ಮೈಸೂರು: ಅನಧಿಕೃತವಾಗಿ ರೋಡ್ ಕಟಿಂಗ್ ಮಾಡಿ ಕಾಮಗಾರಿ ನಡೆಸಿರುವ ಪ್ರತಿಷ್ಠಿತ ಮೂರು ಕಲ್ಯಾಣ ಮಂಟಪಗಳಿಗೆ ಪಾಲಿಕೆಯಿಂದ ನೋಟೀಸ್ ಜಾರಿ ಆಗಿದೆ. ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 2 ರ ಆಯುಕ್ತರಿಂದ ನೋಟೀಸ್ ಜಾರಿ ಯಾಗಿದೆ. ತಮಾಷೆ ಅಂದ್ರೆ ಕಾಮಗಾರಿ ಮುಗಿದು 15 ದಿನಗಳ ನಂತರ ಅನುಮತಿ ಪಡೆಯುವಂತೆ ನೋಟೀಸ್ ಜಾರಿ ಮಾಡಿರುವ ಅಧಿಕಾರಿಗಳ ನಡೆ ಶಂಕಾಸ್ಪದವಾಗಿದೆ. ಶ್ರೀರಾಂಪುರ 2 ನೇ ಹಂತದ ಮುಖ್ಯರಸ್ತೆಯನ್ನೇ ಕತ್ತರಿಸಿ ಒಳಚರಂಡಿ ಕಾಮಗಾರಿ ನಡೆಸಿರುವ ಕಲ್ಯಾಣಮಂಟಪದ ಮಾಲೀಕರು ನಿಯಮಗಳನ್ನ ರಾಜಾರೋಷವಾಗಿ ಉಲ್ಲಾಂಘಿಸಿದ್ದಾರೆ.
ಪೂರ್ವಾನುಮತಿ ಪಡೆಯದೇ ರಸ್ತೆ ಕಟ್ ಮಾಡಿ ಕಾಮಗಾರಿ ನಡೆಸಿದ ಮೂರು ಕಲ್ಯಾಣ ಮಂಟಪಗಳಿಗೆ 90,256 ರೂ ಶುಲ್ಕ ಪಾವತಿಸುವಂತೆ ನೋಟೀಸ್ ಜಾರಿ ಮಾಡಲಾಗಿದೆ. ಎರಡು ಕಡೆ ರಸ್ತೆ ಕಟ್ ಮಾಡಲಾಗಿದೆ ಎಂದು ನೋಟೀಸ್ ನಲ್ಲಿ ಉಲ್ಲೇಖಿಸಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ನೋಟೀಸ್ ಜಾರಿ ಮಾಡಿ ಶುಲ್ಕ ಪಾವತಿಸುವಂತೆ ಸೂಚಿಸಿರುವ ವಲಯ ಆಯುಕ್ತರ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಸಾರ್ವಜನಿಕರು ಮೌಖಿಕವಾಗಿ ದೂರು ನೀಡಿದರೂ ಕಾಮಗಾರಿ ಸ್ಥಗಿತಗೊಳಿಸದ ಸಂಬಂಧ ಪಟ್ಟ ಅಧಿಕಾರಿಗಳು ಕಲ್ಯಾಣ ಮಂಟಪದ ಮಾಲೀಕರ ಜೊತೆ ಶಾಮೀಲಾಗಿರುವ ಆರೋಪ ಕೇಳಿ ಬಂದಿದೆ. ಕಾಮಗಾರಿ ಪೂರ್ಣಗೊಂಡ ನಂತರ ಕಾನೂನು ಪಾಲಿಸುವಂತೆ ನೋಟೀಸ್ ಜಾರಿ ಮಾಡಿರುವ ಅಧಿಕಾರಿಗಳು ನಗೆಪಾಟಲಿಗೆ ಸಿಲುಕಿದ್ದಾರೆ.
ಜಾಣ ಕುರುಡುತನ ಪ್ರದರ್ಶಿಸುತ್ತಿರುವ ವಲಯ ಕಚೇರಿ 2 ರ ಅಧಿಕಾರಿಗಳ ವಿರುದ್ದ ಸಾರ್ವಜನಿಕವಾಗಿ ಟೀಕೆ ಶುರುವಾಗಿದೆ. ಉಳ್ಳವರಿಗೆ ಒಂದು ಕಾನೂನು ಇಲ್ಲದವರಿಗೆ ಒಂದು ಕಾನೂನು ಎಂಬಂತಾಗಿದೆ ಅಧಿಕಾರಿಗಳ ವರ್ತನೆ. ಕಾನೂನಿನ ಅನ್ವಯದಂತೆ ಕಲ್ಯಾಣ ಮಂಟಪದ ಮಾಲೀಕರಿಗೆ ದಂಡ ವಿಧಿಸಬೇಕಿದ್ದ ಅಧಿಕಾರಿಗಳು ಕೇವಲ ನೋಟೀಸ್ ನೀಡಿ ತೆಪ್ಪಗಾಗಿದ್ದಾರೆ. ಮೈಸೂರು ನಗರಪಾಲಿಕೆ ಆಯುಕ್ತರೇ ನಿಮ್ಮ ಸಿಬ್ಬಂದಿಗಳ ಬೇಜವಾಬ್ದಾರಿತನ ಕಾಣಿಸುತ್ತಿಲ್ಲವೇ…?