ಬೆಂಗಳೂರು: ಮಂಗಳೂರು ಏರ್ಪೋರ್ಟ್ನಲ್ಲಿ ಬಾಂಬ್ ಪತ್ತೆ ಪ್ರಕರಣದ ಶಂಕಿತ, ಉಡುಪಿ ಮೂಲದ ಆದಿತ್ಯರಾವ್ ಇಂದು ಹಲಸೂರು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.
ಏರ್ಪೊರ್ಟ್ನಲ್ಲಿ ಬಾಂಬ್ ಇಟ್ಟಿದ್ದು ಈತನೇ ಎಂದು ಪೊಲೀಸರಿಗೆ ಮೊದಲೇ ಅನುಮಾನವಿತ್ತು. ಹಾಗಾಗಿ ಪೊಲೀಸರು ಮಂಗಳೂರು, ಉಡುಪಿ ಸೇರಿದಂತೆ ಹಲವೆಡೆ ಶೋಧ ನಡೆಸಿದ್ದರು. ಆದರೆ ಇದೀಗ ಆತನೇ ಬೆಂಗಳೂರಿನ ಪೊಲೀಸರ ಮುಂದೆ ಶರಣಾಗಿದ್ದಾನೆ. ಅಲ್ಲದೆ ‘ನಾನೇ ಬಾಂಬ್ ಇಟ್ಟಿದ್ದು‘ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಅನುಮಾನಸ್ಪದ ಬ್ಯಾಗ್ ಪತ್ತೆಯಾಗಿತ್ತು. ಅದರಲ್ಲಿ ಸ್ಫೋಟಕ ಪತ್ತೆಯಾದ ಕೂಡಲೇ ಪೊಲೀಸರು ಸುರಕ್ಷಿತ ಕ್ರಮ ಕೈಗೊಂಡಿದ್ದರು. ನಂತರ ಅದೇ ದಿನ ಸಂಜೆ ಕೆಂಜಾರು ಮೈದಾನದಲ್ಲಿ ಅದನ್ನು ಸ್ಫೋಟ ಮಾಡಲಾಗಿತ್ತು.