ದಕ್ಷಿಣ ಕನ್ನಡ : ಮೊಬೈಲ್ ಕಳ್ಳತನ ನಡೆಸಿದ್ದಾನೆ ಎಂದು ಆರೋಪಿಸಿ ಯುವಕನೋರ್ವನಿಗೆ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನಲ್ಲಿ ಕಲ್ಲಡ್ಕದ ಪರನೀರು ಎಂಬಲ್ಲಿ ನಡೆದಿದೆ.
ಬಾಳ್ತಿಲ ಗ್ರಾಮದ ನಿವಾಸಿ ಹಲ್ಲೆಗೊಳಗಾದ ಉದಯ ಎಂಬಾತ ಮೊಬೈಲ್ ಕದ್ದ ಕಾರಣ ಅವನ ಮೇಲೆ ವೀರಕಂಭ ನಿವಾಸಿ ಶ್ರೀನಿವಾಸ ಹಾಗೂ ಕಲ್ಲಡ್ಕ ನಿವಾಸಿ ಪ್ರಶಾಂತ್ ಮತ್ತವರ ತಂಡ ಹಲ್ಲೆ ನಡೆಸಿದ್ದಾರೆ. ನಿನ್ನೆ ಸಂಜೆ ವೇಳೆಗೆ ಹಲ್ಲೆ ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದು, ಹಲ್ಲೆಗೊಳಗಾದ ಯುವಕನಿಂದ ದೂರು ದಾಖಲಿಸಿಕೊಂಡಿದ್ದಾರೆ.
ವೀಡಿಯೋದಲ್ಲಿ ಆರು ಜನರ ತಂಡ ಉಪಸ್ಥಿತರಿದ್ದು, ಅದರಲ್ಲಿ ನಾಲ್ವರು ಹಲ್ಲೆಕೋರರು ಯುವಕನ ಶರ್ಟ್ ಹರಿದು ಹಾಕಿ ಅರೆನಗ್ನಗೊಳಿಸಿ ಅಮಾನುಷವಾಗಿ ಹಲ್ಲೆ ನಡೆಸಿದ್ದು ಕಂಡು ಬಂದಿದೆ. ಅಲ್ಲದೆ ಹಲ್ಲೆ ನಡೆಸುತ್ತಲೇ ಅವಾಚ್ಯ ಶಬ್ದಗಳಿಂದ ಜೀವ ಬೆದರಿಕೆಯನ್ನೂ ಒಡ್ಡಿದ್ದಾಗಿ ಹಲ್ಲೆಗೊಳಗಾದ ಯುವಕ ಆರೋಪಿಸಿದ್ದಾನೆ. ಅಲ್ಲದೇ ಯುವಕನ ಪ್ಯಾಂಟ್ ಬಿಚ್ಚಿ ಬೆತ್ತಲೆಗೊಳಿಸಲು ಪ್ರಯತ್ನಿಸಿದ್ದು ವೀಡಿಯೋದಲ್ಲಿ ಸೆರೆಯಾಗಿದೆ. ಜಾಲತಾಣದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಜನರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.
ಅಮಾನುಷವಾಗಿ ನಡೆಸಿದ ಹಲ್ಲೆ ವೀಡಿಯೋ ಜಾಲತಾಣ ತುಂಬಾ ವೈರಲ್ ಆಗಿದ್ದು ಈ ಸಂಬಂಧ ಹಲ್ಲೆ ನಡೆಸಿದ ತಂಡದ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಬಂಟ್ವಾಳ ನಗರ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
-ಇರ್ಷಾದ್ ಕಿನ್ನಿಗೋಳಿ