ಇಂದಿರಾ ಕ್ಯಾಂಟೀನ್​ನಲ್ಲಿ ಲಿಮಿಟೆಡ್ ಟೋಕನ್​: ಗ್ರಾಹಕರಿಂದ ತಕರಾರು

0
245

ಹಾವೇರಿ: ಏಲಕ್ಕಿ ನಾಡು ಹಾವೇರಿಯಲ್ಲಿ ಆರಂಭವಾಗಿರುವ ಜಿಲ್ಲೆಯ ಮೊದಲ ಇಂದಿರಾ ಕ್ಯಾಂಟೀನ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ. ಆದರೆ ಟೋಕನ್​ ಲಿಮಿಟ್​ ನಿಗದಿಪಡಿಸಿರುವುದರಿಂದ 500 ಜನರಿಗಷ್ಟೇ ಆಹಾರ ದೊರೆಯುತ್ತಿದೆ. ಆಹಾರ ಸಿಗದಿರುವ ಜನ ತಗಾದೆ ತೆಗೆಯುವುದು ಸಾಮಾನ್ಯವಾಗಿದೆ. ಪೂರೈಕೆಯಲ್ಲಿ ಷರತ್ತುಗಳಿರುವುದರಿಂದ ಕ್ಯಾಂಟೀನ್ ಸಿಬ್ಬಂದಿ ಗ್ರಾಹಕರಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಲ್ಲೊಂದಾದ ಇಂದಿರಾ ಕ್ಯಾಂಟೀನ್‌ ರಾಜ್ಯದಲ್ಲಿ ಪ್ರಾರಂಭವಾಗಿ 2 ವರ್ಷ ಕಳೆದಿವೆ. ಹಾವೇರಿ ಜಿಲ್ಲೆಗೆ ಮಂಜೂರಾದ ಮೂರು ಕ್ಯಾಂಟೀನ್‌ಗಳ ಪೈಕಿ ಮೊದಲ ಕ್ಯಾಂಟೀನ್‌ ಅನ್ನು ಹಾವೇರಿಯ ಜಿಲ್ಲಾ ಪಶು ಇಲಾಖೆ ಆವರಣದಲ್ಲಿ ಪ್ರಾರಂಭಿಸಲಾಗಿದೆ.

ಕ್ಯಾಂಟೀನ್​ಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಸರ್ಕಾರದ ಆದೇಶದ ನಿಯಮಗಳ ಪ್ರಕಾರ ನಿತ್ಯ ತಿಂಡಿ, ಊಟವನ್ನು 500 ಜನರಿಗೆ ಮಾತ್ರ ನೀಡಲು ಅವಕಾಶ ನೀಡಲಾಗಿದೆ. ಆದರೆ, ಜಿಲ್ಲಾಸ್ಪತ್ರೆ ಎದುರಿಗೆ ಕ್ಯಾಂಟೀನ್ ಇರುವುದರಿಂದ ಕ್ಯಾಂಟೀನ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಬೆಳಗ್ಗಿನಿಂದಲೇ ಟೋಕನ್‌ ಪಡೆಯಲು ಜನ ಕ್ಯೂ ನಿಲ್ಲುತ್ತಿದ್ದಾರೆ. ಕೂಪನ್ ಸಿಗದೇ ಗ್ರಾಹಕರು ಸಿಬ್ಬಂದಿಗಳ ಜೊತೆ ಪ್ರತಿನಿತ್ಯವೂ ಕಿರಿ ಕಿರಿ ಮಾಡುವುದು ಸಾಮಾನ್ಯವಾಗಿವೆ.

ಗ್ರಾಮೀಣ ಪ್ರದೇಶ ಜನರು, ಆಟೊ ಚಾಲಕರು, ಪಶು ಆಸ್ಪತ್ರೆಗೆ ಬರುವ ಜನರು ಸೇರಿದಂತೆ ನಿತ್ಯ 700ರಿಂದ 800 ಮಂದಿ ಕ್ಯಾಂಟೀನ್‌ಗೆ ಬರುತ್ತಿದ್ದಾರೆ. ನಗರದಲ್ಲಿ ಸಂತೆ ದಿನ ಗುರುವಾರವಂತೂ 1000ಕ್ಕೂ ಹೆಚ್ಚು ಮಂದಿ ಮಧ್ಯಾಹ್ನದ ಊಟಕ್ಕೆ ಆಗಮಿಸುತ್ತಾರೆ. ಆದರೆ, 500ರ ನಂತರ ಟೋಕನ್‌ ವಿತರಣೆ ಮಾಡುವಂತಿಲ್ಲ ಹೀಗಾಗಿ ಪ್ರತಿನಿತ್ಯ ಗ್ರಾಹಕರು ನಮ್ಮ ಜೊತೆ ತಕರಾರು ತೆಗೆಯುತ್ತಾರೆ ಅಂತ ಇಂದಿರಾ ಕ್ಯಾಟಿಂನ್​ನ ಪ್ರೊಡಕ್ಷನ್ ಮ್ಯಾನೇಜರ್ ಶೋಹಿಬ್ ಅಹಮದ್ ಹೇಳಿದ್ದಾರೆ.

ಇಂದಿರಾ ಕ್ಯಾಂಟೀನ್‌ನಲ್ಲಿ ನಿತ್ಯ ಅನ್ನ ಸಂಬಾರ್​, ಪಲಾವ್‌, ಚಿತ್ರಾನ್ನ, ವಾಂಗಿಬಾತ್‌, ಬಿಸಿ ಬೇಳೆಬಾತ್‌ ಕೊಡಲಾಗುತ್ತದೆ. ಇದು ದಕ್ಷಿಣ ಕರ್ನಾಟಕ ಆಹಾರ ಪದ್ಧತಿ. ಹೀಗಾಗಿ ಉತ್ತರ ಕರ್ನಾಟಕದ ಊಟ ನೀಡಿ ಎಂದು ಸ್ಥಳೀಯರು ಕೇಳುತ್ತಿದ್ದಾರೆ. ಒಟ್ಟಾರೆ ಆದಷ್ಟೂ ಬೇಗನೆ ಜಿಲ್ಲೆಯಲ್ಲಿ ಇನ್ನಷ್ಟು ಕ್ಯಾಟಿಂನ್​ಗಳು ಪ್ರಾರಂಭವಾದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ.

ವಿನಾಯಕ ಬಡಿಗೇರ, ಹಾವೇರಿ

LEAVE A REPLY

Please enter your comment!
Please enter your name here