ಮಂಡ್ಯ : ಸರ್ಕಾರಿ ಶಾಲೆ, ಹಾಸ್ಟೆಲ್, ವಸತಿ ನಿಲಯ ಅಂದರೆ ಕೊಂಕು ಮಾತನಾಡುವವರೇ ಜಾಸ್ತಿ. ಆದರೆ, ಜಿಲ್ಲೆಯ ಸರ್ಕಾರಿ ವಸತಿ ಶಾಲೆಗಳ ಸಾಧನೆ ಕೇಳಿದರೆ ಅಚ್ಚರಿ ಪಡುವುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ಈ ಶಾಲೆಗಳ ಎಸ್ಎಸ್ಎಲ್ಸಿ ಫಲಿತಾಂಶ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ.
ಹೌದು, 2019-2020ನೇ ಸಾಲಿನ SSLC ಫಲಿತಾಂಶ ಜಿಲ್ಲೆಯ ಸಾಧನೆಗೆ ಸಾಕ್ಷಿಯಾಗಿದೆ. ಜಿಲ್ಲೆಯ 18 ವಸತಿ ಶಿಕ್ಷಣ ಸಂಸ್ಥೆಗಳು ಶೇಕಡ 100 ರಷ್ಟು ಫಲಿತಾಂಶವನ್ನ ತಂದುಕೊಟ್ಟಿವೆ.
ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆ, ಬಿಸಿಎಂ ವಸತಿ ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದು ರಾಜ್ಯಕ್ಕೆ ಮಾದರಿಯಾಗಿವೆ. ಸಮಾಜ ಕಲ್ಯಾಣ ಇಲಾಖೆಯ 7 ಮೊರಾರ್ಜಿ ದೇಸಾಯಿ ವಸತಿ ಶಾಲೆ, 6 ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಹಿಂದುಳಿದ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಶೇ.100 ಫಲಿತಾಂಶವನ್ನ ತಂದುಕೊಟ್ಟಿವೆ. ಶಾಲೆಯ ಶಿಕ್ಷಕರ ಪರಿಶ್ರಮ ಸಾಧನೆಗೆ ಕಾರಣವಾಗಿದೆ ಅಂತಾರೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದಲಿಂಗೇಶ್.
ಇನ್ನು ಹಿಂದುಳಿದ ಕಲ್ಯಾಣ ಇಲಾಖೆ ವಸತಿ ಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕ 614, ಜ್ಞಾನೇಶ್ ಗೌಡ ಯು.ಎಸ್.613 ಹಾಗೂ ಲಿಖಿತಾ 609 ಅಂಕ ಗಳಿಸಿದ್ದಾರೆ. ಕೆಲವು ವಸತಿ ಶಾಲೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದು ಎ ಗ್ರೇಡ್ನಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೆಲವು ವಸತಿ ಶಾಲೆಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ‘ಎ’ ಗ್ರೇಡ್ ಫಲಿತಾಂಶ ಪಡೆದುಕೊಂಡಿದ್ದಾರೆ. ನಮ್ಮ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಮಂಡ್ಯ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಮಾದರಿ ಅಂತಾರೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸೋಮಶೇಖರ್.
ಜಿಲ್ಲೆಗೆ ವಸತಿ ಶಾಲೆ ವಿದ್ಯಾರ್ಥಿಗಳು ಕೀರ್ತಿ ತಂದಿದ್ದಾರೆ. ಬಡವರ ಮಕ್ಕಳೇ ಅತಿ ಹೆಚ್ಚು ಇದ್ದು, ಅವರ ಶೈಕ್ಷಣಿಕ ಪ್ರಗತಿಗೆ ಕಾರಣರಾದ ಶಿಕ್ಷಕರಿಗೆ ಪೋಷಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಾಧನೆ ಇದೇ ರೀತಿ ಮುಂದುವರೆಯಲಿ ಅನ್ನೋದು ಎಲ್ಲರ ಆಶಯ.
-ಡಿ.ಶಶಿಕುಮಾರ್