ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರಿಯುತ್ತಲೇ ಇದೆ. ಬೆಂಗಳೂರಿನಲ್ಲೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಬೆಂಗಳೂರಿನ ಶಿವಾಜಿನಗರದಲ್ಲಿ ಹೌಸ್ ಕೀಪರ್ನ ದ್ವಿತೀಯ ಸಂಪರ್ಕದಿಂದ ಒಟ್ಟು 14 ಜನರಿಗೆ ಸೋಂಕು ತಗುಲಿದೆ.
ಶಿವಾಜಿನಗರದಲ್ಲಿ ಹೋಟೆಲ್ ಹೌಸ್ ಕೀಪಿಂಗ್ ಸಿಬ್ಬಂದಿಯಂದ 11 ಜನರಿಗೆ ಸೋಂಕು ಹರಡಿದೆ. ಈ ಮೊದಲು ಪರೀಕ್ಷೆಗೆ ಒಳಪಡಿಸಿದ್ದ 22 ಜನರಲ್ಲಿ 11 ಜನರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಆದರೆ ಇದರ ಬೆನ್ನಲ್ಲೇ ಮತ್ತೆ 14 ಜನರಿಗೆ ಸೋಂಕು ದೃಢಪಟ್ಟಿದೆ.
ಹೌಸ್ ಕೀಪಿಂಗ್ ಸಿಬ್ಬಂದಿಯಿಂದ ಸೋಂಕು ಹರಡಿರುವ ಹಿನ್ನೆಲೆ ಆತ ವಾಸವಿದ್ದ ಚಾಂದಿನಿ ಚೌಕ್ನ ಕಟ್ಟಡದಲ್ಲಿ ವಾಸವಿದ್ದ 73 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನು ಹೋಟೆಲ್ನ ಕೆಲ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನುಳಿದಂತೆ 105 ಜನರ ಮೇಲೆ ನಿಗಾ ಇಡಲಾಗಿದೆ.
ಈಗ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 200 ರ ಗಡಿ ದಾಟಿದೆ. ನಾಲ್ಕು ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಒಟ್ಟು 101 ಮಂದಿ ಗುಣಮುಖರಾಗಿದ್ದಾರೆ. ಸದ್ಯ 107 ಮಂದಿ ಆಕ್ಟೀವ್ ಕೇಸ್ಗಳಿದ್ದು, 7 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.