ಮಂಗಳೂರು : ಕಳೆದ ವರ್ಷ ಡಿಸೆಂಬರ್ 19ರಂದು ನಡೆದ ಮಂಗಳೂರು ಗೋಲಿಬಾರ್ ಗೆ ಸಂಬಂಧಿಸಿದಂತೆ ಅಂತಿಮ ಮ್ಯಾಜಿಸ್ಟೀರಿಯಲ್ ತನಿಖೆಯಲ್ಲಿ 45 ಮಂದಿ ಸಾರ್ವಜನಿಕರು ಸೇರಿ ಡಿಸಿ, ಎಸಿ, ಎಸಿಪಿ ಹಾಗೂ ಮೂವರು ವೈದ್ಯರನ್ನು ವಿಚಾರಣೆ ನಡೆಸಲಾಯಿತು.
ನಗರದ ಮಿನಿ ವಿಧಾನಸೌಧದಲ್ಲಿರುವ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೀಯಲ್ ತನಿಖಾಧಿಕಾರಿ ಜಿ.ಜಗದೀಶ್ ಅವರು ಸಾರ್ವಜನಿಕರಿಂದ ಲಿಖಿತ ದಾಖಲೆ ಹಾಗೂ ಅಂದಿನ ಗೋಲಿಬಾರ್ ಗೆ ಸಂಬಂಧಿಸಿದ ವಿಡಿಯೋ ದಾಖಲೆಗಳ ಕ್ಲಿಪ್ಪಿಂಗ್ ಗಳನ್ನು ಪರಿಶೀಲನೆ ನಡೆಸಿದರು. ಅಲ್ಲದೆ ನಿರ್ಗಮಿತ ಡಿಸಿ ಸಿಂಧೂ ಬಿ.ರೂಪೇಶ್ ಅವರನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲಾಯಿತು. ಅಲ್ಲದೆ ನಿರ್ಗಮಿತ ಪೊಲೀಸ್ ಕಮಿಷನರ್ ಡಾ.ಹರ್ಷ ಪರವಾಗಿ ಎಸಿಪಿಯವರು ಉಳಿದ ದಾಖಲೆಗಳನ್ನು ವಿಚಾರಣೆಗೆ ಹಾಜರು ಪಡಿಸಿದರು.
ಇಲ್ಲಿಯವರೆಗೆ 416 ಜನರನ್ನು ಮ್ಯಾಜಿಸ್ಟೀರಿಯಲ್ ವಿಚಾರಣೆ ಮಾಡಲಾಗಿದ್ದು, ಅವೆಲ್ಲಾ ದಾಖಲೆಗಳನ್ನು,ವಿಡಿಯೋ ತುಣುಕುಗಳನ್ನು ಪರಿಶೀಲನೆ ಮಾಡಬೇಕಾಗಿದೆ. ಆ ಬಳಿಕ ಸರ್ಕಾರಕ್ಕೆ ಅಂತಿಮ ವರದಿಯನ್ನು ಸಲ್ಲಿಸಲಾಗುತ್ತದೆ ಎಂದು ತನಿಖಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
-ಇರ್ಷಾದ್ ಕಿನ್ನಿಗೋಳಿ