ಯಾವ ಫಾರ್ಮ್​ ಹೌಸ್​ಗೂ ಕಮ್ಮಿ ಇಲ್ಲ ಈ ಘನತ್ಯಾಜ್ಯ ವಿಲೇವಾರಿ ಘಟಕ

0
195

ತುಮಕೂರು: ಒಂದೆಡೆ ಹಸಿ ಕಸವನ್ನು ಮೇಯ್ತಾ ಇರೋ ಹಸುಗಳು, ಮತ್ತೊಂದೆಡೆ ವ್ಯರ್ಥವಾಗಿ ಬಿಸಾಡಿರೋ ಮಾಂಸವನ್ನು ತಿನ್ನುತ್ತಿರೋ ಬಾತುಕೋಳಿಗಳು, ಇನ್ನೂಂದೆಡೆ ಫಸಲು ಬಂದಿರೋ ಮೆಣಸಿನಕಾಯಿ, ಬದನೆಕಾಯಿ. ಈ ದೃಶ್ಯ ಕಂಡು ಬಂದಿದ್ದು ತುಮಕೂರು ಜಿಲ್ಲೆ ಮಧುಗಿರಿ ಪುರಸಭೆಯ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ. ಮಧುಗಿರಿಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೋದ್ರೆ ಫಾರಂ ಹೌಸ್‌ಗೆ ಹೋದಂತೆ ಭಾಸವಾಗುತ್ತೆ.

ಯಾವುದಾದರೂ ಘನ ತ್ಯಾಜ್ಯ ವಿಲೇವಾರಿ ಘಟಕ ಅಂದ್ರೆ ಸಾಕು ನಮ್ಮ ಜನ  ಅದೊಂದು ಕಸದ ಗುಂಡಿ, ಒಳಗೆ ಕಾಲಿಟ್ರೆ ಗಬ್ಬು ವಾಸನೆ ಎಂದು ಭಾವಿಸುತ್ತಾರೆ. ಆದ್ರೆ, ಮಧುಗಿರಿ ಪಟ್ಟಣದ ಪುರಸಭೆ ಮಾತ್ರ ಇದಕ್ಕೆ ಹೊರತಾಗಿದೆ. ಮಧುಗಿರಿ ಪುರಸಭೆಯಲ್ಲಿ ಹಸಿ ಮಾಂಸವನ್ನ ಮಣ್ಣಲ್ಲಿ ಮುಚ್ಚದೇ ಅದನ್ನ ಬಾತುಕೋಳಿಗಳಿಗೆ ಹಾಕಲಾಗುತ್ತೆ. ಅದಕ್ಕಾಗಿ ಒಂದು ಗುಂಡಿಯನ್ನೂ ಸಹ ನಿರ್ಮಾಣ ಮಾಡಲಾಗಿದೆ. ಅಲ್ಲದೇ ತರಕಾರಿ ಮಂಡಿಗಳಿಂದ ಬರುವ ಹಸಿ ಕಸವನ್ನು ಹಸುಗಳಿಗೆ ಹಾಕಿ, ಅದರಿಂದ ಬರುವ ಆದಾಯವನ್ನೇ ನಿರ್ವಾಹಕರಿಗೆ ನೀಡಲಾಗುತ್ತದೆ.

ಇನ್ನು, ಇಲ್ಲಿ ಸಿದ್ಧವಾಗುವ ಎರಡು ರೀತಿಯ ಗೊಬ್ಬರವನ್ನು ರೈತರಿಗೆ ಮಾರಾಟ ಮಾಡಲಾಗುತ್ತಿದ್ದು, ಬಡವರಿಗೆ ಕಡಿಮೆ ದರದಲ್ಲಿ ಸಾವಯವ ಗೊಬ್ಬರ ಸಿಗುತ್ತಿದೆ. ಅಧಿಕ ಪ್ರಮಾಣದಲ್ಲಿ ಎರೆಹುಳು ಗೊಬ್ಬರವನ್ನು ತಯಾರಿಸಲಾಗುತ್ತೆ. ಈ ಎಲ್ಲಾ ಕಾರ್ಯಗಳಿಗೂ ಶಾಸಕರ, ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳ, ಸಾರ್ವಜನಿಕರ ಸಹಕಾರವೇ ಕಾರಣ ಅಂತಾರೆ ಮುಖ್ಯಾಧಿಕಾರಿಗಳು.

ಒಟ್ಟಿನಲ್ಲಿ ಮಧುಗಿರಿಯಲ್ಲಿರುವ ಈ ತ್ಯಾಜ್ಯ ವಿಲೇವಾರಿ ಘಟಕ ಕಸದ ಸಮಸ್ಯೆ ಬಗೆಹರಿಸಲು ದಿಟ್ಟ ಹೆಜ್ಜೆ‌ ಇಟ್ಟಿದೆ. ರಾಜ್ಯದ ಇತರೆ ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳಿಗೆ ಮಾದರಿಯಾಗಿದೆ.

ಹೇಮಂತ್ ಕುಮಾರ್.ಜೆ.ಎಸ್

LEAVE A REPLY

Please enter your comment!
Please enter your name here