ಬೆಂಗಳೂರು: ಈ ಬಾರಿ ವಾಡಿಕೆಯಂತೆಯೇ ಕೇರಳಕ್ಕೆ ಮುಂಗಾರು ಪ್ರವೇಶವಾಗಿದೆ. ಇನ್ನು ಒಂದು ಅಥವಾ ಎರಡು ದಿನಗಳೊಳಗೆ ರಾಜ್ಯಕ್ಕೆ ಮಳೆ ಆಗಮನವಾಗುವ ನಿರೀಕ್ಷೆ ಇದೆ.
ಜೂ.1ರಂದು ಮುಂಗಾರು ಕೇರಳಕ್ಕೆ ಪ್ರವೇಶವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುಂಗಾರು ಪ್ರವೇಶದ ಪರಿಣಾಮ ಕಳೆದ ಎರಡು ದಿನಗಳಲ್ಲಿ ಕೇರಳದಲ್ಲಿರುವ 14 ಮಳೆ ಮಾಪನ ಕೇಂದ್ರಗಳ ಪೈಕಿ ಶೇ.70ರಷ್ಟು ಕೇಂದ್ರಗಳಲ್ಲಿ ಮಳೆ ಸುರಿದಿರುವ ಕುರಿತು ವರದಿಯಾಗಿದೆ. ಈ ನಡುವೆ ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾಗಿರುವ ಚಂಡಮಾರುತವು ಮುಂಗಾರು ಪ್ರವೇಶಕ್ಕೆ ಅನುಕೂಲಕರವಾದ ವಾತಾವರಣ ನಿರ್ಮಿಸಿದೆ ಇದರಿಂದಾಗಿ ಮುಂಗಾರು ಇನ್ನೆರಡು ದಿನಗಳಲ್ಲೇ ರಾಜ್ಯಕ್ಕೆ ಪ್ರವೇಶವಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಸೂಚನೆ
ಚಂಡಮಾರುತದ ಪರಿಣಾಮದಿಂದ ಜೂ.4ರವರೆಗೆ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ. ಜೂ.2ರಂದು ದಕ್ಷಿಣ ಕನ್ನಡ, ಹಾವೇರಿ, ಬೆಳಗಾವಿ, ಬಳ್ಳಾರಿ, ಕೊಡಗು, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ, ಜೂ.3 ಮತ್ತು 4ರಂದು ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂ. 2ರಂದು ಕರಾವಳಿಗೆ ಆರೆಂಜ್ ಅಲರ್ಟ್, ಬೆಳಗಾವಿ, ಹಾವೇರಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗಕ್ಕೆ ಎಚ್ಚರ ವಹಿಸಲು ಸೂಚಿಸಲಾಗಿದೆ.