ನವದೆಹಲಿ: ಕೊರೋನಾ ಸೋಂಕು ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ ಇಂದು ಜನತಾ ಕರ್ಫ್ಯೂವನ್ನು ಜಾರಿಗೊಳಿಸಲಾಗಿದ್ದು, ಪ್ರಧಾನಿ ಮೋದಿ ಕರೆಗೆ ದೇಶದೆಲ್ಲೆಡೆ ಭಾರಿ ಬೆಂಬಲ ವ್ಯಕ್ತವಾಗಿದೆ. ಇದೀಗ ಮಾರ್ಚ್ 31ರವರೆಗೆ ರೈಲು, ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಇಂದು ಪ್ರಧಾನಮಂತ್ರಿಯವರ ಪ್ರಿನ್ಸಿಪಲ್ ಸೆಕ್ರೆಟರಿ ಹಾಗೂ ಕೇಂದ್ರ ಕ್ಯಾಬಿನೆಟ್ ಸೆಕ್ರೆಟರಿ ನೇತೃತ್ವದಲ್ಲಿ ಎಲ್ಲಾ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ಮಾರ್ಚ್ 31 ರವರೆಗೆ ಉಪನಗರ ರೈಲು ಸೇವೆ ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಲ್ಲದೆ ಮೆಟ್ರೋ ಸೇವೆಗಳು ಸ್ಥಗಿತಗೊಳ್ಳಲಿದೆ. ಹಾಗೆಯೇ ಸಾರಿಗೆ ಸೇವೆಗಳು ಮಾರ್ಚ್ 31ರವರೆಗೆ ಬಂದ್ ಆಗಲಿವೆ.
ಇನ್ನು ಕೊರೋನಾ ದೃಢಪಟ್ಟಿರುವ 75 ಜಿಲ್ಲೆಗಳಲ್ಲಿ ಯಾವ ಸೇವೆಗಳು ಅವಶ್ಯಕತೆ ಇದೆಯೋ ಅವುಗಳನ್ನು ನೀಡುವುದರ ಬಗ್ಗೆ ಆಯಾಯ ರಾಜ್ಯ ಸರ್ಕಾರಗಳೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.