ಮಂಡ್ಯ: ಜಿಲ್ಲೆಯ ಜೀವನಾಡಿ, ಏಷ್ಯಾದ ಮೊದಲ ಸಕ್ಕರೆ ಕಾರ್ಖಾನೆ ಮೈಶುಗರ್ ಪರ ಹೋರಾಟದ ದಿನೇ ದಿನೇ ಹೆಚ್ಚಾಗುತ್ತಿದೆ.
ಓ ಅಂಡ್ ಎಂ ಮಾದರಿಯಲ್ಲಿ ಕಾರ್ಖಾನೆ ಕಾರ್ಯಾರಂಭಕ್ಕೆ ಒತ್ತಾಯಿಸಿ ನಡೆದ ಬೃಹತ್ ಹೋರಾಟದಲ್ಲಿಂದು ಸಂಸದೆ ಸುಮಲತಾ ಅಂಬರೀಶ್ ಭಾಗವಹಿಸಿದ್ದರು.
ಹಿರಿಯ ಮುತ್ಸದ್ದಿ, ಮಾಜಿ ಶಾಸಕ ಡಾ.ಹೆಚ್. ಡಿ.ಚೌಡಯ್ಯ ನೇತೃತ್ವದಲ್ಲಿ ಪಕ್ಷಾತೀತವಾಗಿ, ಬಹುತೇಕ ಎಲ್ಲಾ ಸಂಘಟನೆಗಳ ನೇತೃತ್ವದಲ್ಲಿಂದು ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿತ್ತು.
ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರಿಂದ ಡಿಸಿ ಕಚೇರಿವರೆಗೆ ಬೃಹತ್ ಜಾಥಾ ನಡೆಸಲಾಯಿತು.
ಬಳಿಕ ಡಿಸಿ ಕಚೇರಿ ಬಳಿ ಪ್ರತಿಭಟನಾ ಧರಣಿ ನಡೆಸಿ, ಶೀಘ್ರ ಓ ಅಂಡ್ ಎಂ ಮಾದರಿಯಲ್ಲಿ ಮೈಶುಗರ್ ಕಾರ್ಖಾನೆ ಆರಂಭ ಮಾಡುವಂತೆ ಆಗ್ರಹಿಸಿದರು.
ಸಂಸದೆ ಸುಮಲತಾ ಅಂಬರೀಶ್ ಸಾಥ್
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಮೈಶುಗರ್ ಪರ ಹೋರಾಟಕ್ಕೆ ಬೆಂಬಲ ನೀಡಿದ್ರು.
ಪ್ರತಿಭಟನಾ ಧರಣಿ ನಿರತರ ಜೊತೆ ಸಮಾಲೋಚನೆ ಮಾಡಿ, ಹೋರಾಟಗಾರರು ನಿರ್ಣಯ ಆಲಿಸಿದರು.
ಬಳಿಕ ಮಂಡ್ಯ ಡಿಸಿ ಮುಖಾಂತರ ಮುಖ್ಯಮಂತ್ರಿಗಳಿಗೆ ಶೀಘ್ರದಲ್ಲೇ ಮೈಶುಗರ್ ಕಾರ್ಖಾನೆ ಆರಂಭ ಮಾಡಬೇಕು. ಈ ಹಿಂದೆ ನಿರ್ಧರಿಸಿದ್ದಂತೆ ಓ ಅಂಡ್ ಎಂ ಮಾದರಿಯಲ್ಲಿ ಕಾರ್ಖಾನೆ ಕಾರ್ಯಾರಂಭ ಮಾಡಬೇಕು. ಆ ಮೂಲಕ ಮಂಡ್ಯ ರೈತರ ಹಿತಕಾಯಬೇಕು ಎಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದ್ರು.
ವಿರೋಧಿಗಳಿಗೆ ಸುಮಲತಾ ಖಡಕ್ ವಾರ್ನ್!:
ಪ್ರತಿಭಟನಾಕಾರರನ್ನ ಉದ್ದೇಶಿಸಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ಮೈಶುಗರ್ ಕಾರ್ಖಾನೆ ವಿಚಾರದಲ್ಲಿ ಕೆಲವರು ಸ್ವಾರ್ಥ ರಾಜಕಾರಣ ಮಾಡ್ತಿದ್ದಾರೆ. ಇದು ರಾಜಕಾರಣ ಮಾಡುವ ಸಂಧರ್ಭ ಅಲ್ಲ. ಶೀಘ್ರ ಕಾರ್ಖಾನೆ ಆರಂಭಿಸೋದು, ರೈತರ ಹಿತ ಕಾಯೋದು ಎಲ್ಲರ ಮುಖ್ಯ ಉದ್ದೇಶ ಆಗಿರಬೇಕು.
ಆದರೆ, ಕೆಲವರು ಹೋರಾಟವನ್ನ ಹೈಜಾಕ್ ಮಾಡೋಕೆ ಹೊರಟಿದ್ದಾರೆ. ಈ ಹಿಂದೆ ಇದ್ದ ಸರ್ಕಾರವೇ ಓ ಅಂಡ್ ಎಂಗೆ ಅನುಮತಿ ನೀಡಿತ್ತು. ಆಗ ಇಲ್ಲದ ಹೋರಾಟ ಹೀಗೇಕೆ?. ಇದರಲ್ಲೇ ಗೊತ್ತಾಗುತ್ತೆ ಅವರ ಸ್ವಾರ್ಥ ಏನು ಅಂತಾ. ಅವರಿದ್ದಾಗ ಕಾರ್ಖಾನೆ ಶುರು ಮಾಡಲು ಆಗಲಿಲ್ಲ. ಈ ಬೇರೆ ಸರ್ಕಾರ ಬಂದಿದೆ. ಈ ಸರ್ಕಾರ ಕಾರ್ಖಾನೆ ಆರಂಭ ಮಾಡಿದರೆ, ಅದರ ಕ್ರೆಡಿಟ್ ಬೇರೆಯವರಿಗೆ ಹೋಗುತ್ತೆ ಅನ್ನೋದನ್ನ ಸಹಿಸಿಕೊಳ್ಳಲು ಆಗ್ತಿಲ್ಲ. ಹೀಗಾಗಿ ಅವರು ಈ ರೀತಿ ಮಾಡ್ತಿದ್ದಾರೆ ಅಂತ ಆರೋಪಿಸಿದರು.
ನನ್ನ ಜವಾಬ್ದಾರಿ ನನಗೆ ಗೊತ್ತು:
ನನಗೆ ಏಳೂವರೆ ಲಕ್ಷ ಜನ ಆಶೀರ್ವಾದ ಮಾಡಿ, ಜವಾಬ್ದಾರಿ ನೀಡಿದ್ದಾರೆ. ಅವರ ಹಿತ ಕಾಯೋದು ನನ್ನ ಮುಖ್ಯ ಉದ್ದೇಶ. ಬೇರೆಯವರಂತೆ ನಾನು ಶೋ ಕಾಲ್ಡ್ ಜನಪ್ರತಿನಿಧಿ, ರೈತ ನಾಯಕಿ, ರೈತ ಮುಖಂಡರು, ಹೋರಾಟಗಾರ ಅಲ್ಲ. ರೈತರ ವಿಚಾರದಲ್ಲಿ ರಾಜಕೀಯ ಮಾಡೋದನ್ನ ನಾನು ಸಹಿಸಲ್ಲ. ಅದರಿಂದ ಮುಂದಾಗುವ ಅನಾಹುತಕ್ಕೆ ನೀವೇ ಹೊಣೆ ಆಗ್ತೀರಾ. ನೊಂದ ರೈತರ ಶಾಪ ನಿಮ್ಮನ್ನ ಸುಮ್ಮನೇ ಬಿಡಲ್ಲ ಅಂತಾ ಎಚ್ಚರಿಕೆ ನೀಡಿದ್ರು.
ಇದು ಕೇವಲ ನಿಮ್ಮ ಹೋರಾಟ ಅಲ್ಲ. ನಮ್ಮ ಹೋರಾಟ ಮತ್ತು ಜವಾಬ್ದಾರಿಯೂ ಹೌದು. ಹೀಗಾಗಿ ನಿಮ್ಮ ಹೋರಾಟದಲ್ಲಿ ನಾನೂ ಪಾಲ್ಗೊಂಡಿದ್ದೇನೆ. ಈ ಹೋರಾಟ ಯಶಸ್ವಿ ಆಗೋವರೆಗೂ ಸಮ್ಮನೇ ಕೂರಲ್ಲ. ಕಾರ್ಖಾನೆ ಶೀಘ್ರದಲ್ಲೇ ಆರಂಭ ಆಗಲೇಬೇಕು ಎಂದರು.
ರಾಕ್ ಲೈನ್ ವಿಚಾರಕ್ಕೂ ಸ್ಪಷ್ಟನೆ:
ನಾನು ಯಾರ ಲಾಭಿಗೂ ಮಣಿದಿಲ್ಲ, ಮಣಿಯೋದೂ ಇಲ್ಲ. ನನ್ನ ಜೊತೆ ಇರೋ ಯಾರೂ ಆ ವಿಚಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅವರು ಸಿನಿಮಾ ಕ್ಷೇತ್ರದಲ್ಲಿ ಇದ್ದಾರೆ. ನೂರಾರು ಜನಕ್ಕೆ ಕೆಲಸ ಕೊಟ್ಟು, ಸಿನಿಮಾ ಕ್ಷೇತ್ರದಲ್ಲೇ ನೆಮ್ಮದಿಯಾಗಿದ್ದಾರೆ. ಈ ಕಾರ್ಖಾನೆಯಿಂದ ಅವರು ಲಾಭ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಉದ್ದೇಶ ಪೂರ್ವಕವಾಗಿ ಈ ರೀತಿ ಆರೋಪ ಮಾಡ್ತಿದ್ದಾರೆ. ಈ ರೀತಿ ಆರೋಪ ಮಾಡೋರ ದುರುದ್ದೇಶ ಫಲ ನೀಡಲ್ಲ ಅಂತಾ ತಿರುಗೇಟು ನೀಡಿದ್ರು.
ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ.