ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ 2.0 ಸರಕಾರದ ಎರಡನೇ ಬಜೆಟ್ ಮಂಡನೆಯಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದರು.
ಆಯವ್ಯಯ ಮಂಡನೆ ವೇಳೆ ಮಾತನಾಡಿದ ಅವರು, “ಆರ್ಥಿಕತೆಗೆ ವೇಗ ನೀಡುವ ಕೆಲಸ ಆಗುತ್ತಿದೆ. ಐದು ವರ್ಷದ ಆಡಳಿತದಲ್ಲಿ ಅನೇಕ ಬದಲಾವಣೆಗಳು ಆಗಿವೆ. ಆರ್ಥಿಕ ಪ್ರಗತಿಯಾದ್ರೆ ಉದ್ಯೋಗ ಸೃಷ್ಟಿಯು ಹೆಚ್ಚಾಗುತ್ತದೆ ಎಂದರು. ಜಿಎಸ್ಟಿ ಕಡಿಮೆ ಮಾಡಿದ್ದರಿಂದ ಜನರಿಗೆ ಅನುಕೂಲವಾಗಿದೆ. ಇನ್ನುಮುಂದೆ ಕೇಂದ್ರದ ಯೋಜನೆಗಳನ್ನು ನೇರವಾಗಿ ಬಡವರಿಗೆ ತಲುಪಿಸಿತ್ತೇವೆ. ಅಷ್ಟೆ ಅಲ್ಲ ಫಲಾನುಭವಿ ಅಕೌಂಟ್ಗೆ ನೇರವಾಗಿ ಹಣ ಜಮೆ ಮಾಡಲಾಗುತ್ತದೆ. 40 ಕೋಟಿ ಜನ ಜಿಎಸ್ಟಿ ರಿಟರ್ನ್ಸ್ ಫೈಲ್ ಮಾಡಿದ್ದಾರೆ. ಅಲ್ಲದೆ 16 ಲಕ್ಷ ಹೊಸ ತೆರಿಗೆದಾರರು ಸೇರ್ಪಡೆಯಾಗಿದ್ದಾರೆ. ಹಾಗಾಗಿ ನಾವು ಅಂದಾಜಿಗಿಂತ ಹೆಚ್ಚು ಅಭಿವೃದ್ಧಿ ಸಾಧಿಸಿದ್ದೇವೆ. ಜಿಎಸ್ಟಿ ಜಾರಿಯಿಂದ ಕುಟುಂಬಗಳಿಗೆ ಶೇ.4ರಷ್ಟು ಉಳಿತಾಯವು ಆಗಿದೆ ಎಂದು ಜಿಎಸ್ಟಿಯ ನಿರ್ಮಾತೃ ಅರಣ್ ಜೇಟ್ಲಿಗೆ ನಮನ ಸಲ್ಲಿಸಿದರು.
ಕೇಂದ್ರ ಸರ್ಕಾರದಿಂದ ಸಾಲ ಇಳಿಕೆಯಾಗಿದೆ. ಹಾಗೆಯೇ ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ಬಡವರಿಗೆ ಮನೆ ಒದಗಿಸಲಾಗಿದೆ. ಹಾಗಾಗಿ 271 ಮಿಲಿಯನ್ ಜನರು ಬಡತನದಿಂದ ಹೊರ ಬಂದಿದ್ದಾರೆ. ಅಲ್ಲದೆ ಹಿಂದುಳಿದ ವರ್ಗದ ಅಭಿವೃದ್ಧಿ, ಡಿಜಿಟಲ್ ಇಂಡಿಯಾ ಹಾಗೂ ಅಂತ್ಯೋದಯ ಯೊಜನೆಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದೆ ಎಂದರು. ಮೂಲ ಸೌಕರ್ಯಕ್ಕೂ ಕೇಂದ್ರದಿಂದ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಸಕ್ತ ಬಜೆಟ್ನ ಪ್ರಮುಖಾಂಶಗಳು :
ಈ ಬಾರಿಯ ಬಜೆಟ್ ಮೂರು ಅಂಶಗಳ ಮೇಲೆ ಕೇಂದ್ರೀಕೃತವಾಗಿತ್ತು. ಅದರಲ್ಲಿ ಮೊದಲನೆಯ ಅಂಶ ನಿರೀಕ್ಷೆಯ ಭಾರತ, ಎರಡನೆಯದು ಸಬ್ ಕಾ ಸಾಥ್ ಹಾಗೂ ಮೂರನೆಯದು ಸಾಮಾಜಿಕ ಭದ್ರತೆ.
ಕೃಷಿ ರಂಗಕ್ಕೆ ಸಂಬಂಧಿಸಿದಂತೆ ಕೃಷಿ ಮಾರುಕಟ್ಟೆ, ಕೃಷಿ ಚಟುವಟಿಕೆ ಹಾಗೂ ಮೀನುಗಾರಿಕೆ ಸುಧಾರಿಸಲು 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣ ಮಾಡುವ ಭರವಸೆ ಸಿಕ್ಕಿದೆ. ಕೃಷಿ ಮಾರುಕಟ್ಟೆಗಳನ್ನು ಸುಧಾರಿಸಲಾಗುವುದು. ಇದಕ್ಕೆ ಈಗಾಗಲೇ 15 ಅಂಶಗಳ ಕ್ರಿಯಾ ಯೊಜನೆ ತಯಾರಾಗಿದೆ. 20 ಲಕ್ಷ ಕೃಷಿ ಪಂಪ್ ಸೆಟ್ಗಳಿಗೆ ಸೋಲಾರ್ ವಿದ್ಯುತ್ ಕಲ್ಪಿಸಲಾಗುವುದು.
ಅಂತರ್ಜಲವನ್ನು ಅವಲಂಬಿಸಿರುವ 100 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಅವಕಾಶ ಕಲ್ಪಿಸಲಾಗಿದ್ದು, ರಾಜ್ಯಗಳು ಇದಕ್ಕೆ ಕ್ರಮ ಕೈಗೊಳ್ಳಬೇಕು. ಇನ್ನು ರಸಗೊಬ್ಬರ ತಗ್ಗಿಸಲು ಕೇಂದ್ರ ಸರ್ಕಾರದಿಂದ ನಿರ್ಧರಿಸಿದ್ದು, ಅಗತ್ಯ ಇದ್ದರೆ ಮಾತ್ರ ರಸಗೊಬ್ಬರ ಬಳಕೆಗೆ ಕ್ರಮ ಕೈಗೊಳ್ಳಲಾಗಿದೆ.
ತಾಲೂಕು ಮಟ್ಟದಲ್ಲಿ ಕೃಷಿ ಶೈತ್ಯಗಾರ ನಿರ್ಮಾಣ. ಅಲ್ಲದೆ ಕೃಷಿ ಉಡಾನ್, ರೈಲ್ವೆ ಉಡಾನ್ ಯೋಜನೆಗಳನ್ನು ಜಾರಿಗೆ ತರಲಾಗುವುದು. ಇದರ ಮೂಲಕ ರೈಲು ಮತ್ತು ವಿಮಾನಗಳ ಬಳಸಿಕೊಂಡು ರೈತರ ಉತ್ಪನ್ನಗಳನ್ನು ಸಾಗಿಸಲು ಕ್ರಮ ತೆಗೆದುಕೊಳ್ಳಲಾಗುವುದು.
ರೈತ ಮಹಿಳೆಯರಿಗಾಗಿ ರೈತ ಧಾನ್ಯಲಕ್ಷ್ಮಿ ಯೋಜನೆ ಜಾರಿಗೆ ತರಲಾಗುವುದು. ಈ ಮೂಲಕ 15 ಲಕ್ಷ ಕೋಟಿ ಕೃಷಿ ಸಾಲವನ್ನು ನೀಡಲಾಗುತ್ತದೆ. ಕೃಷಿಕರಿಗೆ ಶೂನ್ಯ ಬಂಡವಾಳದಲ್ಲಿ ಸ್ವಾಭಾವಿಕ ಫಾರ್ಮಿಂಗ್ಗೆ ಅವಕಾಶ ಒದಗಿಸಲಾಗಿದೆ. ನಬಾರ್ಡ್ ಸಾಲಗಳನ್ನು ನೀಡುವ ಪ್ರಕ್ರಿಯೆಯು ಮುಂದುವರಿಯಲಿದೆ.
ಕೇಂದ್ರ ಸರ್ಕಾರದಿಂದ ಸಾಗರ ಮಿತ್ರ ಯೋಜನೆಯು ಜಾರಿಯಾಗಲಿದ್ದು, ಇದರಿಂದ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ ಯುವಕರಿಗೆ ಅನುಕೂಲವಾಗಲಿದೆ. ಇನ್ನು 500 ಮಿನುಗಾರಿಕಾ ಸಹಕಾರ ಸಂಘಗಳ ಸ್ಥಾಪನೆಯಾಗಲಿದ್ದು, ಹೈನುಗಾರಿಕೆಗೂ ನರೇಗಾ ಯೋಜನೆಯ ವಿಸ್ತರಣೆಯಾಗಲಿದೆ ಎಂದರು. ಕಿಸಾನ್ ಕ್ರೆಡಿಟ್ ಯೋಜನೆಗೂ ಚಿಂತನೆಯನ್ನು ಮಾಡಲಾಗಿದೆ. ಒಟ್ಟು ಕೃಷಿ ಕೃಷಿ ಇಲಾಖೆಗಾಗಿ 2.83 ಕೋಟಿ ಯೋಜನೆ ಜಾರಿಗೊಳಿಸಲಾಗುವುದು.
ಮಕ್ಕಳ ಆರೋಗ್ಯ ಸಂರಕ್ಷಣೆಗಾಗಿ ಮಿಷನ್ ಇಂದ್ರಧನುಷ್ ಯೋಜನೆಯನ್ನು ವಿಸ್ತರಿಸಲಾಗುತ್ತದೆ. 12 ರೋಗಗಳಿಗೆ ಇಂದ್ರ ಧನುಷ್ ಯೋಜನೆಯಡಿ ಚಿಕಿತ್ಸೆಯನ್ನು ನೀಡಲಾಗುವುದು. ಆಯುಷ್ಮಾನ್ ಭಾರತ್ ಯೋಜನೆಯ ವಿಸ್ತರಣೆಗೂ ಚಿಂತನೆಯನ್ನು ನಡೆಸಲಾಗಿದೆ. ಪಿಪಿಪಿ ಸಹಕಾರದಲ್ಲಿ ಆಸ್ಪತ್ರೆಗಳ ನಿರ್ಮಾಣಕ್ಕೆ ನೀಲನಕ್ಷೆ ತಯಾರಿಸಿದ್ದು,112 ಜಿಲ್ಲಾ ಕೇಂದ್ರಗಳಲ್ಲಿ ಪಿಪಿಪಿ ಮಾದರಿಯಲ್ಲಿ ಆಸ್ಪತ್ರೆಗಳ ನಿರ್ಮಾಣ ಮಾಡಲಾಗುವುದು.
ಎಲ್ಲಾ ಜಿಲ್ಲೆಗಳಲ್ಲಿ ಜನೌಷಧಿ ಕೇಂದ್ರಗಳ ವಿಸ್ತರಿಸಲಾಗುತ್ತದೆ. ಇನ್ನು ಟಿಬಿ ಕಾಯಿಲೆ ನಿರ್ಮೂಲನೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದ್ದು, 2025ರೊಳಗೆ ಭಾರತದಲ್ಲಿ ಟಿಬಿ ಕಾಯಿಲೆ ನಿರ್ಮೂಲನೆ ಮಾಡುವ ಯೋಜನೆ ಹಾಕಿಕೊಂಡಿದೆ. ಜೊತೆಗೆ ಸ್ವಚ್ಛ ಭಾರತಕ್ಕೆ 12,300 ಕೋಟಿ ರೂಪಾಯಿ ಮೀಸಲಿಡಲಿದ್ದು, ಆರೋಗ್ಯ ಇಲಾಖೆಯಲ್ಲಿ ಮೂಲಕ ಸೌಕರ್ಯಕ್ಕೆ ಒತ್ತು ನೀಡಲಾಗುವುದು.
ಶಿಕ್ಷಣ ರಂಗದಲ್ಲಿ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಿದೆ. ಶಿಕ್ಷಣ ಇಲಾಖೆಯಲ್ಲಿ ಎಫ್ಡಿಐ ಹೂಡಿಕೆಗೆ ಅವಕಾಶ ನೀಡಲಿದೆ. ಕೇಂದ್ರ ಸರ್ಕಾರದಿಂದ ಆನ್ಲೈನ್ ಶಿಕ್ಷಣ ಘೋಷಣೆಯನ್ನು ಮಾಡಲಿದೆ. ದೇಶದಲ್ಲಿರುವ ವೈದ್ಯರ ಕೊರತೆ ಇದೆ. ಅದಕ್ಕಾಗಿ ಹೊಸ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ಹಾಗೆಯೇ ಶುಶ್ರೂಷಕರು, ಪ್ಯಾರಾ ಮೆಡಿಕಲ್ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಆದ್ದರಿಂದ ಈ ಬಾರಿಯ ಬಜೆಟ್ನಲ್ಲಿ ಶಿಕ್ಷಣಕ್ಕೆ 99,300 ಕೋಟಿ ರೂಪಾಯಿ ಮೀಸಲಿಡಲಾಗಿದೆ.
ರೈಲ್ವೆಗೆ ಸಂಬಂಧಿಸಿದಂತೆ ಹೊಸ ಯೋಜನೆಗಳನ್ನು ಘೋಷಣೆ ಮಾಡಲಿದ್ದು, ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ ಕಾರಿಡಾರ್ ಪ್ರಾರಂಭಿಸಲಿದೆ. 29 ಸಾವಿರ ಕಿಲೋಮೀಟರ್ ರೈಲ್ವೆ ಹಳಿ ವಿದ್ಯುತ್ತೀಕರಣಕ್ಕೆ ಕ್ರಮ ಕೈಗೊಳ್ಳಲಿದೆ. ಇನ್ನು ಖಾಸಗಿ ಸಹಭಾಗಿತ್ವದಲ್ಲಿ 120 ಹೊಸ ರೈಲುಗಳ ಘೋಷಣೆಯಾಗಲಿದೆ. ಇನ್ನುಮುಂದೆ ರೈಲ್ವೆ ಹಳಿಗಳ ಮೇಲೆ ಮತ್ತಷ್ಟು ತೇಜಸ್ ರೈಲುಗಳ ಓಡಾಟ ನಡೆಸಲಿವೆ.
ಬಂದರುಗಳಿಗೂ ರೈಲು ಸಂಪರ್ಕ ಕಲ್ಪಿಸಲಾಗುವುದಲ್ಲದೇ ಈ ಮೂಲಕ ಸ್ಟಾಕ್ ಮಾರ್ಕೆಟ್ಗಳ ರೀತಿ ಬಂದರುಗಳ ಅಭಿವೃದ್ಧಿಯನ್ನು ಮಾಡಲಾಗುತ್ತದೆ. ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ಗಳ ಅಳವಡಿಸಲಾಗುತ್ತದೆ. ಇದರಿಂದ ವಿದ್ಯುತ್ ಬಳಕೆದಾರರಿಗೆ ಅನುಕೂಲವಾಗಲಿದೆ.
ರಾಷ್ಟ್ರೀಯ ಅನಿಲ ಗ್ರಿಡ್ ಯೋಜನೆ ವಿಸ್ತರಣೆಯನ್ನು ಮಾಡಲಿದ್ದು,16,200 ಕಿಲೋಮೀಟರ್ ಅನಿಲ ಗ್ರಿಡ್ ವಿಸ್ತರಣೆಯಾಗಲಿದೆ. 2024ರವೇಳೆಗೆ 100 ಏರ್ಪೋರ್ಟ್ಗಳ ನಿರ್ಮಾಣವಾಗಲಿದ್ದು, ಬೆಂಗಳೂರಿಗೆ ಸಬ್ ಅರ್ಬನ್ ರೈಲು ಯೋಜನೆ ಜಾರಿ ಮಾಡಲಾಗುವುದು. ಇದಕ್ಕಾಗಿ 18,600 ಕೋಟಿ ಸಬ್ ಅರ್ಬನ್ ರೈಲು ಯೋಜನೆ ಜಾರಿ ತಯರಲಾಗುತ್ತದೆ.
ಭಾರತ್ ನೆಟ್ಗೆ 6 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುತ್ತದೆ. ಇದರೊಂದಿಗೆ 1 ಲಕ್ಷ ಗ್ರಾಮ ಪಂಚಾಯತ್ಗಳಿಗೆ ಕೇಬಲ್ ಸಂಪರ್ಕವಾಗಲಿದೆ. ದೇಶಾದ್ಯಂತ ಡೇಟಾ ಸೆಂಟರ್ ಪಾರ್ಕ್ ಸ್ಥಾಪನೆಯನ್ನು ಮಾಡಲಾಗುತ್ತದೆ. ಅಂಗನವಾಡಿಗಳಿಗೂ ಡಿಜಿಟಲ್ ಸೌಲಭ್ಯ ಒದಗಿಸಲಿದ್ದು, ಈ ಮೂಲಕ ಇಂಟರ್ನೆಟ್ ಸೌಲಭ್ಯವನ್ನು ಮಾಡಲಾಗುತ್ತದೆ.ಅಷ್ಟೆ ಅಲ್ಲ 6 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ಫೋನ್ಗಳನ್ನು ನೀಡಲಾಗುವುದು.
ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ವಿಸ್ತರಣೆಯಾಗಲಿದೆ. ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಗೆ 8 ಸಾವಿರ ಕೋಟಿ ಮೀಸಲಿಡಲಾಗುತ್ತದೆ. ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾರತ 3ನೇ ಸ್ಥಾನ ಪಡೆದುಕೊಂಡಿದೆ. ಅಪೌಷ್ಟಿಕತೆ ನಿರ್ಮೂಲನೆ 35 ಸಾವಿರ ಕೋಟಿ ಮೀಸಲಿಡಲಾಗಿದೆ. ಎಸ್ಸಿ, ಒಬಿಸಿ ಸಮುದಾಯದ ಅಭಿವೃದ್ಧಿಗೆ 85 ಸಾವಿರ ಕೋಟಿ ಮೀಸಲಿಡಲಾಗಿದ್ದು, ಎಸ್ಸಿ ಸಮುದಾಯದ ಅಭಿವದ್ಧಿಗೆ 53 ಸಾವಿರ ಕೋಟಿ ಮೀಸಲಿಡಲಾಗಿದೆ.
ಇನ್ನು ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಿದ ನಿರ್ಮಲಾ ಸೀತಾರಾಮನ್, ಪ್ರವಾಸೋದ್ಯಮ ಅಭಿವೃದ್ಧಿಗೆ 2500 ಕೋಟಿ ನಿಗದಿ ಮಾಡಲಾಗಿದೆ.ಅಷ್ಟೆ ಅಲ್ಲ ದೇಶದಲ್ಲಿರುವ 5 ಪಾರಂಪರಿಕ ತಾಣಗಳ ಅಭಿವೃದ್ಧಿಯಾಗಲಿದ್ದು, ಬುಡಕಟ್ಟು ಮ್ಯೂಸಿಯಂ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಸಂಸ್ಕೃತಿ ಇಲಾಖೆಗೆ 3,150 ಕೋಟಿ ರೂಪಾಯಿ ಮೀಸಲು ಹಾಗೂ ಆರೋಗ್ಯ ಇಲಾಖೆಗೆ 69, 000 ಕೋಟಿ ನಿಗದಿಸಲಾಗಿದೆ.
ಇನ್ನುಮುಂದೆ ನಾನ್ ಗೆಜೆಡೆಟ್ ಹುದ್ದೆಗಳಿಗೆ ಆನ್ ಲೈನ್ನಲ್ಲಿ ಪರೀಕ್ಷೆ ನಡೆಯಲಿದೆ. ರಾಷ್ಟ್ರೀಯ ನೇಮಕಾತಿಗಳಿಗೆ ಏಜೆನ್ಸಿ ಸ್ಥಾಪನೆ. 2022ರಲ್ಲಿ ಭಾರತದಲ್ಲಿ ಜಿ-20 ಶೃಂಗಸಭೆ ನಡೆಯಲಿದೆ. ಲಡಾಕ್ ಅಭಿವೃದ್ಧಿಗಾಗಿ 5,958 ಕೋಟಿ ಮೀಸಲಿಡಲಾಗಿದೆ. ಜಮ್ಮುಕಾಶ್ಮೀರ ಅಭಿವೃದ್ಧಿಗೆ ಪ್ರತ್ಯೇಕ ಯೋಜನೆ ಮಾಡಲಿದ್ದು, ಅದಕ್ಕಾಗಿ 30,757 ಕೋಟಿ ಮೀಸಲಿಡಲಾಗಿದೆ.
ಕೇಂದ್ರ ಸರ್ಕಾರದಿಂದ ಬ್ಯಾಂಕ್ಗಳ ಮೇಲೆ ತೀವ್ರ ನಿಗಾವಹಿಸಲು ನಿರ್ಧರಿಸಿದೆ. ಹಾಗಾಗಿ ಬ್ಯಾಂಕ್ಗಳಲ್ಲಿ ಠೇವಣಿದಾರರ ಹಣ ಸುಭದ್ರವಾಗಿರುತ್ತದೆ. ಹಿರಿಯ ನಾಗರಿಕರ ಅಭಿವೃದ್ಧಿಗೆ 9,500 ಕೋಟಿ ಮೀಸಲು ಹಾಗೂ ಠೇವಣಿದಾರರಿಗೆ 5 ಲಕ್ಷದವರೆಗೆ ವಿಮಾ ಯೋಜನೆಯನ್ನು ಮಾಡುವ ಅವಕಾಶವಿದೆ. ಡೆಪಾಸಿಟ್ ವಿಮೆ 1 ಲಕ್ಷದಿಂದ 5ಲಕ್ಷಕ್ಕೆ ಏರಿಕೆ ಮಾಡಲಾಗುತ್ತದೆ. ಅಷ್ಟೆ ಅಲ್ಲ IDBI ಬ್ಯಾಂಕ್ ಸಂಪೂರ್ಣ ಖಾಸಗೀಕರಣವಾಗಲಿದೆ.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ವಿಶೇಷ ಸಾಲ ಯೋಜನೆ ಜಾರಿಗೊಳಿಸುವ ಚಿಂತನೆಯನ್ನು ಮಾಡಲಾಗಿದ್ದು, ಸಾಲದ ಪ್ರಮಾಣವನ್ನು ಏರಿಕೆ ಮಾಡಲಾಗುತ್ತದೆ.
ಅನಿವಾಸಿ ಭಾರತೀಯರಿಗೆ ಬಂಡವಾಳ ಹೂಡಲು ಉತ್ತೇಜನ ನೀಡಲಾಗುತ್ತದೆ. ಕಾರ್ಪೊರೇಟ್ ಬಾಂಡ್ಗಳಲ್ಲಿ ಹೂಡಿಕೆ ಶೇ.9ರಿಂದ 15ಕ್ಕೆ ಏರಿಕೆಯಾಗಲಿದೆ. ನಗದು ಕೊರತೆ ನೀಗಿಸಲು ಪರಿಣಾಮಕಾರಿಯಾಗಿ ಕ್ರಮ ಜಾರಿ.
ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಬಂಡವಾಳ ಹಿಂತೆಗೆದುಕೊಳ್ಳಲಾಗುತ್ತದೆ. ಹಾಗೆಯೇ ಎಲ್ಐಸಿಯಲ್ಲಿ ಸರ್ಕಾರಿ ಷೇರುಗಳ ಮಾರಾಟಕ್ಕೆ ನಿರ್ಧರಿಸಲಾಗಿದ್ದು, ಎಲ್ಐಸಿಯನ್ನು ಭಾಗಶ: ಖಾಸಗೀಕರಣ ಮಾಡಲಾಗುತ್ತದೆ.
ಕೇಂದ್ರ ಸರ್ಕಾರದ ಕಾರ್ಪೊರೇಟ್ ತೆರಿಗೆ 15ಕ್ಕೆ ಇಳಿಕೆ ಮಾಡಲಾಗುವುದು ಜೊತೆಗೆ ಉತ್ಪದನಾ ವಲಯದಲ್ಲಿಯೂ ಕಾರ್ಪೊರೇಟ್ ತೆರಿಗೆ ಇಳಿಕೆಗೊಳಿಸಲಾಗುವುದು. ಆದಾಯ ತೆರಿಗೆಯಲ್ಲಿ ಭಾರೀ ಕಡಿತಗೊಳಿಸುವುದಲ್ಲದೆ ಇನ್ನು 5 ಲಕ್ಷದವರೆಗೆ ಯಾವುದೇ ತೆರಿಗೆ ಇರುವುದಿಲ್ಲ. ಈ ಮೊದಲು ಶೇ. 20ರಷ್ಟು ತೆರಿಗೆ ನೀಡಬೇಕಿತ್ತು. ಆದರೆ ಇನ್ನುಮುಂದೆ 5 ರಿಂದ 7.5 ಲಕ್ಷಕ್ಕೆ ಶೇ.10ರಷ್ಟು ತೆರಿಗೆ ಮತ್ತು 10 ಲಕ್ಷಕ್ಕಿಂತ ಮೇಲ್ಪಟ್ಟು ಶೇ.20ರಷ್ಟು ತೆರಿಗೆ ಹೇರಲಾಗುತ್ತದೆ.
ಮಧ್ಯಮ ಬಜೆಟ್ ನಿರ್ಮಿಸುವ ಬಿಲ್ಡರ್ಗಳಿಗೆ ಕೊಡುಗೆ ನೀಡಲಾಗುತ್ತಿದ್ದು, ಲಾಭಾಂಶ ಮೇಲಿನ 1 ವರ್ಷ ತೆರಿಗೆ ಮನ್ನಾ ಮಾಡಲಾಗುತ್ತಿದೆ. ಅಲ್ಲದೆ ಲಾಂಭಾಂಶದ ಮೇಲೆ ಒಂದು ವರ್ಷ ತೆರಿಗೆ ಕಟ್ಟುವಂತಿಲ್ಲ. ಈ ಮೂಲಕ ವಿವಾದದಿಂದ ವಿಶ್ವಾಸದೆಡೆಗೆ ಹೊಸ ಯೋಜನೆ ಘೋಷಣೆಯನ್ನು ಮಾಡಲಾಗಿದೆ.
5 ಕೋಟಿ ಬಂಡವಾಳ ಹೂಡಿರುವ ಕಂಪನಿಗಳಿಗೆ ಅಡಿಟಿಂಗ್ ಇಲ್ಲ ಬದಲಾಗಿ ಸ್ವಯಂಘೋಷಿತ ತೆರಿಗೆ ರಿಟರ್ನ್ಸ್ ಸಲ್ಲಿಸಿದರೆ ಸಾಕು. ಇನ್ನು ತೆರಿಗೆ ಪ್ರಕರಣಗಳ ವಿಲೇವಾರಿಗೆ ಕ್ರಾಂತಿಕಾರಕ ಕ್ರಮ ಕೈಗೊಳ್ಳಲಾಗುತ್ತದೆ. 2020 ಮಾರ್ಚ್ 30ರೊಳಗೆ ಅಸಲು ತೆರಿಗೆ ಕಟ್ಟಿದರೆ ದಂಡ ಹಾಗೂ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ. ಗೃಹ ಸಾಲದ ಮೇಲಿನ ತೆರಿಗೆಯಲ್ಲೂ ವಿನಾಯ್ತಿ ನೀಡಲಾಗುತ್ತಿದೆ. ಈ ಬಾರಿ ತೆರಿಗೆ ವ್ಯಾಜ್ಯಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ.
ಇನ್ನುಮುಂದೆ ಆಧಾರ್ ಕಾರ್ಡ್ ಆಧಾರದ ಮೇಲೆ ಪಾನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಹಾಗಾಗಿ ಇನ್ಮುಂದೆ ಪಾನ್ ಕಾರ್ಡ್ಗಾಗಿ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಿಲ್ಲ.
ಏಪ್ರಿಲ್ 1ರಿಂದ ಹೊಸ ಜಿಎಸ್ಟಿ ಸಿಸ್ಟಂ ಜಾರಿಗೊಳಿಸಲಾಗುವುದಲ್ಲದೆ ಜಿಎಸ್ಟಿಯನ್ನು ಮತ್ತಷ್ಟು ಸರಳಗೊಳಿಸಲು ತೀರ್ಮಾನಿಸಲಾಗಿದೆ.
ಇನ್ನು ಕೆಲವೊಂದು ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಲಿದೆ. ವೈದ್ಯಕೀಯ ಉಪಕರಣಗಳು, ಚಪ್ಪಲಿ, ಹಾಗೂ ಪಿಠೋಪಕರಣ ದುಬಾರಿಯಾಗಲಿವೆ.
ಇವುಗಳಲ್ಲದೇ ಕೌಶಲ್ಯ ಅಭಿವೃದ್ಧಿಗೆ 3 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗುತ್ತದೆ. ಕೈಗಾರಿಕಾ ಅನುಮತಿ ಘಟಕ ಸ್ಥಾಪನೆಯಾಗಲಿದೆ. 5 ಹೊಸ ಸ್ಮಾರ್ಟ್ ಸಿಟಿಗಳ ಘೋಷಣೆಯಾಗಲಿದೆ. ಭಾರತದಲ್ಲಿ ಹೆಚ್ಚು ಉದ್ಯೋಗಳ ಸೃಷ್ಟಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ರಾಷ್ಟ್ರೀಯ ತಾಂತ್ರಿಕ ಜವಳಿ ಘಟಕ ಸ್ಥಾಪನೆಗೆ ಒತ್ತು ನೀಡಲಾಗವುದು. ಇನ್ನು ಪ್ರತಿ ಜಿಲ್ಲೆಯೂ ರಫ್ತು ಮಾಡುವ ಹಬ್ ಆಗಿ ಪರಿವರ್ತನೆಯಾಗಲಿದೆ. ರಫ್ತು ಉತ್ತೇಜನಕ್ಕೆ ‘ನಿರ್ವಿಕ್ ‘ ಯೋಜನೆ ಘೋಷಣೆ.