ಡಿಕೆಶಿ ತಮ್ಮ ಮನೆ ಮೊದಲು ಶುದ್ಧಗೊಳಿಸಲಿ : ಎಂ.ಬಿ ಪಾಟೀಲ್

0
264

ವಿಜಯಪುರ : ಸಚಿವ ಡಿ.ಕೆ ಶಿವಕುಮಾರ್ ಅವರ ವಿರುದ್ಧ ಗೃಹ ಸಚಿವ ಎಂ.ಬಿ ಪಾಟೀಲ್​ ಫುಲ್ ಗರಂ ಆಗಿದ್ದಾರೆ. ಡಿಕೆಶಿ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಕ್ಷಮೆ ಕೇಳಿರೋದಕ್ಕೆ ಎಂ.ಬಿ ಪಾಟೀಲ್ ಕೆಂಡಾಮಂಡಲರಾಗಿದ್ದು, ‘ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಪಕ್ಷದ ಪರ ಕ್ಷಮೆ ಕೇಳೋಕೆ ಡಿಕೆಶಿ ಯಾರು? ಅವರೇನು ಕೆಪಿಸಿಸಿ ಅಧ್ಯಕ್ಷರೇ, ಎಐಸಿಸಿ ಅಧ್ಯಕ್ಷರೇ’ ಎಂದು ಹರಿಹಾಯ್ದಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ಒಕ್ಕಲಿಗರ ಬೆಲ್ಟ್​ನಲ್ಲಿ ಕಮ್ಮಿ ಮತ ಬಂದಿದೆ ಅಂತ ಡಿಕೆಶಿ ಕ್ಷಮೆ ಕೇಳಬೇಕು. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಇಲ್ಲ. ಅವರು ಆ ಬಗ್ಗೆ ಕ್ಷಮೆ ಕೇಳೋ ಅವಶ್ಯತೆ ಇಲ್ಲ. ತಲೆ ಕೆಡಿಸಿಕೊಳ್ಳಬೇಕಿಲ್ಲ. ನಮ್ಮ ಧರ್ಮದ ಬಗ್ಗೆ ಚರ್ಚಿಸೋಕೆ, ನಿರ್ಧಾರ ತೆಗೆದುಕೊಳ್ಳೋಕೆ ನಮ್ಮ ಸ್ವಾಮಿಗಳು, ಹಿರಿಯರು, ನಾಯಕರು ಇದ್ದಾರೆ. ಡಿಕೆಶಿ ಮೊದಲು ಅವರ ಮನೆ ಶುದ್ಧಗೊಳಿಸಿಕೊಳ್ಳಲಿ ಎಂದರು.
ಚುನಾವಣೆ ವೇಳೆಯಲ್ಲಿ ಈ ಬಗ್ಗೆ ಹೆಚ್ಚು ಮಾತನಾಡಲ್ಲ. ಎಲೆಕ್ಷನ್ ಬಳಿಕ ಈ ಬಗ್ಗೆ ಮಾತನಾಡಲೆಂದೇ ಪ್ರತ್ಯೇಕ ಸುದ್ದಿಗೋಷ್ಠಿ ಕರೆಯುತ್ತೇನೆ. ಆಗ ಮಾತನಾಡುತ್ತೇನೆ. ಡಿಕೆಶಿ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕ್ಷಮೆಯಾಚನೆ ಮಾಡುತ್ತಿರೋದು ಇದೇ ಮೊದಲಲ್ಲ. ಪದೇ ಪದೇ ಹೀಗೆ ಮಾಡುತ್ತಿದ್ದಾರೆ. ಜನ ಸುಮ್ಮನಿದ್ದಾರೆ ಇವರು ಬೆಂಕಿ ಹಚ್ಚುತ್ತಿದ್ದಾರೆ. ಎಲೆಕ್ಷನ್ ನಂತರ ಇದನ್ನು ಹೈಕಮಾಂಡ್ ಅಂಗಳಕ್ಕೆ ತೆಗೆದುಕೊಂಡು ಹೋಗುತ್ತೇನೆ. ರಾಹುಲ್ ಗಾಂಧಿ ಅವರ ಗಮನಕ್ಕೂ ತರುತ್ತೇನೆ. ಸುಮ್ಮನೆ ಅಂತು ಕೂರಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here