ಸ್ಯಾಂಡಲ್ವುಡ್ ನಟ ನಿಖಿಲ್ ಕುಮಾರಸ್ವಾಮಿ ಇಂದು 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಲು ಸಾಲು ಸಿನಿಮಾಗಳ ಸುದ್ದಿಯನ್ನು ನೀಡಿದ್ದಾರೆ.
ಕಳೆದ ಲೋಕಸಭಾ ಚುನಾವಣಾ ವೇಳೆ ಸಕ್ರಿಯ ರಾಜಕೀಯಕ್ಕೆ ಧುಮಿಕಿದ ನಿಖಿಲ್ ರಾಜಕಾರಣ ಮತ್ತು ಸಿನಿಮಾ ಎರಡರಲ್ಲೂ ತೊಡಗಿಸಿಕೊಂಡಿದ್ದರೂ ಎಲೆಕ್ಷನ್ ಬಳಿಕ ಅವರ ಯಾವ್ದೇ ಸಿನಿಮಾ ಅನೌನ್ಸ್ ಆಗಿರಲಿಲ್ಲ. ಇದೀಗ ಒಂದಲ್ಲ ಎರಡಲ್ಲ ನಾಲ್ಕು ಸಿನಿಮಾಗಳು ಅನೌನ್ಸ್ ಆಗಿವೆ.
ಮುನಿರತ್ನ ನಿರ್ಮಾಣದ ಸಿನಿಮಾ : ಮುನಿರತ್ನ ನಿರ್ಮಾಣದ ಸಿನಿಮಾ ಕೂಡ ಅನೌನ್ಸ್ ಆಗಿದೆ. ಈ ಹಿಂದೆ ನಿಖಿಲ್ ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಅಭಿಮನ್ಯುವಾಗಿ ನಟಿಸಿದ್ದರು. ಇದೀಗ ಮತ್ತೆ ಮುನಿರತ್ನ ನಿರ್ಮಾಣದ ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಚಿತ್ರಕ್ಕೆ ಧನುಷ್ ಐಪಿಎಸ್ ಎಂದು ಹೆಸರಿಡಲಾಗಿದೆ.
ಲಹರಿ ಸಂಸ್ಥೆ ಸಿನಿಮಾ : ಲಹರಿ ಸಂಸ್ಥೆ ನಿರ್ಮಾಣದಲ್ಲಿ ನಿಖಿಲ್ ಅವರ ಹೊಸ ಸಿನಿಮಾ ಸೆಟ್ಟೇರಲಿದೆ. ವಿಜಯ್ ಕುಮಾರ್ ಕೊಂಡ ಆ್ಯಕ್ಷನ್ ಕಟ್ ಹೇಳಲಿರುವ ಈ ಸಿನಿಮಾದ ಚಿತ್ರೀಕರಣ ಜನವರಿ 30ರಿಂದ ಶುರುವಾಗಲಿದೆ. ಅದರ ಫಸ್ಟ್ಲುಕ್ ಬಿಡುಗಡೆಯಾಗಿದ್ದು, ಸ್ಫೋರ್ಟ್ಸ್ ಕುರಿತ ಸಿನಿಮಾ ಎಂದು ತಿಳಿದುಬಂದಿದೆ.
ಲೈಕಾ ಜೊತೆ : ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ, ವಿಜಯ್, ಸೂರ್ಯ ಅವರಂಥಾ ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳಿಗೆ ಬಂಡವಾಳ ಹಾಕಿರುವ ಲೈಕಾ ಪ್ರೊಡಕ್ಷನ್ ನಿಖಿಲ್ ಅವರ ಹೊಸ ಸಿನಿಮಾಕ್ಕೆ ಬಂಡವಾಳ ಹಾಕಲಿದ್ದು, ಈ ಸುದ್ದಿಯೂ ಬರ್ತ್ಡೇ ದಿನ ರಿವೀಲ್ ಆಗಿದೆ.
ಅದ್ದೂರಿ ಡೈರೆಕ್ಟರ್ ಜೊತೆ : ‘ಅಂಬಾರಿ’, `ರಾಟೆ’, ‘ಅದ್ದೂರಿ’, ‘ಐರಾವತ’, ‘ಕಿಸ್’ ಸಿನಿಮಾಗಳ ಖ್ಯಾತಿಯ ಎ.ಪಿ ಅರ್ಜುನ್ ಮತ್ತು ನಿಖಿಲ್ ಕುಮಾರಸ್ವಾಮಿ ಕಾಂಬಿನೇಷನಲ್ನಲ್ಲಿ ಹೊಸ ಸಿನಿಮಾ ಬರುತ್ತಿದೆ. ಎನ್.ಕೆ ಎಂಟರ್ಟೇನ್ಮೆಂಟ್ಸ್ ಬ್ಯಾನರಡಿ ಸಿನಿಮಾ ನಿರ್ಮಾಣವಾಗಲಿದ್ದು, ಜೂನ್ನಿಂದ ಚಿತ್ರೀಕರಣ ಆರಂಭವಾಗಲಿದೆ.
ಆದರೆ ಈ ಹಿಂದೆ ‘ಜಾಗ್ವಾರ್’ ಸ್ಟಾರ್ ನಿಖಿಲ್ ಮತ್ತು ‘ಪೈಲ್ವಾನ್’ ಡೈರೆಕ್ಟರ್ ಕೃಷ್ಣ ಕಾಂಬಿನೇಷನ್ನಲ್ಲಿ ಸಿನಿಮಾವೊಂದು ಸೆಟ್ಟೇರಲಿದೆ ಎಂಬ ವಿಚಾರ ಕೇಳಿಬಂದಿತ್ತು. ಇಂದು ಪ್ರಕಟವಾದ ಸಿನಿಮಾಗಳ ಪಟ್ಟಿಯಲ್ಲಿ ಆ ಸಿನಿಮಾದ ಸುದ್ದಿಯಿಲ್ಲ. ಒಟ್ನಲ್ಲಿ ಬರ್ತ್ಡೇ ದಿನ ನಿಖಿಲ್ ಕುಮಾರಸ್ವಾಮಿಯವರ ನಾಲ್ಕು ಸಿನಿಮಾಗಳು ಅನೌನ್ಸ್ ಆಗಿದ್ದು, ಇನ್ನು ನಿಖಿಲ್ ಒಂದಾದ ಮೇಲೊಂದು ಸಿನಿಮಾಗಳಲ್ಲಿ ಫುಲ್ ಬ್ಯುಸಿ ಆಗುತ್ತಿದ್ದಾರೆ.