ಮಂಗಳೂರು : ನಿನ್ನೆ ಮಧ್ಯಾಹ್ನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿಬಾಂಬ್ ಕರೆ ಮಾಡಿ ಕೆಲಕಾಲ ಆತಂಕಕ್ಕೆ ಕಾರಣನಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುದ್ರಾಡಿ ನಿವಾಸಿ ವಸಂತ (33) ಎಂದು ಗುರುತಿಸಲಾಗಿದೆ. ಕಾರ್ಕಳದ ಹೋಟೆಲ್ವೊಂದರಲ್ಲಿ ದುಡಿಯುತ್ತಿದ್ದ ಈತ ನಿನ್ನೆ ಮಧ್ಯಾಹ್ನ ತನ್ನ ಮೊಬೈಲ್ ನಿಂದ ಏರ್ಪೋರ್ಟ್ ನ ಮಾಜಿ ನಿರ್ದೇಶಕರಿಗೆ ಕರೆ ಮಾಡಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದಾಗಿ ತಿಳಿಸಿದ್ದ. ತಕ್ಷಣವೇ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು, CISF ಪಡೆಯಿಂದ ತೀವ್ರ ತಪಾಸಣೆ ನಡೆಸಿದ್ದಾರೆ. ಆದರೆ ತಪಾಸಣೆ ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಅನ್ನೋದು ತಿಳಿದುಬಂದಿತ್ತು. ನಂತರ ಬಜ್ಪೆ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ತಕ್ಷಣವೇ ಪೊಲೀಸ್ ಅಧಿಕಾರಿಗಳು ಕರೆ ಸ್ವೀಕರಿಸಿದ ಮೊಬೈಲ್ ನಂಬರ್ ನ ಲೊಕೇಶನ್ ಟ್ರ್ಯಾಕ್ ಮಾಡಿದ್ದು, ಅದರಂತೆ ಕಾರ್ಕಳ ತಾಲೂಕಿನ ಮುದ್ರಾಡಿಗೆ ತೆರಳಿಗೆ ಆರೋಪಿ ವಸಂತನನ್ನ ಬಂಧಿಸಿದ್ದಾರೆ. ಆರೋಪಿ ವಸಂತ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದು, ವಶಕ್ಕೆ ಪಡೆದಿದ್ದ ಆತನನ್ನು ತೀವ್ರ ವಿಚಾರಣೆ ಬಳಿಕ ತಡರಾತ್ರಿ ಬಂಧಿಸಲಾಗಿದೆ.
ಇದೇ ವರ್ಷದ ಜನವರಿ ತಿಂಗಳಿನಲ್ಲಿ ಆದಿತ್ಯ ರಾವ್ ಸಜೀವ ಬಾಂಬ್ ಇರಿಸಿ ದಿನವಿಡೀ ಆತಂಕಕ್ಕೆ ಕಾರಣನಾಗಿದ್ದ. ಆತನೂ ಕಾರ್ಕಳದ ಹೊಟೇಲ್ವೊಂದರಲ್ಲಿ ಬಾಂಬ್ ತಯಾರಿಸಿ ಸಂಚು ರೂಪಿಸಿದ್ದ ಅನ್ನೋದು ವಿಚಾರಣೆ ವೇಳೆ ತಿಳಿದುಬಂದಿತ್ತು. ಬಾಂಬರ್ ಆದಿತ್ಯ ರಾವ್ ಅಂದಿನ ಡಿಜಿಪಿ ನೀಲಮಣಿ ರಾಜು ಅವರ ಮುಂದೆ ಶರಣಾಗಿ ಕೃತ್ಯವನ್ನ ಒಪ್ಪಿಕೊಂಡಿದ್ದ.
-ಇರ್ಷಾದ್ ಕಿನ್ನಿಗೋಳಿ