ಮಂಡ್ಯ: ಮಂಡ್ಯ ಹಾಗೂ ಸಂಸದೆ ವಿಚಾರದಲ್ಲಿ ರಾಕ್ ಲೈನ್ ವೆಂಕಟೇಶ್ ಹಸ್ತಕ್ಷೇಪ ಕುರಿತು ಪವರ್ ಟಿವಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ರಾಕ್ ಲೈನ್ ವೆಂಕಟೇಶ್ ಕೂಡ ತಮ್ಮ ಮೇಲಿನ ಆರೋಪ ಸಂಬಂಧ ನಿನ್ನೆಯಷ್ಟೇ ಸ್ಪಷ್ಟನೆ ನೀಡಿದ್ರು. ಗೆದ್ದ ವರ್ಷದಲ್ಲೇ ವಿವಾದಕ್ಕೀಡಾಗಿದ್ದ ಸ್ವಾಭಿಮಾನಿ ಸಂಸದೆ ಎಲ್ಲಾ ಆರೋಪ, ವಿವಾದಗಳಿಂದ ಮುಕ್ತರಾಗುತ್ತಿರುವಂತೆ ಕಾಣ್ತಿದ್ದಾರೆ.
ಹೌದು, ಮಂಡ್ಯ ಲೋಕಸಭಾ ಕ್ಷೇತ್ರ ಹಾಗೂ ಸಂಸದರ ವಿಚಾರದಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಹಸ್ತಕ್ಷೇಪದ ಕುರಿತು ಪವರ್ ಟಿವಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಮೈಶುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ಕೊಡಿಸೋದ್ರಿಂದ ಹಿಡಿದು ಪ್ರತಿಯೊಂದರಲ್ಲೂ ರಾಕ್ ಲೈನ್ ವೆಂಕಟೇಶ್ ಇದ್ದಾರೆ. ಅದನ್ನ ನಾವು ಸಹಿಸೋದಿಲ್ಲ ಅಂತಾ ಮಂಡ್ಯದ ರೈತ ಮುಖಂಡರು ಹಾಗೂ ನಾಗರಿಕರು ಖಡಕ್ ಎಚ್ಚರಿಕೆ ನೀಡಿದ್ರು.
ಈ ಎಲ್ಲಾ ಆರೋಪಗಳ ಬಗ್ಗೆ ನಿನ್ನೆಯಷ್ಟೇ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸ್ಪಷ್ಟನೆ ನೀಡಿದ್ರು. ನಾನು ಮೈಶುಗರ್ ಮೇಲೆ ಕಣ್ಣಿಟ್ಟಿಲ್ಲ. ಮಂಡ್ಯ ವಿಚಾರದಲ್ಲಾಗಲಿ, ಸಂಸದರ ವಿಚಾರದಲ್ಲಾಗಲಿ ನನ್ನ ಹಸ್ತಕ್ಷೇಪ ಇಲ್ಲ. ಸುಮಲತಾ ಅವರ ಮೇಲಿನ ಪ್ರೀತಿ ಹಾಗೂ ಅಂಬರೀಶ್ ಅವರ ಕುಟುಂಬದ ಸದಸ್ಯನಾಗಿ ಅವರ ಜೊತೆ ಇದ್ದೇನೆ ಎಂದಿದ್ದರು.
ರಾಕ್ ಲೈನ್ ಸೇರಿದಂತೆ ಆಪ್ತರಿಂದ ಸುಮಲತಾ ದೂರ ದೂರ…!
ಇವತ್ತು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಕ್ಷೇತ್ರ ಪ್ರವಾಸ ಕೈಗೊಂಡಿದ್ರು. ಪ್ರತಿ ಸಲ ಮಂಡ್ಯಕ್ಕೆ ಬಂದಾಗಲೆಲ್ಲ, ಸುಮಲತಾ ಜೊತೆ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಅವರ ಆಪ್ತರ ದಂಡೇ ಇರ್ತಿತ್ತು. ಆದರೆ ಇಂದಿನ ಕ್ಷೇತ್ರ ಪ್ರವಾಸದ ವೇಳೆ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಅವರ ಬಹುತೇಕ ಆಪ್ತರು ಕಣ್ಮರೆಯಾಗಿದ್ರು. ಇಂದು ಮಂಡ್ಯ ಜಿಪಂ ಕಾವೇರಿ ಸಭಾಂಗಣದಲ್ಲಿ ನಡೆದ ದಿಶಾ ಸಭೆ, ಮಾರ್ಗದರ್ಶಿ ಬ್ಯಾಂಕ್ ನ ಪ್ರಗತಿ ಪರಿಶೀಲನಾ ಸಭೆಗಳಲ್ಲೆಲ್ಲ ನಿಯೋಜಿತ ಸಿಬ್ಬಂದಿ ಹೊರತುಪಡಿಸಿ ಉಳಿದ ಎಲ್ಲಾ ಆಪ್ತರೂ ದೂರ ದೂರವಾಗಿದ್ದರು. ಇದೆಲ್ಲವನ್ನೂ ನೋಡಿದ್ರೆ ಪವರ್ ಟಿವಿ ವರದಿಯಿಂದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಎಚ್ಚೆತ್ತುಕೊಂಡಂತೆ ಕಂಡ್ರು. ರಾಕ್ ಲೈನ್ ಸೇರಿದಂತೆ ಎಲ್ಲರನ್ನೂ ದೂರ ಇಟ್ಟು ಆರೋಪ ಮತ್ತು ವಿವಾದಗಳಿಂದ ಮುಕ್ತರಾಗುವ ಪ್ರಯತ್ನ ಮಾಡಿದ್ರು.
ಏನೇ ಆಗಲಿ ಸ್ವಾಭಿಮಾನದ ಹೆಸರಲ್ಲಿ ಗೆದ್ದು ಮಂಡ್ಯ ಸಂಸದೆಯಾಗಿರುವ ಸುಮಲತಾ ಕಡೆಗೂ ಪವರ್ ಟಿವಿ ವರದಿಯಿಂದ ಎಚ್ಚೆತ್ತುಕೊಂಡಿದ್ದಾರೆ. ಇದೇ ರೀತಿ ಆರೋಪ, ವಿವಾದಗಳನ್ನ ಮೈ ಮೇಲೆ ಎಳೆದುಕೊಳ್ಳದೆ, ಮಂಡ್ಯ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಆ ಮೂಲಕ ಮಂಡ್ಯ ಜನರ ಸ್ವಾಭಿಮಾನವನ್ನ ಎತ್ತಿ ಹಿಡಿಯಬೇಕಿದೆ.
ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ.