ಮಂಡ್ಯ : ಚುನಾವಣೆ ಸಂದರ್ಭದಲ್ಲಿ ತಮ್ಮ ಕ್ಷೇತ್ರದ ಜನತೆಗೆ ಕೊಟ್ಟ ಮಾತನ್ನ ಸಚಿವ ಕೆ.ಸಿ.ನಾರಾಯಣಗೌಡ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಈಡೇರಿಸುವ ಮೂಲಕ ಜನತೆಗೆ ಬಹುದೊಡ್ಡ ಗಿಫ್ಟ್ ನೀಡಿದ್ದಾರೆ.
ಕೃಷ್ಣರಾಜಪೇಟೆ ತಾಲ್ಲೂಕಿನ ಬೂಕನಕೆರೆ ಮತ್ತು ಬರಪೀಡಿತ ಶೀಳನೆರೆ ಹೋಬಳಿಗಳ 50ಕ್ಕೂ ಹೆಚ್ಚಿನ ಕೆರೆಕಟ್ಟೆಗಳನ್ನು ಹೇಮಾವತಿ ನದಿಯ ನೀರಿನಿಂದ ಏತ ನೀರಾವರಿ ಯೋಜನೆಯ ಮೂಲಕ ತುಂಬಿಸುವ 265.29 ಕೋಟಿ ರೂಪಾಯಿಗಳ ವೆಚ್ಚದ ಮಹತ್ವಾಕಾಂಕ್ಷಿ ಯೋಜನೆಗೆ ಇಂದು ಹಸಿರು ನಿಶಾನೆ ಸಿಕ್ಕಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಗೆ ಒಪ್ಪಿಗೆ ಪಡೆಯಲಾಗಿದೆ. ಈ ಭಾಗದಲ್ಲಿ ಅಂತರ್ಜಲ ಬರಿದಾಗಿದೆ. ಮಳೆಯೂ ಸರಿಯಾಗಿಲ್ಲ. ಹೀಗಾಗಿ ಕುಡಿಯುವ ನೀರಿಗೆ ಸಮಸ್ಯೆ ಆಗಿತ್ತು. ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿರಲಿಲ್ಲ. ಇದರಿಂದ ಕಾವೇರಿ ನದಿ ಹರಿಯುವ ನಾಡಿನಲ್ಲೂ ಬರದ ಭೂಮಿ ಸೃಷ್ಟಿಯಾಗಿತ್ತು. ನೀರಿನ ಭವಣೆ ನೀಗಿಸುವುದಾಗಿ ಕಳೆದ ಚುನಾವಣೆಯಲ್ಲಿ ನಾರಾಯಣಗೌಡ ಜನತೆಗೆ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಜನತೆಗೆ ಅಂದು ಈ ಯೋಜನೆ ನೆರವೇರಿಸಿಕೊಡುವುದಾಗಿ ಮಾತುಕೊಟ್ಟಿದ್ದರು.
ಈ ಯೋಜನೆ ಬಗ್ಗೆ ಮುತುವರ್ಜಿ ವಹಿಸಿದ್ದ ಸಚಿವ ನಾರಾಯಣಗೌಡ, ಅಧಿಕಾರಿಗಳ ಜೊತೆ ಚರ್ಚಿಸಿ ರೂಪುರೇಷೆ ಸಿದ್ದಪಡಿಸಿದ್ದರು. ಅಲ್ಲದೆ ಮುಖ್ಯಮಂತ್ರಿಗಳಲ್ಲಿ ಈ ಯೋಜನೆ ಜಾರಿ ಮಾಡುವ ಸಂಬಂಧ ಮನವಿ ಮಾಡಿದ್ದರು. ಇಂದು ಸಂಪುಟ ಸಭೆಯಲ್ಲಿ ವಿಷಯ ಮಂಡಿಸಿ, ಯೋಜನೆಗೆ ಒಪ್ಪಿಗೆ ಪಡೆಯಲಾಗಿದೆ. ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡ ಮುಖ್ಯಮಂತ್ರಿಗಳನ್ನ ಕ್ಷೇತ್ರದ ಜನರ ಪರವಾಗಿ ಸಚಿವರು ಅಭಿನಂದಿಸಿದ್ದಾರೆ.
ಮೂರು ತಿಂಗಳಲ್ಲಿ ಸರ್ವೆಕಾರ್ಯ ನಡೆಸಿ, ಯೋಜನಾ ವರದಿಯನ್ನು ಸಿದ್ದಪಡಿಸಲಾಗುವುದು. ಬಳಿಕ ಅತಿ ಶೀಘ್ರದಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.
….
ಡಿ.ಶಶಿಕುಮಾರ್, ಮಂಡ್ಯ.