೌಲಭ್ಯ ಕೂಡ ಇಲ್ಲ. ಆಂತರಿಕ ಭದ್ರತಾ ವಿಭಾಗದ ಪೊಲೀಸರಿಗೆ ದೂರು ದಾಖಲಿಸಲು ಕಂಪ್ಯೂಟರ್ ಕೂಡ ಇಲ್ಲ. ಅಲ್ಲದೇ, ಆಂತರಿಕ ಭದ್ರತಾ ವಿಭಾಗಕ್ಕೆ ಯಾವುದೇ ಶಸ್ತ್ರಾಸ್ತ್ರಗಳನ್ನು ನೀಡಿಲ್ಲ. ಇವರಿಗೊಂದು ಸರಿಯಾದ ಠಾಣೆ ಕೂಡ ಇಲ್ಲ. ಯಾರಾದರೂ ಆರೋಪಿಗಳನ್ನು ಬಂಧಿಸಿದರೆ, ವಿಚಾರಣೆ ಮಾಡಲು ಕೊಠಡಿ ಕೂಡ ಇಲ್ಲ. ಇಷ್ಟೆಲ್ಲಾ ಇಲ್ಲಗಳ ನಡುವೆ ಆಂತರಿಕ ಭದ್ರತಾ ಸಿಬ್ಭಂಧಿ ಕೆಲಸ ಮಾಡುವುದಾದರೂ ಹೇಗೆ ಎಂಬ ಪ್ರಶ್ನೇ ಎದುರಾಗಿದೆ.