ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದಲ್ಲಿ ಮದವೇರಿದ ಮಣಿಕಂಠ ಆನೆ ಇಂದು ಬೆಳಿಗ್ಗೆ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ಸಲಗ ಬಾಲಣ್ಣ, ಅದರ ಮಾವುತ ಗೌಸ್ ಮತ್ತು ಮತ್ತೊಂದು ಮರಿ ಆನೆಯನ್ನು ತುಂಗಾ ಜಲಾಶಯದ ಹಿನ್ನೀರಿಗೆ ತಳ್ಳಿ ಜೀವ ಭಯ ಉಂಟು ಮಾಡಿದ್ದಾನೆ..! ಹೌದು, ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿಯೇ ಈ ಒಂದು ಘಟನೆ ನಡೆದಿದ್ದು, ಈ ಘಟನೆಯಿಂದಾಗಿ, ಕೆಲ ಕಾಲ ಸ್ಥಳದಲ್ಲಿ ಆತಂಕ ಉಂಟಾಗಿತ್ತು. ಮಣಿಕಂಠನ ದಂತದ ತಿವಿತದಿಂದ ತೀವ್ರ ನೋವು ತಿಂದ ಬಾಲಣ್ಣ ಆನೆಯು, ಜೀವ ಭಯದಿಂದ ಚೀರಾಡಿದೆ. ಅಲ್ಲದೇ, ಬಾಲಣ್ಣ ಆನೆಯ ಮೇಲೆ ಕುಳಿತಿದ್ದ ಮಾವುತ ಗೌಸ್, ಏನೂ ಮಾಡಲಾಗದೆ ಆನೆಯೊಂದಿಗೆ ಆಳವಾದ ನೀರಿಗೆ ತೆರಳಿದ್ದಾನೆ.
ಬಳಿಕ, ಹಿನ್ನೀರು ನಡುವಿನ ನಡುಗಡ್ಡೆಗೆ ಹಾರಿದ ಮಾವುತ ಗೌಸ್, ಜೀವ ಉಳಿಸಿಕೊಂಡಿದ್ದಾರೆ. ಇಷ್ಟಾದ ಬಳಿಕವೂ ಬಾಲಣ್ಣಮತ್ತು ಮರಿ ಆನೆಯನ್ನು ಮಣಿಕಂಠ ನೀರಿನಲ್ಲಿ ಬೆನ್ನತ್ತಿ ಅಟ್ಟಾಡಿಸಿದ್ದಾನೆ. ಸ್ವಲ್ಪ ಹೊತ್ತಾದ ಬಳಿಕ ಕೊಂಚ ಸಮಾಧಾನಗೊಂಡ ಮಣಿಕಂಠ, ನೀರಿನಲ್ಲೇ ಬಹಳ ಹೊತ್ತು ನಿಂತಿದ್ದು, ಸ್ಥಳೀಯರು ಮಾಡಿರುವ ಈ ಒಂದು ವಿಡಿಯೋ ಪವರ್ ಟಿ.ವಿ. ಗೆ ದೊರೆತಿದೆ.
ಸುಮಾರು ಎರಡು ತಾಸುಗಳ ಬಳಿಕ ಮಾವುತರು ಮತ್ತು ಕವಾಡಿಗಳು ಮಣಿಕಂಠನ ಮನವೊಲಿಸಿ ನೀರಿನಿಂದ ಹೊರಗೆ ಕರೆತಂದು ಸರಪಳಿಯಿಂದ ಬಿಗಿಯುವಲ್ಲಿ ಯಶಸ್ವಿಯಾಗಿದ್ದು, ಈ ಎಲ್ಲಾ ಘಟನೆಗಳಿಂದಾಗಿ ಆನೆಗಳನ್ನು ನೋಡಲು ಬಂದಿದ್ದ ಪ್ರವಾಸಿಗರೂ ಸಹ ಆತಂಕಗೊಡಿದ್ದರು. ಬಿಡಾರದ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವಾಸಿಗರನ್ನು ಬಿಡಾರದಿಂದ ಹೊರಗೆ ಕಳಿಸಿದ್ದರು.
ಅಂದಹಾಗೆ, ಸಕ್ರೆಬೈಲು ಆನೆ ಬಿಡಾರದಲ್ಲಿ, ಕಾಡಿನಲ್ಲಿರುವ ಆನೆಗಳನ್ನು ಪ್ರತಿದಿನ ಬೆಳಿಗ್ಗೆ ಬಿಡಾರಕ್ಕೆ ಕರೆತಂದು ತುಂಗಾ ಜಲಾಶಯದ ಹಿನ್ನೀರಲ್ಲಿ ಮೈ ತೊಳೆದು ತಲೆಗೆ ಎಣ್ಣೆ ಮಸಾಜ್ ಮಾಡಿ ನಿಗದಿತ ಮೇವು ನೀಡಿ ಬಳಿಕ ಮತ್ತೆ ಕಾಡಿಗೆ ಬಿಡಲಾಗುತ್ತದೆ. ಆದರೆ, ಇಂದು ಮಣಿಕಂಠನ ಪುಂಡಾಟಕ್ಕೆ ಬಾಲಣ್ಣ ಆನೆ ಸುಸ್ತಾಗಿದ್ದು, ಬೆಸ್ತು ಬಿದ್ದಿದ್ದಾನೆ.
ಇನ್ನೂ ಬೆಂಗಳೂರಿನ ಯಲಹಂಕದ ಅಯ್ಯಪ್ಪ ಸ್ವಾಮಿ ದೇವಾಲಯಲ್ಲಿದ್ದ ಮಣಿಕಂಠ ಆನೆಯು 10 ವರ್ಷಗಳ ಹಿಂದೆ ಮಾವುತನನ್ನು ಸಾಯಿಸಿತ್ತು. ಅದಾದ ಬಳಿಕ ದೇವಸ್ಥಾನ ಸಮಿತಿಯವರು ಅರಣ್ಯ ಇಲಾಖೆಗೆ ಒಪ್ಪಿಸಿದ್ದರು. ಸಕ್ರೆಬೈಲಿನಲ್ಲಿ ತಂದ ಬಳಿಕ ಅದನ್ನು ಪಳಗಿಸಿ ನಿಯಂತ್ರಿಸಲಾಗಿತ್ತು. ಇಷ್ಟಾಗಿಯೂ ಪುಂಡಾಟ ನಡೆಸುವುದನ್ನು ಈ ಮಣಿಕಂಠ ಆನೆ ನಿಲ್ಲಿಸದೇ ಇರೋದು, ಆತಂಕಕ್ಕೆ ಕಾರಣವಾಗಿದೆ.