‘ಕೈ’ಕೊಟ್ಟ ಎಂಟಿಬಿ ಮುಂಬೈಗೆ ಜಂಪ್!

0
474

ಬೆಂಗಳೂರು: ನಿನ್ನೆ ಸತತ 13 ಗಂಟೆಗಳ ಕಾಲ ಮಾತುಕತೆಯ ಬಳಿಕ ನಾನು ರಾಜೀನಾಮೆಯನ್ನು ಹಿಂಪಡೆಯುತ್ತೇನೆ ಎಂದಿದ್ದ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್​ ಇಂದು ಬೆಳಗ್ಗೆ  ಉಲ್ಟಾ ಹೊಡೆದಿದ್ದಾರೆ. ಅಷ್ಟೇ ಅಲ್ಲ, ಇಂದು ಕೆಲವೇ ಗಂಟೆಗಳ ಮುನ್ನ ನಾನು ಮುಂಬೈಗೆ ಹೋಗಲ್ಲ ಎಂದು ಹೇಳಿಕೆ ನೀಡಿದ್ದ ಅವರು ಮುಂಬೈಗೆ ಹಾರಿ ದೋಸ್ತಿ ನಾಯಕರಿಗೆ ಬಿಗ್​ ಶಾಕ್​ ನೀಡಿದ್ದಾರೆ.

ಮೈತ್ರಿ ಪಕ್ಷದ 17 ಜನ ಶಾಸಕರ ಸಾಮೂಹಿಕ ರಾಜೀನಾಮೆಯಿಂದ ತತ್ತರಿಸಿ ಹೋಗಿರುವ ಮೈತ್ರಿ ನಾಯಕರು ಸರ್ಕಾರದ ಉಳಿವಿಗಾಗಿ ಅತೃಪ್ತ ಶಾಸಕರ ಮನವೊಲಿಕೆಗೆ ಕಸರತ್ತು ನಡೆಸುತ್ತಿದ್ರು. ಹೀಗಾಗಿ ನಿನ್ನೆ(ಜುಲೈ 13) ಬೆಳಗ್ಗೆ 5 ಗಂಟೆಗೆ ಡಿಕೆ ಶಿವಕುಮಾರ್​ ಅವರು ಅತೃಪ್ತ ಶಾಸಕ ಎಂಟಿಬಿ ನಾಗರಾಜ್​ ಮನೆಗೆ ಆಗಮಿಸಿ ಸತತ 6 ಗಂಟೆಗಳ ಕಾಲ ಮಾತುಕತೆ ನಡೆಸಿದರೂ ಫಲಪ್ರದವಾಗಿರಲಿಲ್ಲ. ಕೊನೆಗೆ ಡಿಕೆಶಿಯವರು ಎಂಟಿಬಿಯವರನ್ನು ತನ್ನ ಕಾರಿನಲ್ಲಿ ನೇರವಾಗಿ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯರವರ ಮನೆಗೆ ಕರೆತಂದರು. ತನಗೆ ಆಪ್ತರಾಗಿರುವ ಎಂಟಿಬಿ ನಾಗರಾಜ್​ ಜೊತೆ ಸಿದ್ದರಾಮಯ್ಯರವರು ಸುಮಾರು 5 ಗಂಟೆಗಳ ಕಾಲ ಮಾತುಕತೆ ನಡೆಸಿದ್ರು. ಈ ವೇಳೆ ಸಿದ್ದರಾಮಯ್ಯರವರ ಮಾತಿಗೆ ಒಪ್ಪಿಗೆ ಸೂಚಿಸಿದ್ದ ಎಂಟಿಬಿಯವರು ಸುಧಾಕರ್​ ಜೊತೆ ಚರ್ಚಿಸಿ ನಿರ್ಧಾರಕ್ಕೆ ಬರುವುದಾಗಿ ಭರವಸೆ ನೀಡಿದ್ದರು. ಮಾತುಕತೆಯ ಬಳಿಕ ಎಂಟಿಬಿ ಅವರು ಸಿದ್ದು ಮನೆಯಿಂದ ಎಂ.ಬಿ. ಪಾಟೀಲ್​​ ಮತ್ತು ಜಮೀರ್​ ಅಹಮದ್​ ಜೊತೆ ಒಂದೇ ಕಾರಿನಲ್ಲೂ ಪ್ರಯಾಣಿಸಿದ್ರು. ಆ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಎಂಟಿಬಿ ತಾನು ರಾಜೀನಾಮೆಯನ್ನು ಹಿಂಪಡೆಯುವುದಾಗಿ ಹೇಳಿಕೆ ನೀಡಿದ್ದರು.

ಎಂಟಿಬಿಯವರ ಈ ನಿರ್ಧಾರದಿಂದ ದೋಸ್ತಿ ನಾಯಕರು ತಕ್ಕ ಮಟ್ಟಿಗೆ ಖಷಿಯಾಗಿದ್ರು. ಆದ್ರು ಅವರ ಮೇಲೆ ಕಣ್ಣಿಡಲು ಸಿದ್ದರಾಮಯ್ಯರವರು ತನ್ನ ಆಪ್ತ ಹೆಚ್​.ಮಹದೇವಪ್ಪರಿಗೆ ಹೇಳಿದ್ದರು. ಆದ್ರೆ, ಅವರೆಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿ ಎಂಟಿಬಿ ಮುಂಬೈಗೆ ತೆರಳಿದ್ದಾರೆ. ಮುಂಬೈಗೆ ತೆರಳುವ ಮೊದಲು “ನಾನೇನೋ ರಾಜೀನಾಮೆ ನಿರ್ಧಾರ ಮಾಡಿದ್ದೀನಿ, ಆದ್ರೆ ಸುಧಾಕರ್ ಜೊತೆ ಮಾತನಾಡ್ತೀನಿ” ಎಂದು ಹೇಳಿಕೆ ನೀಡಿದ್ದ ಎಂಟಿಬಿ ನಾಗರಾಜ್​ ಆ ಬಳಿಕ ನೇರವಾಗಿ ಹೆಚ್​ಎಎಲ್​​ ಗೆ ತೆರಳಿ ಮುಂಬೈಗೆ ಹಾರಿದ್ದಾರೆ. ಎಚ್. ಸಿ.ಮಹದೇವಪ್ಪರವರು ಎಂಟಿಬಿ ಅವರನ್ನು ಫಾಲೋ ಮಾಡಿದ್ರೂ ಕೂಡ ಅವರು ಹೆಚ್​ಎಎಲ್​ಗೆ ಆಗಮಿಸುವ ಮೊದಲೇ ಎಂಟಿಬಿ ನಿರ್ಗಮಿಸಿದ್ರು.

ಎಂಟಿಬಿ ನಾಗರಾಜ್​ ಮುಂಬೈಗೆ ತೆರಳಿದರ ಹಿಂದೆ ಬಿಜೆಪಿಯ ಕೈವಾಡ ಇದೆ ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿಯಿಡೀ ಎಂಟಿಬಿ, ಇಂದಿನ ಪ್ಲಾನ್​ ಬಗ್ಗೆ ಬಿಎಸ್​ವೈ ಆಪ್ತ ಸಂತೋಷ್​ ಜೊತೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ. ಇನ್ನು, ಎಂಟಿಬಿಯವರನ್ನು ಅವರ ಮನೆಯಿಂದ ಹೆಚ್​ಎಎಲ್​ ಗೆ ಬೊಮ್ಮನಹಳ್ಳಿ ಶಾಸಕ ಸತೀಶ್​ ರೆಡ್ಡಿಯವರೇ ಖುದ್ದಾಗಿ ಕರೆದುಕೊಂಡು ಹೋಗಿ ವಿಮಾನ ಹತ್ತಿಸಿ ಬಂದಿದ್ದಾರೆನ್ನಲಾಗಿದೆ. ಎಂಟಿಬಿ ಅವರಿಗೆ ಬಿಜೆಪಿಯ ಆರ್​.ಅಶೋಕ್​, ಸಂತೋಷ್​ ಹಾಗೂ  ವಿಶ್ವನಾಥ್​ ಸಾಥ್​ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಎಂಟಿಬಿ ನಾಗರಾಜ್​ ಮುಂಬೈಗೆ ತೆರಳಿದ್ದು ದೋಸ್ತಿ ನಾಯಕರಿಗೆ ಬಲವಾದ ಹೊಡೆತ ನೀಡಿದೆ. ಬುಧವಾರ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸುವ ಸಾಧ್ಯತೆಯಿದ್ದು, ಎಂಟಿಬಿ ರಾಜೀನಾಮೆ ಹಿಂಪಡೆಯುತ್ತಾರೆಂಬ ನಂಬಿಕೆ ದೋಸ್ತಿ ನಾಯಕರಲ್ಲಿತ್ತು. ಆದ್ರೆ, ಎಂಟಿಬಿ ದೋಸ್ತಿ ನಾಯಕರಿಗೆ ಕೈ ಕೊಟ್ಟಿದ್ದು ಬಿಗ್​ ಶಾಕ್​ ನೀಡಿದೆ. ಇನ್ನು ಇತ್ತ ಎಂಟಿಬಿ ನಾಗರಾಜ್​ ಮುಂಬೈಗೆ ತೆರಳಿರುವ ಸುದ್ದಿ ತಿಳಿಯುತ್ತಲೇ ಅತ್ತ ಮುಂಬೈ ರೆಸಾರ್ಟ್​ನಲ್ಲಿರುವ ಅತೃಪ್ತ  ಶಾಸಕರು ಫುಲ್​ ಖುಷ್​ ಆಗಿದ್ದಾರೆ. ದೋಸ್ತಿ ನಾಯಕರು ಮನವೊಲಿಸುತ್ತಿರುವ ವಿಷಯ ತಿಳಿದು ಆತಂಕಕ್ಕೊಳಗಾಗಿದ್ದ ರೆಬೆಲ್​ ಶಾಸಕರು ಇದೀಗ ರಿಲ್ಯಾಕ್ಸ್​​ ಆಗಿದ್ದಾರೆ.

 

LEAVE A REPLY

Please enter your comment!
Please enter your name here