ಶಿವಮೊಗ್ಗ: ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಯರಿಗೆ ಕೂಡಲೇ ಹಾಸ್ಟೆಲ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಎನ್ಎಸ್ಯುಐ ಕಾರ್ಯಕರ್ತರು, ಪ್ರತಿಭಟನೆ ನಡೆಸಿದ್ದಾರೆ.
ಇಂದು ಸಹ್ಯಾದ್ರಿ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಕುವೆಂಪು ವಿವಿ ಕುಲಪತಿಯವರಿಗೆ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು, ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸಮರ್ಪಕ ಹಾಸ್ಟೆಲ್ ಸೌಲಭ್ಯ ಇಲ್ಲದೆ, ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಯರಿಗೂ ಹಾಸ್ಟೆಲ್ ಸೌಲಭ್ಯ ನೀಡುತ್ತಿಲ್ಲ. ಅಲ್ಲದೇ, ಶಿಫಾರಸ್ಸು ಇರುವ ವಿದ್ಯಾರ್ಥಿನಿಯರಿಗೆ ಮಾತ್ರ ಹಾಸ್ಟಲ್ಗೆ ಅವಕಾಶ ನೀಡಲಾಗುತ್ತಿದೆ. ಇದರಿಂದ ಬಡ ವಿದ್ಯಾರ್ಥಿನಿಯರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸ್ಟೆಲ್ನಲ್ಲಿ ಕೇವಲ 100 ಕಿ.ಮಿ. ದೂರ ಇರುವ ವಿದ್ಯಾರ್ಥಿನಿಯರಿಗೆ ಆದ್ಯತೆ ನೀಡುತ್ತಿದ್ದು, 100 ಕಿ.ಮಿ. ಕಡಿಮೆ ಇರುವ ಬಡ, ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಅವಕಾಶ ನೀಡುತ್ತಿಲ್ಲ ಇದರಿಂದ ಬಡ ಕುಟುಂಬದ ವಿದ್ಯಾರ್ಥಿನಿಯರು ಕಾಲೇಜು ತರಗತಿಯಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದ್ದಾರೆ. ಹಾಸ್ಟೆಲ್ ಸೌಲಭ್ಯ ಒದಗಿಸಲು ವಿದ್ಯಾರ್ಥಿನಿಯರಿಂದ 6,500 ರೂ. ಮುಗಂಡ ಸ್ವೀಕರಿಸಿದ್ದು, ಈ ವರ್ಷವೂ ಸ್ವೀಕರಿಸಲಾಗುತ್ತಿದೆ. ಕಳೆದ ವರ್ಷ ಪಾವತಿ ಮಾಡಿದ್ದ ವಿದ್ಯಾರ್ಥಿನಿಯರಿಗೆ ಕೇವಲ 1,500 ರೂ. ಹಿಂದಿರುಗಿಸಲಾಗುತ್ತಿದೆ. ಇನ್ನೂಳಿದ ಹಣಕ್ಕೆ ಉತ್ತರ ನೀಡುತ್ತಿಲ್ಲ ಎಂದು ದೂರಿದ್ದಾರೆ.
ಕಾಲೇಜಿನಲ್ಲಿ ಸೂಕ್ತವಾದ ಲ್ಯಾಬ್ ವ್ಯವಸ್ಥೆಯಿಲ್ಲ ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು ಆಡಳಿತ ಮಂಡಳಿಯು ಸರಿಯಾಗಿ ಸ್ಪಂದಿಸುತ್ತಿಲ್ಲ. ಕಾಲೇಜು ಹಾಗೂ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿನಿಯರಿಗೆ ಆಗುತ್ತಿರುವ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಎನ್ಎಸ್ಯುಐ ರಾಜ್ಯ ಉಪಾಧ್ಯಕ್ಷ ಕೆ. ಚೇತನ್, ಜಿಲ್ಲಾಧ್ಯಕ್ಷ ಹೆಚ್.ಎಸ್. ಬಾಲಾಜಿ, ರವಿ, ವಿಜಯ್, ರವಿಕುಮಾರ್, ಮನೋಜ್, ಶಬರೀಶ್, ಗಣೇಶ್ ಸಂಜಯ್, ಕಿರಣ್ ಇನ್ನಿತರರು ಭಾಗವಹಿಸಿದ್ದರು.