ಮನೆ ಹಸ್ತಾಂತರ: ಸಿದ್ದರಾಮಯ್ಯ ಅವ್ರು ಬರ್ಲೇ ಬೇಕು ಅಂತ ದಿಡ್ಡಳ್ಳಿ ಆದಿವಾಸಿಗಳ ಪಟ್ಟು..!

0
918

ಮಡಿಕೇರಿ: ಕುಶಾಲನಗರದ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟದಲ್ಲಿ ಸರ್ಕಾರ ನಿರ್ಮಿಸಿರೋ ಮನೆಗಳನ್ನು ಇಂದು ಸಿಎಂ ಎಚ್​. ಡಿ ಕುಮಾರಸ್ವಾಮಿ ಅವರು ದಿಡ್ಡಳ್ಳಿ ಆದಿವಾಸಿಗಳಿಗೆ ಹಸ್ತಾಂತರಿಸಲಿದ್ದಾರೆ. ಆದರೆ ಈಗ ಆದಿವಾಸಿಗಳು ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬರಲೇ ಬೇಕು ಅಂತ ಪಟ್ಟು ಹಿಡಿದಿದ್ದಾರೆ.

ಮನೆಗಳನ್ನು ಸಿಎಂ ಕುಮಾರಸ್ವಾಮಿ ಹಸ್ತಾಂತರ ಮಾಡುತ್ತಿದ್ದಾರೆ. ಆದ್ರೆ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಬರಲೇಬೇಕು ಅಂತ ಇಲ್ಲಿನ ಜನರು ಪಟ್ಟು ಹಿಡಿದಿದ್ದಾರೆ. ಮನೆ ನಿರ್ಮಿಸಿಕೊಡುವ ನಿರ್ಧಾರ ತೆಗೆದುಕೊಂಡಿದ್ದು ಸಿದ್ದರಾಮಯ್ಯ ಅವರು. ಹಾಗಾಗಿ ಅವರು ಈ ಕಾರ್ಯಕ್ರಮಕ್ಕೆ ಬರಲೇಬೇಕು. ಮನೆಗಳನ್ನು ನೀಡುವಂತೆ ನಾವು ಹೋರಾಟ ಮಾಡಿರಬಹುದು. ಆದರೆ ಅವರು ಮನೆಗಳನ್ನ ಕಟ್ಟಿಕೊಡಲು ಸಮ್ಮತಿ ನೀಡದಿದ್ದರೆ ನಾವು ಇಂದು ಕಷ್ಟದಿಂದ ಜೀವನ ನಡೆಸಬೇಕಿತ್ತು. ಈ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯನವರು ಬರಲೇಬೇಕು ಅಂತ ಆದಿವಾಸಿಗಳು ಒತ್ತಾಯ ಮಾಡುತ್ತಿದ್ದಾರೆ.

ಕಳೆದ ಎರಡೂವರೆ ವರ್ಷದ ಹಿಂದೆ ಕಾಡಿನಲ್ಲಿರೋ ಆದಿವಾಸಿಗಳನ್ನ ಒಕ್ಕಲೆಬ್ಬಿಸಲು ಆಗಿನ ಸಿದ್ದರಾಮಯ್ಯ ಸರ್ಕಾರ ಮುಂದಾಗಿತ್ತು. ಸರ್ಕಾರ ಈ ನಿರ್ಧಾರದ ವಿರುದ್ಧ ಮಡಿಕೇರಿಯ ದಿಡ್ಡಳ್ಳಿ ಆದಿವಾಸಿಗಳು ಸಿಡಿದು ನಿಂತಿದ್ರು. ಸೂರಿಗಾಗಿ ಬೃಹತ್ ಹೋರಾಟ ಮಾಡೋ ಮೂಲಕ ಕೊಡಗಿನ ಆದಿವಾಸಿ ಜನರು ಇಡೀ ದೇಶದ ಗಮನ ಸೆಳೆದಿದ್ರು. ಅವರು ನಡೆಸಿದ ಹೋರಾಟ ದೇಶಾದ್ಯಂತ ಸದ್ದು ಮಾಡಿತ್ತು. ಹೋರಾಟಕ್ಕೆ ಮಣಿದ ಸರ್ಕಾರ ಮನೆ ಕಟ್ಟಿಸಿಕೊಡ್ತೀವಿ ಅಂತ ಭರವಸೆ ನೀಡಿತ್ತು. ಶಾಲನಗರದ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟದಲ್ಲಿ ಮನೆಗಳನ್ನು ನಿರ್ಮಿಸಿ ಕೊಡಲು ಸರ್ಕಾರ ಒಪ್ಪಿತ್ತು. ಇದೀಗ ಈ ಪ್ರದೇಶಲ್ಲಿ ಅತ್ಯಾಧುನಿಕ ಮಾದರಿಯಲ್ಲಿ 528 ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಇಂದು ಸಿಎಂ ಕುಮಾರಸ್ವಾಮಿ ಆದಿವಾಸಿಗಳಿಗೆ ಮನೆಗಳನ್ನ ಹಸ್ತಾಂತರ ಮಾಡಲಿದ್ದಾರೆ.

ದಿಡ್ಡಳ್ಳಿ ಆದಿವಾಸಿ ಜನಾಂಗದಲ್ಲಿ ಸಂಭ್ರಮದ ವಾತವರಣವಿದೆ. ಆದರೆ ಜನರ ಈ ಕೂಗಿಗೆ ಮಣಿದು ಸಿದ್ದರಾಮಯ್ಯನವರು ಈ ಕಾರ್ಯಕ್ರಮಕ್ಕೆ ಬರ್ತಾರ ಅನ್ನೋದನ್ನು ಕಾದು ನೋಡಬೇಕಿದೆ.

ವಿನಯ್, ಮಡಿಕೇರಿ

LEAVE A REPLY

Please enter your comment!
Please enter your name here