ಬೆಂಗಳೂರು : ಕೊರೋನಾ ಹಿನ್ನೆಲೆಯಲ್ಲಿ ಹೊರರಾಜ್ಯಗಳಿಂದ ಬಂದವರಿಗೆ ವಿಧಿಸಲಾಗುತ್ತಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಇನ್ಮುಂದೆ ಬೇರೆ ರಾಜ್ಯಗಳಿಂದ ಬಂದವರಿಗೆ ಕ್ವಾರಂಟೀನ್ ಇರುವುದಿಲ್ಲ. ಮನೆ ಬಾಗಿಲಿಗೆ ಕ್ವಾರಂಟೀನ್ ಪೋಸ್ಟರ್ ಕೂಡ ಅಂಟಿಸುವ ಪದ್ಧತಿ ಇರುವುದಿಲ್ಲ!
ಹೌದು, ಕೊರೊನಾದಿಂದಾಗಿ ಹೊರರಾಜ್ಯಗಳಿಂದ ಬಂದವರಿಗೆಲ್ಲಾ ಸರ್ಕಾರ ಹಲವು ರೀತಿಯ ನಿರ್ಬಂಧಗಳನ್ನ ಹಾಕಿತ್ತು. ಸದ್ಯ ಕೊರೊನಾದಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗಿದೆ. ಹೊರ ರಾಜ್ಯಗಳಿಂದ ರಾಜ್ಯಕ್ಕೆ ಬಂದವರಿಗಿದ್ದ ನಿರ್ಬಂಧಗಳನ್ನ ಸರ್ಕಾರ ತೆರವುಗೊಳಿಸಿದೆ. ವಲಸೆ ಕಾರ್ಮಿಕರ ಸಂಕಷ್ಟ ತಪ್ಪಿಸಲು ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅಂತಾರಾಜ್ಯ ಸಂಬಂಧ ಹೊರಡಿಸಿದ್ದ ಎಲ್ಲಾ ಸುತ್ತೋಲೆ ರದ್ದು ಮಾಡಲಾಗಿದೆ.
ಹೊರರಾಜ್ಯದಿಂದ ಬಂದಾಗ ನಡೆಯುವ ವೈದ್ಯಕೀಯ ಪರೀಕ್ಷೆ, ಸೇವಾ ಸಿಂಧು ಪೋರ್ಟಲ್ನಲ್ಲಿ ನೋಂದಣಿ ಕ್ರಮ, ಕೈಗೆ ಹಾಕುವ ಸೀಲ್ ನಿಯಮ, 14 ದಿನಗಳ ಕ್ವಾರಂಟೀನ್, ಮನೆ ಬಾಗಿಲಿಗೆ ಕ್ವಾರಂಟೀನ್ ಪೋಸ್ಟರ್ ಅಂಟಿಸುವ ಪದ್ಧತಿ ಸೇರಿ ಎಲ್ಲಾ ನಿಯಮಗಳನ್ನ ರಾಜ್ಯಸರ್ಕಾರ ರದ್ದುಗೊಳಿಸಿದೆ.