ವಾಣಿಜ್ಯನಗರಿಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮೇಳ..!

0
405

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ನಡೆಯುತ್ತಿರುವ ಖಾದಿ ಮತ್ತು ಗ್ರಾಮೋದ್ಯೋಗ ಮೇಳ ಜನರ ಕಣ್ಮನ ಸೆಳೆಯುತ್ತಿದೆ. ಬಗೆ ಬಗೆಯ ಬಟ್ಟೆಗಳು ವಸ್ತುಗಳನ್ನು ನೋಡಿ ಅಲ್ಲಿಯ ಜನರು ಫಿದಾ ಆಗಿದ್ದಾರೆ.

ಪ್ರತಿನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ವ್ಯಾಣಿಜ್ಯನಗರಿ ಹುಬ್ಬಳ್ಳಿಯ ಇಂದಿರಾ ಗಾಂಧಿ ಗ್ಲಾಸ್​​ ಹೌಸ್​ ಇದೀಗ ಜನಾಕರ್ಷಣೆಯ ಕೇಂದ್ರವಾಗಿದೆ. ಇಲ್ಲಿ ಆರಂಭವಾಗಿರುವ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ಮೇಳ ಹುಬ್ಬಳ್ಳಿ ಮಂದಿಯನ್ನು ಆಕರ್ಷಿಸುತ್ತಿದೆ. ಖಾದಿ ಬಟ್ಟೆಗಳನ್ನು ಖರೀದಿಸಲು ಜನರು ಮುಗಿಬೀಳುತ್ತಿದ್ದಾರೆ. ಬೆಂಗೆರಿ, ಗರಗ, ಇಳಕಲ್, ಬನಹಟ್ಟಿ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ತಯರಾಗುವ ಖಾದಿ ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಮಂದಿ 100ಕ್ಕೂ ಅಧಿಕ ಮಳಿಗೆಳನ್ನು ಇಲ್ಲಿ ತೆರೆದಿದ್ದಾರೆ. ಖಾದಿ, ರೇಷ್ಮೆ ಹಾಗೂ ಗ್ರಾಮೋದ್ಯೋಗ ಗೃಹ ಕೈಗಾರಿಕಾ ಉತ್ಪನ್ನಗಳು, ಹೋಮ್ ಮೇಡ್ ಕಾಂಡಿಮೆಂಟ್ಸ್ ಸೇರಿ ಸಾಕಷ್ಟು ಮಳಿಗೆಗಳು ಜನರನ್ನು ಆಕರ್ಷಿಸುತ್ತಿವೆ. ಉತ್ಪಾದಕರಿಂದ ನೇರವಾಗಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಉತ್ಪನ್ನಗಳು ದೊರೆಯುವಂತೆ ಮಾಡಲು ಈ ಮೇಳ ಆಯೋಜಿಸಲಾಗಿದ್ದು, ಖಾದಿ, ಪಾಲಿ ವಸ್ತ್ರ, ಉಲನ್ ಬಟ್ಟೆಗಳ ಮೇಲೆ ಶೇಕಡ 25ರಷ್ಟು ರಿಯಾಯಿತಿ ಹಾಗೂ ರೇಷ್ಮೆ ಬಟ್ಟೆಗಳ ಮೇಲೆ ಶೇಕಡಾ 20ರಷ್ಟು ರಿಯಾಯಿತಿ ನೀಡಲಾಗಿದೆ.

ಚನ್ನಪಟ್ಟಣದ ಗೊಂಬೆಗಳಂತು ಜನರ ಕಣ್ಮನ ಸೆಳೆಯುತ್ತಿವೆ. ಜೊತೆಗೆ ಲೆದರ್ ಬೆಲ್ಟ್, ಬ್ಯಾಗ್ , ಲೇಡಿಸ್ ವೆಲೆಟ್, ಸ್ಕೂಲ್ ಬ್ಯಾಗ್,ಪಸ್೯ ಸೇರಿದಂತೆ ಗೃಹಾಲಂಕಾರಿಕ ವಸ್ತುಗಳು ಎಲ್ಲರನ್ನ ಸೆಳೆಯುತ್ತಿದೆ. ಇನ್ನು ಆಯುರ್ವೇದಿಕ್ ಉತ್ಪನ್ನಗಳು, ಜೇನು, ಹಪ್ಪಳ, ಸಂಡಿಗೆ ಉಪ್ಪಿನ ಕಾಯಿ, ಬಗೆಬಗೆಯ ಚಟ್ನಿ ಪುಡಿಗಳು, ಕರದಂಟು, ಧಾರವಾಡ ಪೇಡಾ, ಕುಂದಾ ಮೇಳಕ್ಕೆ ಬಂದವರ ಬಾಯಲ್ಲಿ ನೀರು ತರಿಸುತ್ತಿದೆ.

ಒಟ್ಟಿನಲ್ಲಿ ವಾಣಿಜ್ಯನಗರಿಯಲ್ಲಿ ನಡೆಯುತ್ತಿರುವ ಖಾದಿ ಮತ್ತು ಗ್ರಾಮೋದ್ಯೋಗ ಮೇಳಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಮೇಳಗಳು ಹೆಚ್ಚೆಚ್ಚು ನಡೆದು ಖಾದಿ ಹಾಗು ಗ್ರಾಮೋದ್ಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕೆಂಬುವುದು ಎಲ್ಲರ ಆಶಯವಾಗಿದೆ

ಸುರೇಶ ನಾಯ್ಕ, ಹುಬ್ಬಳ್ಳಿ

LEAVE A REPLY

Please enter your comment!
Please enter your name here