Home P.Special ಕೊರೋನಾಕ್ಕೂ ಕುಗ್ಗದ ಮಂಡ್ಯದ ಐದು ರೂಪಾಯಿ ಡಾಕ್ಟರ್...!

ಕೊರೋನಾಕ್ಕೂ ಕುಗ್ಗದ ಮಂಡ್ಯದ ಐದು ರೂಪಾಯಿ ಡಾಕ್ಟರ್…!

ಮಂಡ್ಯ : ಕೊರೋನಾ ಅಂದ್ರೆ ಪ್ರಪಂಚದ ಹಿರಿಯಣ್ಣನೂ ಕೂಡ ನಲುಗಿ ಹೋಗಿದ್ದಾನೆ. ಆದ್ರೆ ಸಕ್ಕರೆನಾಡು ಮಂಡ್ಯದಲ್ಲಿರುವ ವೈದ್ಯರೊಬ್ಬರು ಯಾವ ಕೊರೋನಾವನ್ನೂ ಲೆಕ್ಕಿಸದೆ ಎಂದಿನಂತೆ ತಮ್ಮ ಕಾಯಕದಲ್ಲಿ ತೊಡಗಿದ್ದಾರೆ. ನಿತ್ಯ ತಮ್ಮ ಬಳಿ ಬರೋ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡ್ತಿದ್ದಾರೆ. ಮಂಡ್ಯದ ಪ್ರತಿಷ್ಠಿತ ಐದು ರೂಪಾಯಿ ಡಾಕ್ಟ್ರು ಕುರಿತ ವಿಶೇಷ ವರದಿ ಇಲ್ಲಿದೆ ನೋಡಿ…

ಮಂಡ್ಯ ಅಂದ್ರೆ ಇಂಡಿಯಾ ಅಂತಾರೆ. ಅದೇ ರೀತಿ ಇಡೀ ಇಂಡಿಯಾಗೆ ಮಾದರಿಯಾದ ವೈದ್ಯರೊಬ್ಬರು ಸಕ್ಕರೆ ನಾಡು ಮಂಡ್ಯದಲ್ಲಿದ್ದಾರೆ. ಅವರೇ, ಜನ ಮೆಚ್ಚಿದ ಮಂಡ್ಯದ ಖ್ಯಾತ ಚರ್ಮ ರೋಗ ತಜ್ಞ ಡಾ.ಎಸ್.ಸಿ.ಶಂಕರೇಗೌಡ ಅರ್ಥಾತ್ ಐದು ರೂಪಾಯಿ ಡಾಕ್ಟರ್. ಡಾ.ಶಂಕರೇಗೌಡರನ್ನ ಜನ ಪ್ರೀತಿಯಿಂದ ಕರೆಯೋದು ಐದು ರೂಪಾಯಿ ಡಾಕ್ಟರ್ ಅಂತಾ. ಐದು ರೂಪಾಯಿ ಡಾಕ್ಟರ್ ಅಂತಾನೇ ಹೆಸರುವಾಸಿಯಾಗಿರೋ ಡಾ.ಶಂಕರೇಗೌಡರು, ತಾವು ನೀಡುವ ಚಿಕಿತ್ಸೆಗೆ ಪಡೆಯೋದು ಐದು ರೂಪಾಯಿ ಮಾತ್ರ. ಇನ್ನು ಇವರು ಬರೆದು ಕೊಡುವ ಔಷಧಿಗಳು ಕೂಡ ದುಬಾರಿಯಲ್ಲ. ಐದು ರೂಪಾಯಿಗೆ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಇವರು ಬರೆಯುವ ಔಷಧಿಗಳು ನೂರರಿಂದ ಇನ್ನೂರು ರೂಪಾಯಿಯಲ್ಲೇ ಸಿಗುತ್ತದೆ. ಒಮ್ಮೆ ಇವರ ಬಳಿ ಬಂದು ಚಿಕಿತ್ಸೆ ಪಡೆದರೆ ಸಾಕು ಮತ್ತೆ ಮತ್ತೆ ಅವರ ಬಳಿ ಅಲೆಯುವ ಅವಶ್ಯಕತೆಯೂ ಇಲ್ಲ. ಅವರು ಒಮ್ಮೆ ನೀಡೋ ಔಷಧಿಯಿಂದಲೇ ಸಂಪೂರ್ಣ ಗುಣಮುಖರಾಗಲಿದ್ದಾರೆ.

ಚಿಕಿತ್ಸಾ ಶುಲ್ಕ ಬರೀ ಐದು ರೂಪಾಯಿ, ಬರೆಯುವ ಔಷಧ ಕೂಡ ಮೂರಂಕಿ ದಾಟಲ್ಲ:

ಡಾ.ಶಂಕರೇಗೌಡರು ಕೇವಲ ಮಂಡ್ಯಕ್ಕೆ ಮಾತ್ರ ಸೀಮಿತರಾದವರಲ್ಲ. ಜಿಲ್ಲೆ, ರಾಜ್ಯ ಮಾತ್ರವಲ್ಲ, ದಕ್ಷಿಣ ಭಾರತದಲ್ಲೇ ಜನಪ್ರಿಯ ವೈದ್ಯರೆನಿಸಿಕೊಂಡಿದ್ದಾರೆ. ದೇಶದ ನಾನಾ ಭಾಗಗಳಿಂದ ಇವರ ಬಳಿ ಜನರು ಬಂದು ಚಿಕಿತ್ಸೆ ಪಡೆದು ಹೋಗ್ತಾರೆ. ಇವರ ಬಳಿ ಚಿಕಿತ್ಸೆ ಪಡೆಯೋಕೆ ನಿತ್ಯ ನೂರಾರು ಜನ ಸಾಲುಗಟ್ಟಿ ನಿಲ್ತಾರೆ. ಯಾರು ಎಂತಹ ಶ್ರೀಮಂತರೆ ಆಗಿರಲಿ ರೆಕ್ಮೆಂಡ್ ಅನ್ನೋದು ಇಲ್ಲವೇ ಇಲ್ಲ. ರಾಜಕಾರಣಿ, ಅಧಿಕಾರಿ, ಉದ್ಯಮಿ, ಬಡವ, ಬಲ್ಲಿದ ಎಲ್ಲರೂ ಇವರ ಬಳಿ ಸಮಾನರೇ. ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ, ಎಲ್ಲರಿಗೂ ಒಂದೇ ದರ. ಹೀಗಾಗಿ ಇವರ ಬಳಿ ಬರುವವರು ಹೇಳೋದು ಬಸ್ ಚಾರ್ಜ್ ತಗಲುವ ವೆಚ್ಚದಲ್ಲೇ ನಾವು ಚಿಕಿತ್ಸೆ ಪಡೆಯಬಹುದು ಅಂತಾರೆ.

ಯಾವ ರೆಕ್ಮೆಂಡ್ ಕೂಡ ನಡೆಯಲ್ಲ. ಇಲ್ಲಿ ರಾಜಕಾರಣಿ, ಅಧಿಕಾರಿ, ಉದ್ಯಮಿ, ಬಡವ, ಬಲ್ಲಿದ ಎಲ್ಲರೂ ಸಮಾನರೇ:

ಸಾಮಾನ್ಯವಾಗಿ ವೈದ್ಯರು ಅಂದ್ರೆ, ಸುಲಿಗೆ ಮಾಡೋರೆ ಹೆಚ್ಚು ಅನ್ನೋ ಮಾತಿದೆ. ಆದ್ರೆ ಅದೆಲ್ಲದಕ್ಕೂ ಅಪವಾದ ನಮ್ಮ ಮಂಡ್ಯದ ಐದು ರೂಪಾಯಿ ಡಾಕ್ಟರ್. ವೈದ್ಯರ ಚಿಕಿತ್ಸಾ ವೆಚ್ಚ ನಿರ್ಧರಿಸೋದಕ್ಕೆ ಐಎಂಎ(ಇಂಡಿಯನ್ ಮೆಡಿಕಲ್ ಅಸೋಸಿಯೇಷನ್) ಇದೆ. ಆ ದರವನ್ನೇ ಇತರೆ ವೈದ್ಯರು ನಿರ್ಧಾರ ಮಾಡ್ತಾರೆ. ಆದ್ರೆ, ಐದು ರೂಪಾಯಿ ಡಾಕ್ಟರ್ ಗೆ ಐಎಂಎಯ ಹಂಗೇ ಇಲ್ಲ. ಹಲವು ಸಲ ಐಎಂಎ ಇವರ ದರ ಹೆಚ್ಚಳಕ್ಕೆ ನೀಡಿದ ಸಾಕಷ್ಟು ಸಲಹೆಗೂ ಇವರು ಕ್ಯಾರೆ ಅಂದಿಲ್ಲ. ವೈದ್ಯರು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಹಲವಾರು ಮುಷ್ಕರ ನಡೆಸಿದ್ದಾರೆ. ಆದರೆ ಈ ಡಾಕ್ಟರ್ ಅಂತಹ ಯಾವುದೇ ಮುಷ್ಕರದಲ್ಲಿ ಪಾಲ್ಗೊಂಡಿಲ್ಲ. ಇನ್ನು ಇವರ ಬಳಿಗೆ ಯಾವೊಬ್ಬ ಮೆಡಿಕಲ್ ರೆಪ್ ಗಳೂ ಸುಳಿಯಲ್ಲ. ಬಂದರೂ ಅವರಾರಿಗೂ ಇವರ ಭೇಟಿಗೆ ಅವಕಾಶವೇ ಇಲ್ಲ. ವೈದ್ಯರಾದವರು ರೋಗಿಗಳ ಚಿಕಿತ್ಸೆ ಮಾಡಬೇಕು. ಅದನ್ನ ಮಾಡದೆ ಇರೋನು ನಿಜವಾಗಿಯೂ ವೈದ್ಯನೇ ಅಲ್ಲ. ನಾನು ಯಾರ ಹಂಗಲ್ಲೂ ಇಲ್ಲ. ಅವರ ಮಾತು ಕೇಳುವ ಅವಶ್ಯಕತೆಯೂ ಇಲ್ಲ. ನನಗೆ ನನ್ನ ವೈದ್ಯಕೀಯ ಸೇವೆಯಲ್ಲೇ ತೃಪ್ತಿ ಇದೆ. ಇದೇ ರೀತಿಯಲ್ಲಿ ನಾನು ಮುಂದುವರೆಯುತ್ತೇನೆ ಅಂತಾರೆ.

ಯಶಸ್ವಿ ರೈತರೂ ಹೌದು, ಪ್ರೀತಿಯ ಜನಪ್ರತಿನಿಧಿಯಾಗಿಯೂ ಸೈ:

ಇನ್ನು ಡಾ.ಶಂಕರೇಗೌಡರು ಬರೀ ವೈದ್ಯರಷ್ಟೇ ಅಲ್ಲ. ಯಶಸ್ವಿ ರೈತ ಕೂಡ ಹೌದು. ತಮ್ಮ ಸ್ವಗ್ರಾಮ ಮಂಡ್ಯ ತಾಲೂಕಿನ ಶಿವಳ್ಳಿಯಲ್ಲಿ ಹತ್ತಾರು ಎಕರೆ ಜಮೀನು ಹೊಂದಿರುವ ಶಂಕರೇಗೌಡರು ಪ್ರತಿ ವರ್ಷ ನೂರಾರು ಟನ್ ಕಬ್ಬು, ಮನೆಗೆ ಅಗತ್ಯವಿರುವಷ್ಟು ಭತ್ತ ಬೆಳೆಯುತ್ತಾರೆ. ಕಳೆದ ಜಿಲ್ಲಾ ಪಂಚಾಯತ್ ಅವಧಿಯಲ್ಲಿ ಕ್ಷೇತ್ರದ ಜನರ ಬಲವಂತಕ್ಕೆ ಮಣಿದು ಚುನಾವಣೆಗೆ ಕೂಡ ಸ್ಪರ್ಧೆ ಮಾಡಿದ್ರು. ಅಭೂತಪೂರ್ವ ಗೆಲುವು ಸಾಧಿಸಿದ್ದ ಡಾ.ಶಂಕರೇಗೌಡರು ಎರಡೂವರೆ ವರ್ಷಗಳ ಕಾಲ ಮಂಡ್ಯ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿಯೂ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದಾರೆ.

ಇವರ ದೈನಂದಿನ ಚಟುವಟಿಕೆ ಕೂಡ ಡಿಫರೆಂಟ್:

ಇನ್ನು ಇವರ ದೈನಂದಿನ ಚಟುವಟಿಕೆ ಕೂಡ ಡಿಫರೆಂಟ್. ಮಂಡ್ಯದ ಬಂದೀಗೌಡ ಮೂರನೇ ತಿರುವಿನಲ್ಲಿರುವ ಮನೆಯಲ್ಲೇ ಇವರ ವಾಸ. ಬೆಳಿಗ್ಗೆ ಎದ್ದ ಬಳಿಕ ಸುಮಾರು ಒಂದು ಗಂಟೆ ಕಾಲ ದಿನಪತ್ರಿಕೆಗಳ ಓದುವುದು, ಬಳಿಕ ಊರಿನಲ್ಲಿ ಎರಡು ಗಂಟೆ ಕಾಲ ಜಮೀನು ಕೆಲಸ, ಜಮೀನು ಕೆಲಸ ಮುಗಿದ ಬಳಿಕ ಸ್ಥಳಕ್ಕೆ ಬರುವ ರೋಗಿಗಳಿಗೆ ಉಚಿತ ಚಿಕಿತ್ಸೆ. ನಂತರ ಮನೆಗೆ ಬಂದು ತಿಂಡಿ ಅಥವಾ ಊಟದ ಬಳಿಕ ರಾತ್ರಿ ಎಂಟು ಗಂಟೆವರೆಗೂ ನಿರಂತರವಾಗಿ ರೋಗಿಗಳಿಗೆ ಚಿಕಿತ್ಸೆ ನೀಡ್ತಾರೆ.

ಕೊರೋನಾಕ್ಕೆ ಐದು ರೂಪಾಯಿ ಡಾಕ್ಟರ್ ಡೋಂಟ್ ಕೇರ್…!:

ಇನ್ನು ಕೊರೋನಾ ಬಂದಾಗಿನಿಂದ್ಲೂ, ಬಹುತೇಕ ಖಾಸಗಿ ಕ್ಲಿನಿಕ್ ಗಳು ಮತ್ತು ನರ್ಸಿಂಗ್ ಹೋಂಗಳಲ್ಲಿ ಜನಸಾಮಾನ್ಯರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲೂ ಕೊರೋನಾ ಮಹಾಮಾರಿಗೆ ಜಗ್ಗದೆ, ಕುಗ್ಗದೆ ನಿರಂತರವಾಗಿ ಎಂದಿನಂತೆ ಚಿಕಿತ್ಸೆ ನೀಡುತ್ತಿದ್ದಾರೆ. ಮೊದಲು ಕೆ.ಆರ್.ರಸ್ತೆಯಲ್ಲಿರುವ ಆದಿಚುಂಚನಗಿರಿ ಬಿಲ್ಡಿಂಗ್ ನಲ್ಲಿ ಕ್ಲಿನಿಕ್ ಮಾಡಿಕೊಂಡಿದ್ದರು. ಅಲ್ಲೇ ಚಿಕಿತ್ಸೆ ಕೂಡ ನೀಡ್ತಿದ್ರು. ವರ್ಷದ ಹಿಂದೆ ಇವರಿಗೆ ರಸ್ತೆ ಅಪಘಾತ ಆಗಿ, ಬ್ಲಡ್ ಕೂಡ ಕ್ಲಾಟ್ ಆಗಿತ್ತು. ಅದಕ್ಕೆ ಶಸ್ತ್ರಚಿಕಿತ್ಸೆ ಪಡೆದ ಬಳಿಕ ವಿಶ್ರಾಂತಿ ದೃಷ್ಟಿಯಿಂದ ಮನೆಯಲ್ಲೇ ಕ್ಲಿನಿಕ್ ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ.

ಜನಪ್ರತಿನಿಧಿಯಾಗಿದ್ದೆ ಎಂಬ ಹಮ್ಮು ಇಲ್ಲ, ಬೇಡಿಕೆ ವೈದ್ಯನೆಂಬ ಬಿಮ್ಮು ಇಲ್ಲ.

ಡಾ.ಶಂಕರೇಗೌಡರ ಬಳಿ ಜನಪ್ರತಿನಿಧಿಯಾಗಿದ್ದೆ ಎಂಬ ಹಮ್ಮು ಇಲ್ಲ, ಬೇಡಿಕೆ ವೈದ್ಯನೆಂಬ ಬಿಮ್ಮು ಇಲ್ಲ. ಅತ್ಯಂತ ಸರಳಾತಿ ಸರಳ ವ್ಯಕ್ತಿತ್ವದ ಡಾ.ಶಂಕರೇಗೌಡರು ಉಡುಗೆ, ತೊಡುಗೆ, ನಡೆ ನುಡಿ ಎಲ್ಲವೂ ಸರಳ. ಮೊದಲು ತಮ್ಮ ಸೇವೆಗೆ ಆದ್ಯತೆ ನೀಡುವ ಡಾ.ಶಂಕರೇಗೌಡರಿಗೆ ಯಾರಾದರೂ ಪ್ರಥಮ ಆದ್ಯತೆ ಅನ್ನೋದೇ ಇಲ್ಲ. ಎಲ್ಲರಿಗೂ ಸಮಾನ ಆದ್ಯತೆ.

ಒಟ್ಟಾರೆ, ಕೊರೋನಾ ನಡುವೆಯೂ ತಮ್ಮ ಕಾಯಕ ಮುಂದುವರಿಸಿರೋ ಡಾ.ಶಂಕರೇಗೌಡರ ಸೇವೆಗೆ ಪ್ರಶಂಸೆ ವ್ಯಕ್ತವಾಗಿದೆ. ಇವರ ಸೇವೆ ಹೀಗೇ ಮುಂದುವರೆಯಲಿ ಎಂಬುದು ಎಲ್ಲರ ಆಶಯ.

…..
ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ.

LEAVE A REPLY

Please enter your comment!
Please enter your name here

- Advertisment -

Most Popular

‘ಘಟನೆಯ ಹೊಣೆ ಹೊತ್ತು ಈಶ್ವರಪ್ಪ ರಾಜೀನಾಮೆ ನೀಡಲಿ ಪ್ರಸನ್ನ್ ಕುಮಾರ್ ಆಗ್ರಹ’

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಲ್ಲು ಗಣಿಗಾರಿಕೆ ಸ್ಫೋಟಕದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಶಿವಮೊಗ್ಗದ ಮಾಜಿ ಶಾಸಕ ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ. ಒಂದು ಲೋಡ್ ಸ್ಪೋಟಕ ವಸ್ತುಗಳು ನಗರಕ್ಕೆ ಬಂದಿದ್ದು ಹೇಗೆ. ನಗರಕ್ಕೆ ಬರುವ...

ಉಸಿರು ಕಟ್ಟಿಸುವ ವಾತಾವರಣವೇ ಪಕ್ಷ ಬಿಡಲು ಕಾರಣ: ರಾಜಣ್ಣ ಕೊರವಿ

ಹುಬ್ಬಳ್ಳಿ: ಜೆಡಿಎಸ್ ಪಕ್ಷದಲ್ಲಿನ ಉಸಿರು ‌ಕಟ್ಟಿಸಿವ ವಾತಾವರಣದಿಂದ ಬೆಸತ್ತು ನಾನು ಹಾಗೂ ನನ್ನ ಬೆಂಬಲಿಗರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದೇವೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ‌ ರಾಜಣ್ಣ ಕೊರವಿ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ...

‘ಉದ್ದವ್ ಠಾಕ್ರೆ ವಿರುದ್ಧ ಸಿಡಿದೆದ್ದ ಕರವೇ‌ ಕಾರ್ಯಕರ್ತರು’

ಹುಬ್ಬಳ್ಳಿ: ಶಿವಸೇನೆ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಸಿಎಂ ಉದ್ದವ ಠಾಕ್ರೆ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕನ್ನಡ ಪರ ಸಂಘಟನೆಗಳಲ್ಲಿ ಆಕ್ರೋಶ ಭುಗಿಲೆದ್ದಿದೆ. ಶಿವಸೇನಾ ವಿರುದ್ದ ಸಿಡಿದೆದ್ದ ಕರವೇ ಯುವಸೇನಾ ಕಾರ್ಯಕರ್ತರು ಕರವೇ...

‘ಮೃತ ಕುಟುಂಬಗಳಿಗೆ ರಾಷ್ಟ್ರಪತಿ ಸಾಂತ್ವನ’

ಶಿವಮೊಗ್ಗ: ಕಲ್ಲು ಕ್ವಾರಿ ದುರಂತಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಧಿಗ್ಬ್ರಮೆಗೊಂಡಿದ್ದಾರೆ. ಸ್ಪೋಟದಿಂದ ಜೀವ ಹಾನಿಯಾಗಿರೋದು ನೋವಿನ ಸಂಗತಿ. ಇಂತಹದೊಂದು ದುರಾದೃಷ್ಟಕರ ಘಟನೆ ನೆಡೆಯಬಾರದಿತ್ತು. ಮೃತರ ಕುಟುಂಬಗಳಿಗೆ ರಾಷ್ಟ್ರಪತಿ ಸಾಂತ್ವನ. ಘಟನೆಯಲ್ಲಿ ಗಾಯಗೊಂಡವರು ಶೀಘ್ರವೇ...

Recent Comments